ಕಾರವಾರ: ಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಶಿಕ್ಷಕ, ಮಕ್ಕಳ ಗಣತಿಗೆ ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿದಂತೆ ಪೊಲೀಸ್ ಕಾನ್‌ಸ್ಟೆಬಲ್‌ಗಳೂ ಜಿಲ್ಲೆಯ ಪ್ರತಿ ಮನೆ ಮನೆಗೆ ಭೇಟಿ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಖಾಕಿ ಸಮವಸ್ತ್ರ ಧರಿಸಿ ಬರುವ ಪೊಲೀಸರು ಯಾವುದೇ ಸಮೀಕ್ಷೆಗೆ ಬರುತ್ತಿಲ್ಲ. ಹೆಚ್ಚುತ್ತಿರುವ ಸೈಬರ್ ಅಪರಾಧ, ಹಲವು ಮಾರ್ಗಗಳಲ್ಲಿ ಜನರನ್ನು ವಂಚಿಸುವ ಚಟುವಟಿಕೆ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರು ಹೀಗೆ ಭೇಟಿ ನೀಡಲಿದ್ದಾರೆ.
‘ಮನೆ ಮನೆಗೆ ಪೊಲೀಸ್’ ಹೆಸರಿನಡಿ ರಾಜ್ಯ ಗೃಹ ಇಲಾಖೆ ಕೈಗೊಂಡಿರುವ ವಿನೂತನ ಕಾರ್ಯಚಟುವಟಿಕೆ ಕಳೆದ ನಾಲ್ಕು ದಿನಗಳ ಹಿಂದೆ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಈಚೆಗಷ್ಟೆ ಅಧಿಕಾರ ವಹಿಸಿಕೊಂಡ ದೀಪನ್ ಎಂ.ಎನ್ ಕೂಡ ಖುದ್ದು ಯೋಜನೆಯ ಕುರಿತು ಸಾರ್ವನಿಕರಿಗೆ ಅರಿವು ಮೂಡಿಸಲು ಮನೆ ಮನೆ ಭೇಟಿ ನಡೆಸುತ್ತಿದ್ದಾರೆ.
‘ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40 ರಿಂದ 50 ಮನೆಗಳಿಗೆ ಒಂದು ಗುಂಪು ರಚಿಸಿಕೊಂಡು ಬೀಟ್ ರಚಿಸಲಾಗಿದೆ. ಪ್ರತಿ ಬೀಟ್‌ಗೆ ಓರ್ವ ಕಾನ್‌ಸ್ಟೆಬಲ್ ನಿಯೋಜಿಸಲಾಗುತ್ತಿದೆ. ಆಯಾ ಬೀಟ್‌ಗೆ ನಿಯೋಜನೆಗೊಂಡ ಕಾನ್‌ಸ್ಟೆಬಲ್‌ಗಳು ಬೀಟ್ ವ್ಯಾಪ್ತಿಯ ಮನೆಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ದಿನವೊಂದಕ್ಕೆ ಕನಿಷ್ಠ 5 ಮನೆಗಳಿಗೆ ಭೇಟಿ ನೀಡಿ ಅಪರಾಧ ಚಟುವಟಿಕೆಗಳ ಸ್ವರೂಪದ ಕುರಿತು ಮಾಹಿತಿ ನೀಡುವ ಜತೆಗೆ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಜನರನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಬೇಕು ಎಂಬುದು ವಿನೂತನ ಯೋಜನೆಯ ಉದ್ದೇಶ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ ತಿಳಿಸಿದರು.
‘ಪ್ರತಿ ಗ್ರಾಮದಲ್ಲಿ ಹಿರಿಯರಾದ ಅಥವಾ ಸೂಕ್ತ ಎನಿಸಬಹುದಾದ ವ್ಯಕ್ತಿಯನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಿಕೊಳ್ಳಬೇಕು. ಪ್ರತಿ ತಿಂಗಳ ಮೂರನೆ ಶನಿವಾರ ಬೀಟ್ ವ್ಯಾಪ್ತಿಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಆಯಾ ಗ್ರಾಮಗಳಲ್ಲಿನ ಚಟುವಟಿಕೆಗಳ ಮಾಹಿತಿ ಪಡೆಯಬೇಕು. ಜನರನ್ನು ವಿಶ್ವಾಸಕ್ಕೆ ಪಡೆದು ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿದವರ ಮೇಲೆ ನಿಗಾ ವಹಿಸುವ ಕೆಲಸ ಮಾಡಬೇಕು’ ಎಂದರು.
‘ಜನರು ಸಣ್ಣಪುಟ್ಟ ಸಮಸ್ಯೆಗೆ ದೂರು ನೀಡಲು ಠಾಣೆಗೆ ಬರುವ ಸಮಸ್ಯೆ ತಪ್ಪಲಿದೆ. ಮನೆ ಬಾಗಿಲಿಗೆ ಭೇಟಿ ನೀಡುವ ಪೊಲೀಸರಿಗೆ ಲಿಖಿತವಾಗಿ ಸಮಸ್ಯೆಯ ದೂರು ನೀಡಬಹುದು. ಅದನ್ನು ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಅವಕಾಶವಿದೆ’ ಎಂದರು.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವ ಜೊತೆಗೆ ಅಪರಾಧ ಚಟುವಟಿಕೆಯ ಪರಿಣಾಮಕಾರಿ ನಿಯಂತ್ರಣ ಜಾಗೃತಿಗೆ ಅನುಕೂಲವಾಗಲಿದೆದೀಪನ್ ಎಂ.ಎನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪೊಲೀಸ್ ಇಲಾಖೆಯಲ್ಲಿ ಈ ಮೊದಲು ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಪ್ರತಿ 7–8 ಗ್ರಾಮಕ್ಕೆ ಒಂದು ಬೀಟ್ ರಚಿಸಿ ಅದಕ್ಕೊಬ್ಬರು ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ ಎರಡು ಬಾರಿ ಬೀಟ್ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ ಪಡೆಯುವ ಕೆಲಸವನ್ನು ಕಾನ್‌ಸ್ಟೆಬಲ್‌ಗಳು ಮಾಡುತ್ತಿದ್ದರು. ‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಠಾಣೆಯಿಂದ 45–50 ಕಿ.ಮೀ ದೂರದವರೆಗೂ ಬೀಟ್ ವ್ಯಾಪ್ತಿ ಇದೆ. ಕಾಡಿನ ನಡುವೆ 2–3 ಕಿ.ಮೀ ಅಂತರದಲ್ಲಿ ಒಂದೊಂದು ಮನೆಗಳಿರುವ ಪ್ರದೇಶಗಳಿವೆ. ಇಂತಹ ಸ್ಥಳಗಳಲ್ಲಿ ಪದೇ ಪದೇ ಮನೆ ಮನೆಗೆ ಭೇಟಿ ನೀಡುವುದು ಕಷ್ಟ. ಭದ್ರತೆ ಕೆಲಸಕ್ಕೆ ಅನ್ಯ ಜಿಲ್ಲೆಗಳಿಗೂ ನಿಯೋಜನೆ ಹೆಚ್ಚುತ್ತಿರುವುದರಿಂದ ಒತ್ತಡದಲ್ಲೇ ಬೀಟ್ ಕರ್ತವ್ಯ ನಿಭಾಯಿಸಬೇಕಾಗುತ್ತಿದೆ’ ಎಂದು ಹಲವು ಪೊಲೀಸ್ ಕಾನ್‌ಸ್ಟೆಬಲ್‌ಗಳು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.