ADVERTISEMENT

ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ: ನದಿ ತಿರುವು ಯೋಜನೆ ವಿರುದ್ಧ ನಿರ್ಣಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 7:11 IST
Last Updated 3 ಮಾರ್ಚ್ 2026, 7:11 IST
ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗ್ರಾಹಕ ಸಹಾಯವಾಣಿ ಫಲಕ ಅನಾವರಣಗೊಳಿಸಿದರು. ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು
ಕಾರವಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಗ್ರಾಹಕ ಸಹಾಯವಾಣಿ ಫಲಕ ಅನಾವರಣಗೊಳಿಸಿದರು. ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು   

ಕಾರವಾರ: ಉದ್ದೇಶಿತ ಬೇಡ್ತಿ–ವರದಾ, ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ವಿರುದ್ಧ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಯೋಜನೆ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಸೂಚನೆ ನೀಡಿದರು. ಸಭೆಯಲ್ಲಿ ಇದಕ್ಕೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಯೋಜನೆ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಠರಾವು ಮಾಡಲಾಯಿತು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯ ಹೊರಗಿನಿಂದ ಔಷಧ ಪಡೆಯುವಂತೆ ಚೀಟಿಗಳನ್ನು ವಿತರಿಸಬಾರದು, ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇದ್ದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಮೂಲಕ ಅಗತ್ಯವಿರುವಷ್ಟು ಔಷಧಗಳನ್ನು ಖರೀದಿಸಿ, ಉಚಿತವಾಗಿ ವಿತರಣೆ ಮಾಡಬೇಕು’ ಎಂದು ಸಚಿವ ಮಂಕಾಳ ವೈದ್ಯ ಸೂಚಿಸಿದರು.

ADVERTISEMENT

ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಪಟ್ಟಿ ಸಿದ್ಧಪಡಿಸಿರುವ ಶಿಕ್ಷಣ ಇಲಾಖೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ವಿಲೀನ ಪ್ರಕ್ರಿಯೆಗೆ ಜಿಲ್ಲೆಯ ಶಾಲೆಗಳ ಪಟ್ಟಿ ಶಿಫಾರಸ್ಸು ಮಾಡದಿರಿ ಎಂದರು.

‘ಗ್ರಾಮೀಣ ಮಾರ್ಗಗಳಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಗೆ ಹೊಸದಾಗಿ ಮಂಜೂರಾದ 104 ಬಸ್‌ಗಳನ್ನು ಬೇಡಿಕೆ ಇರುವ ಮಾರ್ಗಗಳ ಜೊತೆಗೆ, ಈ ಹಿಂದೆ ಬಸ್ ಸಂಚರಿಸುತ್ತಿದ್ದ ಎಲ್ಲ ಮಾರ್ಗಗಳಿಗೂ ಓಡಿಸುವಂತೆ ವ್ಯವಸ್ಥೆಯಾಗಬೇಕು’ ಎಂದು ಸೂಚಿಸಿದರು.

‘ಗುಜರಿ ಬಸ್‌ಗಳು ಓಡಾಡುತ್ತಿರುವ ದೂರು ಹೆಚ್ಚಿದೆ. ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಾರವಾರ, ಅಂಕೋಲಾ ಬಸ್ ಘಟಕಗಳು ದುರ್ಬಲವಾಗಿವೆ’ ಎಂದು ಶಾಸಕ ಸತೀಶ ಸೈಲ್ ಆಕ್ಷೇಪಿಸಿದರು.

‘ಮಳೆಗಾಲದಲ್ಲಿ ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಳಾಗುವುದನ್ನು ತಪ್ಪಿಸಲು 24 ಗಂಟೆಯೊಳಗೆ ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ಕಂಬಗಳ ಜೋಡಣೆ ಮಾಡುವ ರೀತಿಯಲ್ಲಿ ಎಲ್ಲಾ ಅಗತ್ಯ ಸಿದ್ದತೆ, ಉಪಕರಣಗಳ ಲಭ್ಯತೆ ಮತ್ತು ಸಿಬ್ಬಂದಿ ನಿಯೋಜಿಸಬೇಕು’ ಎಂದು ಸಚಿವರು ಸೂಚಿಸಿದರು.

ಜಲಪಾತಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಜೀವಹಾನಿಯಾಗುತ್ತಿದ್ದು, ಈ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳು, ಮುನ್ನೆಚ್ಚರಿಕ ಸೂಚನಾ ಫಲಕಗಳು ಮತ್ತು ಗೃಹರಕ್ಷಕರನ್ನು ನಿಯೋಜಿಸಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಇದ್ದರು.

ಹೆದ್ದಾರಿ ಪ್ರತಿಭಟನೆ ಎಚ್ಚರಿಕೆ

ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ವಿರುದ್ಧ ಧ್ವನಿ ಎತ್ತಿದ ಶಾಸಕ ಭೀಮಣ್ಣ ನಾಯ್ಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ಪಡೆದರು. ‘ಕೆಲಸ ಮಾಡಲಾಗದಿದ್ದರೂ 8 ಕಿ.ಮೀ ರಸ್ತೆ ಅಗೆದು ಹಾಕಲಾಗಿದೆ. ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಬಿಸಿಲು ಬಿದ್ದರೆ ಧೂಳು ಮಳೆ ಬಂದರೆ ಕೆಸರುಗದ್ದೆಯಂತಾಗುತ್ತಿದೆ. ವಾಹನ ಸವಾರರು ಸಂಚರಿಸಲಾಗದೆ ತೊಂದರೆ ಅನುಭವಿಸಿದ್ದಾರೆ. ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸದಿದ್ದರೆ ಜನರೊಂದಿಗೆ ಸೇರಿ ಖುದ್ದು ಪ್ರತಿಭಟನೆ ನಡೆಸುವೆ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಜಿಪಿಎಸ್ ತಪ್ಪದಂತೆ ಎಚ್ಚರವಹಿಸಿ

‘ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಜಮೀನುಗಳಿಗೆ ಜಿಪಿಎಸ್ ಬಿಟ್ಟು ಹೋಗಿದ್ದರೆ ತಕ್ಷಣವೇ ಜಿಪಿಎಸ್ ಮಾಡಿಸುವ ಕೆಲಸವಾಗಬೇಕು. ಜಂಟಿ ಸಮೀಕ್ಷೆ ವೇಳೆ ಅರಣ್ಯವಾಸಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಅರಣ್ಯವಾಸಿಗಳಿಗೆ ತೊಂದರೆ ನೀಡುವ ಕೆಲಸ ನಡೆಯಬಾರದು’ ಎಂದು ಸಚಿವ ಮಂಕಾಳ ವೈದ್ಯ ಸೂಚನೆ ನೀಡಿದರು. ‘ನೈಜ ಅರಣ್ಯವಾಸಿಗಳ ಪೈಕಿ ಹಲವರ ಜಮೀನುಗಳಿಗೆ ಜಿಪಿಎಸ್ ಆಗದೆ ತೊಂದರೆ ಆಗುತ್ತಿರುವ ದೂರುಗಳಿವೆ. ಇದನ್ನು ಸರಿಪಡಿಸಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.