ADVERTISEMENT

ಕಾರವಾರ | ಅಭಿವೃದ್ಧಿ ಕೆಲಸ ಪ್ರೇರಣದಾಯಿ ಆಗಿರಲಿ: ಡಾ.ದಿಲೀಷ್ ಶಶಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:32 IST
Last Updated 5 ಫೆಬ್ರುವರಿ 2026, 6:32 IST
ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪೂರ್ಣತಾ ಅಭಿಯಾನ 2.0ದ ಲಾಂಛನ ಮತ್ತು ಭಿತ್ತಿಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಸಶಿ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿಯ ವಿವಿಧ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು
ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪೂರ್ಣತಾ ಅಭಿಯಾನ 2.0ದ ಲಾಂಛನ ಮತ್ತು ಭಿತ್ತಿಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಸಶಿ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿಯ ವಿವಿಧ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು   

ಕಾರವಾರ: ‘ಹಿಂದುಳಿದಿರುವ ಜೊಯಿಡಾ ಮತ್ತು ಮುಂಡಗೋಡ ತಾಲ್ಲೂಕಿನಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಗುರಿಯನ್ನು ತಲುಪುವತ್ತ ಅಧಿಕಾರಿಗಳು ಗಮನಹರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗುವ ಸಂಪೂರ್ಣತಾ ಅಭಿಯಾನ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನೀತಿ ಆಯೋಗದಿಂದ ಗುರುತಿಸಲ್ಪಟ್ಟಿರುವ ಈ ಎರಡು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ನಡೆಯುವ ಅಭಿವೃದ್ದಿ ಕೆಲಸಗಳು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಪ್ರೇರಣದಾಯಿ ಆಗಿರಬೇಕು. ಆಯೋಗ ನಿಗದಿಪಡಿಸಿದ ಮಾನದಂಡಗಳ ಹೊರತಾಗಿಯೂ ಅಭಿವೃದ್ಧಿಗೆ ಪೂರಕ ಹೊಸ ಯೋಜನೆಗಳಿದ್ದರೆ ಸಲಹೆ ನೀಡಬಹುದು. ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಜನಪ್ರತಿನಿಧಿಗಳ ಸಹಕಾರ ಪಡೆದು ಒಪ್ಪಿಗೆ ಪಡೆಯಲು ಪ್ರಯತ್ನಿಸಲಾಗುತ್ತದೆ’ ಎಂದರು.

ADVERTISEMENT

‘ಹಿಂದುಳಿದ ತಾಲ್ಲೂಕಿನ ಹಣೆಪಟ್ಟಿ ಹೊತ್ತಿದ್ದ ತಾಲ್ಲೂಕಿನಲ್ಲಿ ಜೀವನಮಟ್ಟವನ್ನು ಉತ್ತಮಪಡಿಸುವ ಉದ್ದೇಶವನ್ನು ಅಭಿಯಾನ ಹೊಂದಿದೆ.  ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ನಿಗದಿತ ಅವಧಿಯ ಒಳಗೆ ಪರಿಪೂರ್ಣಗೊಳಿಸಲು ಪ್ರಯತ್ನಿಸಬೇಕು. ಅನಗತ್ಯ ವಿಳಂಬಕ್ಕೆ ಆಸ್ಪದ ನೀಡಬಾರದು’ ಎಂದರು.

ಮುಂಡಗೋಡ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ದಾಸನಕೊಪ್ಪ ಮಾತನಾಡಿ, ‘ಮುಂಡಗೋಡ ತಾಲ್ಲೂಕಿನಲ್ಲಿ ಮೊಲದ ಹಂತದ ಅಭಿಯಾನದಲ್ಲಿ ನೀಡಿದ್ದ ಸೂಚಕಗಳ ಗುರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಎರಡನೇ ಹಂತದ ಸಂಪೂರ್ಣತಾ ಅಭಿಯಾನ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಎಂ.ಎಸ್.ಅಲ್ಲಾಭಕ್ಷ್, ಪ್ರಕಾಶ್ ಹಾಲಮ್ಮನವರ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದ್‌ಸಾ ಹಬೀಬ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.