ADVERTISEMENT

ಕಾರವಾರ: ಶಾಸಕರ ಮಾದರಿ ಶಾಲೆಗಿಲ್ಲ ಸ್ವಂತ ಸೂರು

2 ವರ್ಷ ಕಳೆದರೂ ಮುಗಿಯದ ಕಾಮಗಾರಿ: ಸೋರುವ ಕೊಠಡಿಯೊಳಗೆ ಪಾಠ

ಗಣಪತಿ ಹೆಗಡೆ
Published 19 ಜುಲೈ 2025, 7:13 IST
Last Updated 19 ಜುಲೈ 2025, 7:13 IST
ನಿರ್ಮಾಣ ಹಂತದಲ್ಲಿರುವ ಕಾರವಾರದ ಶಾಸಕರ ಸರ್ಕಾರಿ ಮಾದರಿ ಶಾಲೆ ಕಟ್ಟಡ.
ನಿರ್ಮಾಣ ಹಂತದಲ್ಲಿರುವ ಕಾರವಾರದ ಶಾಸಕರ ಸರ್ಕಾರಿ ಮಾದರಿ ಶಾಲೆ ಕಟ್ಟಡ.   

ಕಾರವಾರ: ಮಳೆ ನೀರು ಸೋರದಂತೆ ಕೊಠಡಿಯೊಳಗೆ ಬಕೆಟ್ ಇಟ್ಟುಕೊಂಡು ಪಾಠ ಕೇಳಬೇಕು. ಪ್ರೌಢಶಾಲೆ ವಿದ್ಯಾರ್ಥಿಗಳು ಊಟಕ್ಕೆ ಬರುವ ಮುನ್ನ ಅವರಿಗೆ ಜಾಗ ಬಿಟ್ಟುಕೊಡಲು ಗಡಿಬಿಡಿಯಲ್ಲಿ ಊಟ ಮುಗಿಸಿ ಬರಬೇಕು.

ಇದು ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 93 ವಿದ್ಯಾರ್ಥಿಗಳ ನಿತ್ಯದ ಗೋಳು. ಅಂದಹಾಗೇ ಅವರು ಕಲಿಯುತ್ತಿರುವುದು ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿ. ಕಳೆದ ಎರಡು ವರ್ಷಗಳಿಂದಲೂ ಈ ಸಮಸ್ಯೆ ಅವರನ್ನು ಕಾಡುತ್ತಲೇ ಇದೆ.

2023ರಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಶಾಲೆಯನ್ನು ಪಕ್ಕದ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಿದ ಬಳಿಕ ಇಂತಹ ಸಾಲು ಸಾಲು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. 2 ವರ್ಷ ಕಳೆದರೂ ಶಾಲೆಯ ಹೊಸ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳ್ಳಬಹುದು ಎಂದು ವಿದ್ಯಾರ್ಥಿಗಳು, ಪಾಲಕರು ನಿರೀಕ್ಷಿಸುತ್ತಲೇ ಇದ್ದಾರೆ.

ADVERTISEMENT

‘ಎರಡು ಮಳೆಗಾಲ ಮುಗಿದು ಮೂರನೆ ಮಳೆಗಾಲ ಬಂದರೂ ಕೊಠಡಿಗಳ ನಿರ್ಮಾಣ ಕೆಲಸ ಪೂರ್ಣಗೊಳಿಸಿಲ್ಲ. ಜಿಲ್ಲಾಧಿಕಾರಿ ಕಚೇರಿ, ಶಿಕ್ಷಣ ಇಲಾಖೆಯ ಜಿಲ್ಲಾ ಕಚೇರಿಗಳು ಸಮೀಪದಲ್ಲಿದ್ದರೂ ಶಾಲೆಯ ವಿದ್ಯಾರ್ಥಿಗಳ ಗೋಳು ಗಮನಿಸಿಲ್ಲ’ ಎಂದು ಪಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲೆಯ ಕಟ್ಟಡ ತೆರವುಗೊಳಿಸಿದ ಬಳಿಕ ಪಕ್ಕದಲ್ಲಿನ ಸರ್ಕಾರಿ ಪ್ರೌಢಶಾಲೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಶಾಲೆ ನಡೆಸಲು ಅವಕಾಶ ನೀಡಿದ್ದಾರೆ. ಇಲ್ಲಿನ 4 ಕೊಠಡಿಗಳನ್ನು ತರಗತಿ ನಡೆಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವುಗಳ ಪೈಕಿ ಮೊದಲ ಮಹಡಿಯ ಕೊಠಡಿಯು ಸೋರುತ್ತಿದೆ. ಅಲ್ಲಿ ಮಳೆನೀರು ನೆಲಕ್ಕೆ ಬೀಳದಂತೆ ಬಕೆಟ್ ಇಡಬೇಕಾಗುತ್ತಿದೆ. ಕೊಠಡಿಗಳ ಹೊರ ಆವರಣದ ಚಾವಣಿ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ಸೋರಿಕೆಯಾಗಿ ಆವರಣದ ತುಂಬ ನೀರು ತುಂಬಿಕೊಳ್ಳುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಪರಕಾಳಿ ದೂರಿದರು.

