ಕಾರವಾರ: ಸಂಪೂರ್ಣ ಹದಗೆಟ್ಟಿರುವ ಕಾರವಾರ–ಕೈಗಾ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಸಾರ್ವಜನಿಕರು ಶನಿವಾರ ರಸ್ತೆ ತಡೆ ನಡೆಸುವ ಜೊತೆಗೆ ನಗರಸಭೆ ಕಚೇರಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
ಹಬ್ಬುವಾಡಾದ ಹರಿದೇವ ನಗರ ಕ್ರಾಸ್ ಸಮೀಪದಲ್ಲಿ ಕೆಲ ಹೊತ್ತು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ ಜನರು ಬಳಿಕ ಅಲ್ಲಿಂದ ಎರಡು ಕಿ.ಮೀ ದೂರದವರೆಗೆ ಪಾದಯಾತ್ರೆ ನಡೆಸಿದರು. ನಗರಸಭೆ ಕಚೇರಿ ಎದುರು ಸೇರಿದ ಹತ್ತಾರು ಪ್ರತಿಭಟನಾಕಾರರು ರಸ್ತೆಯನ್ನು ತುರ್ತಾಗಿ ಸರಿಪಡಿಸಬೇಕು ಇಲ್ಲವೇ ಹೊಸದಾಗಿ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ‘ನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಯೇ ಹದಗೆಟ್ಟಿದೆ. ರೈಲ್ವೆ ನಿಲ್ದಾಣ, ಗ್ರಾಮೀಣ ಪ್ರದೇಶ ಸಂಪರ್ಕಿಸುವ ಮಾರ್ಗದಲ್ಲಿ ಹತ್ತಾರು ಅಪಘಾತಗಳು ಹೊಂಡಗಳಿಂದಾಗಿ ಸಂಭವಿಸುತ್ತಿವೆ. ರಸ್ತೆ ದುಸ್ಥಿತಿಯಿಂದ ಆಟೊಗಳು ಪದೇ ಪದೇ ಹಾಳಾಗುತ್ತಿದ್ದು, ಚಾಲಕರ ಸ್ಥಿತಿ ಚಿಂತಾಜನಕವಾಗಿದೆ’ ಎಂದರು.
‘ಮಳೆಗಾಲ ಮುಗಿಯುತ್ತಿದ್ದಂತೆಯೇ ರಸ್ತೆ ಸರಿಪಡಿಸಲು ಜನರು ಪ್ರತಿಭಟಿಸಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಹಬ್ಬುವಾಡಾದಿಂದ ಕೈಗಾವರೆಗೆ ದುಸ್ಥಿತಿಯಲ್ಲಿರುವ ರಸ್ತೆ ಡಾಂಬರೀಕರಣ ಮಾಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದರು.
‘ರಾಜ್ಯ ಹೆದ್ದಾರಿಯಾಗಿರುವ ಕಾರಣದಿಂದ ರಸ್ತೆ ನಿರ್ಮಿಸುವ ಜವಾಬ್ದಾರಿ ಲೋಕೋಪಯೋಗಿ ಇಲಾಖೆಗೆ ಸೇರಿದ್ದು’ ಎಂದು ಪೌರಾಯುಕ್ತ ಜಗದೀಶ ಹುಲಗೆಜ್ಜಿ ಹೇಳಿದರು. ಈ ವೇಳೆ ಪ್ರತಿಭಟನಾಕಾರರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಲೋಕೋಪಯೋಗಿ ಇಲಾಖೆ ಕಚೇರಿ ಪ್ರತಿಭಟನಾಕಾರರು ಸೇರುತ್ತಿದ್ದಂತೆ ಸ್ಥಳಕ್ಕೆ ಬಂದ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಲ್ಲಿಕಾರ್ಜುನ್, ‘ರಸ್ತೆ ನಿರ್ಮಾಣಕ್ಕೆ ₹16 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಲಾಗುವುದು. ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸಲಾಗುವುದು’ ಎಂದರು.
ಶಂಕರ ಗುನಗಿ, ಶ್ರೀಧರ ನಾಯ್ಕ, ಶಬ್ಬೀರ್ ಶೇಖ್, ರೂಪೇಶ ಗುನಗಿ ಇದ್ದರು.