ADVERTISEMENT

ಪೊಲೀಸರ ಭರ್ಜರಿ ಕಾರ್ಯಾಚರಣೆ: ₹ 26.29 ಲಕ್ಷ ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 13:38 IST
Last Updated 18 ಜುಲೈ 2022, 13:38 IST
ಕಾರವಾರದ ಬಿಣಗಾದಲ್ಲಿ ಪೊಲೀಸರು ಸೋಮವಾರ ಮದ್ಯದ ಬಾಟಲಿಗಳಿರುವ ಪೆಟ್ಟಿಗೆಗಳನ್ನು ಜಪ್ತಿ ಮಾಡಿರುವುದು
ಕಾರವಾರದ ಬಿಣಗಾದಲ್ಲಿ ಪೊಲೀಸರು ಸೋಮವಾರ ಮದ್ಯದ ಬಾಟಲಿಗಳಿರುವ ಪೆಟ್ಟಿಗೆಗಳನ್ನು ಜಪ್ತಿ ಮಾಡಿರುವುದು   

ಕಾರವಾರ: ಪರವಾನಗಿ ಇಲ್ಲದೇ ಸಾಗಿಸಲಾಗುತ್ತಿದ್ದ ₹ 26.29 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ಸೋಮವಾರ, ನಗರದ ಬಿಣಗಾದಲ್ಲಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಿಂಪ್ಲೇವಾಡಿಯ ಸುಧಾಕರ ಗೋಲಾಂಡೆ ಎಂದು ಗುರುತಿಸಲಾಗಿದೆ.

ಗೋವಾದಿಂದ ಮಾಜಾಳಿ ಚೆಕ್‌ಪೋಸ್ಟ್ ಮೂಲಕ ಬಂದ ಲಾರಿಯಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ವಿಶೇಷ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ನಡೆಸಿದರು. ಬಿಣಗಾದಲ್ಲಿ ಕಾರ್ಖಾನೆಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದರು. ಗೋವಾದಲ್ಲಿ ತಯಾರಿಸಲಾದ ಒಟ್ಟು 30,212 ಬಾಟಲಿ ಮದ್ಯವನ್ನು 814 ಪೆಟ್ಟಿಗೆಗಳಲ್ಲಿ ಸಾಗಿಸುತ್ತಿದ್ದುದು ಕಂಡುಬಂತು.

ADVERTISEMENT

ಈ ಮದ್ಯವನ್ನು ಗೋವಾದಿಂದ ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದುದಾಗಿ ಬಂಧಿತ ಲಾರಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಮಾಲೀಕನ ವಿರುದ್ಧವೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ನಿತ್ಯಾನಂದ ಪಂಡಿತ್, ಸಿಬ್ಬಂದಿ ರಾಘವೇಂದ್ರ ನಾಯ್ಕ, ಭಗವಾನ್ ಗಾಂವ್ಕರ್, ಸಂತೋಷಕುಮಾರ್ ಕೆ.ಬಿ, ಉಮೇಶ ಗಾಳಿ ಭಾಗವಹಿಸಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್.ಬದ್ರಿನಾಥ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.