‘ಶಾಲೆ, ಪ್ರೌಢಶಾಲೆಗೆ ಸೇರಿ ಬಿಸಿಯೂಟಕ್ಕೆ ಒಂದೇ ಕೊಠಡಿ ಇದೆ. ಪ್ರಾಥಮಿಕ ಶಾಲೆಯ ತರಗತಿ ಬಿಟ್ಟ ಅರ್ಧ ಗಂಟೆಯೊಳಗೆ ಪ್ರೌಢಶಾಲೆಯ ಮಕ್ಕಳು ಊಟಕ್ಕೆ ಬರುತ್ತಾರೆ. ಅವರಿಗೆ ಜಾಗ ಬಿಟ್ಟುಕೊಡಲು ವಿದ್ಯಾರ್ಥಿಗಳು ಗಡಿಬಿಡಿಯಲ್ಲಿ ಊಟ ಮುಗಿಸಿ ಬರಬೇಕಾಗುತ್ತಿದೆ’ ಎಂದು ಸಮಸ್ಯೆ ವಿವರಿಸಿದರು.

ಕಾರವಾರದ ಸರ್ಕಾರಿ ಪ್ರೌಢಶಾಲೆ ಕಟ್ಟಡ ಸೋರುತ್ತಿರುವುದರಿಂದ ಅಲ್ಲಿನ ಕೊಠಡಿಯಲ್ಲಿ ಮಳೆನೀರು ನೆಲಕ್ಕೆ ಬೀಳದಂತೆ ಬಕೆಟ್ ಇಟ್ಟು ಶಾಸಕರ ಸರ್ಕಾರಿ ಮಾದರಿ ಶಾಲೆ ವಿದ್ಯಾರ್ಥಿಗಳು ಪಾಠ ಕೇಳುತ್ತಿರುವುದು.

ಸಮಸ್ಯೆ ಏನು?

2023ರಲ್ಲಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅದರ ಹಿಂಭಾಗದಲ್ಲಿದ್ದ ಜಿಲ್ಲಾ ಗುರುಭವನ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಆಗಿನ ಸರ್ಕಾರ ₹6 ಕೋಟಿಗೂ ಹೆಚ್ಚು ಮೊತ್ತದ ವಿಶೇಷ ಅನುದಾನ ಮಂಜೂರು ಮಾಡಿತ್ತು. ಹೊಸ ಸರ್ಕಾರ ರಚನೆಯಾದ ಬಳಿಕ ಯೋಜನೆಯ ನಕ್ಷೆ ಬದಲಾಗಿತ್ತು. ‘ಶಾಲೆ ಮತ್ತು ಗುರುಭವನ ಕಟ್ಟಡ ನಿರ್ಮಾಣ ಯೋಜನೆಗೆ ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ತಕ್ಕಂತೆ ಅನುದಾನ ಮಂಜೂರಾಗಿರಲಿಲ್ಲ. ಕ್ರಿಯಾಯೋಜನೆಯಲ್ಲಿ ಹಲವು ಲೋಪಗಳಿದ್ದವು. ಹೀಗಾಗಿ ಪರಿಷ್ಕೃತ ವರದಿ ಸಿದ್ಧಪಡಿಸಿ ಅದಕ್ಕೆ ಮಂಜೂರಾತಿ ಪಡೆಯಲು ತಡವಾಗಿದೆ. ಶಾಲೆಗೆ ₹5 ಕೋಟಿ ವೆಚ್ಚದಲ್ಲಿ 6 ಕೊಠಡಿ ನಿರ್ಮಿಸಲಾಗಿದೆ’ ಎಂದು ಪಿಡಬ್ಲ್ಯೂಡಿ ಎಇಇ ರಾಮು ಅರ್ಗೇಕರ್ ಪ್ರತಿಕ್ರಿಯಿಸಿದರು.

ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಲಾಗಿದೆ. ಅಕ್ಷೋಬರ್ ಒಳಗೆ ಶಾಲೆಯ ಹೊಸ ಕಟ್ಟಡ ಸಿದ್ಧಪಡಿಸಿ ಹಸ್ತಾಂತರಿಸಲು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
-ಉಮೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ
ತಾಂತ್ರಿಕ ಕಾರಣದಿಂದ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ. ಕೆಲವೇ ದಿನದೊಳಗೆ ಕಟ್ಟಡ ನಿರ್ಮಾಣ ಕೆಲಸ ಮುಗಿಯಲಿದೆ.
-ರಾಮು ಅರ್ಗೇಕರ್, ಪಿಡಬ್ಲ್ಯೂಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.