
ಕಾರವಾರ: ಇಲ್ಲಿನ ಕೋಡಿಬಾಗದ ಸಂತೋಷಿಮಾತಾ ದೇವಸ್ಥಾನದ ಪಕ್ಕದ ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳ ನಡುವೆ ಸಿಲುಕಿದ್ದ ಸುಮಾರು 130 ಕೆಜಿ ತೂಕದ ಹಸಿರು ಕಡಲಾಮೆಯನ್ನು (ಗ್ರೀನ್ ಸೀ ಟರ್ಟಲ್) ಗುರುವಾರ ರಕ್ಷಿಸಲಾಯಿತು.
ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದ ಕಾರಣ ಕಾಂಡ್ಲ ಸಸಿಗಳ ನಡುವೆ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯನ್ನು ಮೀನುಗಾರರು ಗುರುತಿಸಿ, ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದರು. ಕೇಂದ್ರದ ತಜ್ಞರ ಜೊತೆ ಅರಣ್ಯ ಇಲಾಖೆಯ ಕೋಸ್ಟಲ್ ಮೆರೈನ್ ವಿಭಾಗದ ಸಿಬ್ಬಂದಿ ಸೇರಿ ಕಡಲಾಮೆಯನ್ನು ರಕ್ಷಿಸಿದರು.
‘ಹಸಿರು ಕಡಲಾಮೆ ಪಶ್ಚಿಮ ಕರಾವಳಿಯ ಅಳಿವೆ ಪ್ರದೇಶದಲ್ಲಿ ಕಾಣಸಿಗುವುದು ವಿರಳ. ಸಮುದ್ರದ ಉಬ್ಬರ ಇದ್ದಾಗ ಅಳಿವೆಗೆ ಬಂದ ಆಮೆ ಇಳಿತದ ಬಳಿಕ ಸಮುದ್ರಕ್ಕೆ ಸಾಗಲಾಗದೆ ಕಾಂಡ್ಲಾ ಸಸಿಗಳ ನಡುವೆ ಸಿಲುಕಿರುವ ಸಾಧ್ಯತೆ ಇದೆ’ ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಡಲಾಮೆ ನಿತ್ರಾಣಗೊಂಡ ಕಾರಣ ಅದನ್ನು ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇರಿಸಿದ್ದೇವೆ. ಕಡಲಾಮೆ ಬಗ್ಗೆ ನೈಪುಣ್ಯತೆವುಳ್ಳ ತಜ್ಞರು ಕುಂದಾಪುರದಿಂದ ಚಿಕಿತ್ಸೆ ನೀಡಲು ಬರುತ್ತಾರೆ. ಚಿಕಿತ್ಸೆ ನೀಡಿದ ಬಳಿಕ ಅದನ್ನು ಸಮುದ್ರಕ್ಕೆ ಬಿಡಲಾಗುವುದು’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ ತಿಳಿಸಿದರು.