
ಕಾರವಾರ: ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಸರಕು ಸಾಗಣೆ ಮಾಡುತ್ತಿರುವ ಭಾರಿ ಗಾತ್ರದ ವಾಹನಗಳು ಕಾರವಾರ–ಇಳಕಲ್ ರಾಜ್ಯ ಹೆದ್ದಾರಿ–6ರಲ್ಲಿ ಪದೇ ಪದೇ ಸಿಲುಕಿಕೊಳ್ಳುತ್ತಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಹೆಚ್ಚುತ್ತಿದೆ.
ಕಾರವಾರದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ ಸಂಪರ್ಕಿಸುವ ಮಾರ್ಗ ಇದಾಗಿದ್ದರೂ, ಕಾರವಾರ ಮಾರ್ಗವಾಗಿ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸರಕು ಸಾಗಣೆ ಪೂರೈಕೆಗೆ, ತಾಲ್ಲೂಕಿನ ಮಲ್ಲಾಪುರ, ಇತರ ಗ್ರಾಮೀಣ ಪ್ರದೇಶಕ್ಕೆ ವಾಹನ ಸಂಚಾರ ಹೆಚ್ಚಿದೆ.
ಸತತ ಮಳೆ, ನಿರ್ವಹಣೆ ಕೊರತೆಯಿಂದ ಹದಗೆಟ್ಟಿರುವ ಮಾರ್ಗವು ಕೆರವಡಿ, ಕಡಿಯೆ, ದೇವಳಮಕ್ಕಿ ಸೇರಿದಂತೆ ವಿವಿಧೆಡೆ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿದೆ. ನಗರ ವ್ಯಾಪ್ತಿಯಲ್ಲೂ ಇದೇ ಮಾರ್ಗ ಹದಗೆಟ್ಟಿದ್ದು ರಸ್ತೆ ದುರಸ್ತಿಗೆ ಒತ್ತಾಯಿಸಿ ಈಚೆಗೆ ಸಾಲುಸಾಲು ಪ್ರತಿಭಟನೆಗಳು ನಡೆದಿದ್ದವು.
‘ಕೈಗಾ ಅಣು ಸ್ಥಾವರದ ವಿಸ್ತರಣೆ ಕಾಮಗಾರಿಗಳು ಆರಂಭಗೊಂಡಿರುವ ಕಾರಣದಿಂದ ಅಲ್ಲಿಗೆ ಕೆಲ ತಿಂಗಳುಗಳಿಂದ ಸರಕು ಪೂರೈಕೆ ಆಗುತ್ತಿದೆ. ನಿತ್ಯವೂ ಹತ್ತಾರು ಭಾರಿ ಗಾತ್ರದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಭಾರಿ ಗಾತ್ರದ ವಾಹನಗಳು ಸಾಗಬಲ್ಲ ಸಾಮರ್ಥ್ಯದ ರಸ್ತೆ ಅಲ್ಲದಿದ್ದರೂ ನಿರಂತರ ವಾಹನ ಸಂಚಾರದಿಂದ ರಸ್ತೆ ಹದಗೆಟ್ಟಿದೆ’ ಎನ್ನುತ್ತಾರೆ ಕೆರವಡಿಯ ಸುರೇಶ ನಾಯ್ಕ.
‘ಕಡಿಯೆ, ಕೆರವಡಿ ಸೇರಿದಂತೆ ರಾಜ್ಯ ಹೆದ್ದಾರಿಯಲ್ಲಿ ಬಿದ್ದ ಹೊಂಡಗಳಲ್ಲೇ ಭಾರದ ಸರಕು ಹೊತ್ತ ಟ್ರಕ್‌ಗಳು ಸಾಗುತ್ತಿವೆ. ಇದರಿಂದ ರಸ್ತೆಯ ಡಾಂಬರು ಕಿತ್ತು, ಕೆಸರು ಗದ್ದೆಯಂತಾಗಿದೆ. ಇದೇ ಜಾಗದಲ್ಲಿ ಟ್ರಕ್‌ಗಳ ಚಕ್ರಗಳು ಸಿಲುಕಿ ನಿಲ್ಲುತ್ತಿವೆ. 16–20 ಚಕ್ರದ ವಾಹನಗಳು ಇವುಗಳಾಗಿದ್ದು ಮೇಲೆತ್ತಲು ದಿನಗಟ್ಟಲೆ ಕಾಯಬೇಕಾಗುತ್ತಿದೆ. ಇದರಿಂದ ದಿನಗಟ್ಟಲೆ ಸಂಚಾರ ವ್ಯತ್ಯಯ ಈ ಮಾರ್ಗದಲ್ಲಿ ಉಂಟಾಗುತ್ತಿದೆ’ ಎಂದು ಮಲ್ಲಾಪುರದ ರಾಜೇಶ ಗಾಂವಕಾರ ಹೇಳಿದರು.
ಕಾರವಾರ–ಕೈಗಾ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಸದ್ಯದಲ್ಲೇ ಕೆಲಸ ಆರಂಭವಾಗಲಿದೆರಾಮು ಅರ್ಗೇಕರ್ ಲೋಕೋಪಯೋಗಿ ಇಲಾಖೆ ಎಇಇ
ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಈ ಬಗ್ಗೆ ಕರಡು ಅಧಿಸೂಚನೆಯನ್ನೂ ಕೆಲ ವರ್ಷಗಳ ಹಿಂದೆ ಹೊರಡಿಸಲಾಗಿತ್ತು. ಕೈಗಾ ಮಾರ್ಗವಾಗಿ ಈ ರಸ್ತೆ ಸಾಗುವುದರ ಜೊತೆಗೆ ಕಾಳಿ ಹುಲಿ ಸಂರಕ್ಷಿತಾರಣ್ಯದ ಬಫರ್ ಝೋನ್‌ನಲ್ಲಿ ರಸ್ತೆ ವಿಸ್ತರಣೆ ಕೈಗೊಳ್ಳಬೇಕಿರುವ ಕಾರಣದಿಂದ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಆದರೆ ಬಸವರಾಜ ಬೊಮ್ಮಾಯಿ ಹಾವೇರಿ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಈ ಮಾರ್ಗವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.