ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಮಳೆ ವಾಡಿಕೆ ಮೀರಿ ಸುರಿದಿದ್ದರೂ ಈ ಬಾರಿ ಸಾರ್ವಜನಿಕ ಆಸ್ತಿಪಾಸ್ತಿಯ ಹಾನಿ ಪ್ರಮಾಣ ಹೆಚ್ಚಾಗಿಲ್ಲ. ಆದರೆ, 226 ಶಾಲೆ ಕಟ್ಟಡಗಳು ಹಾನಿಗೆ ಒಳಗಾಗಿವೆ.
ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ಎದುರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ಭಾರಿ ಪ್ರಮಾಣದ ಭೂಕುಸಿತ ಅವಘಡ ನಡೆದಿಲ್ಲ. ಹೊನ್ನಾವರ ತಾಲ್ಲೂಕು ಹೊರತುಪಡಿಸಿದರೆ ಉಳಿದೆಡೆ ಪ್ರವಾಹದ ಸ್ಥಿತಿಯೂ ಉಂಟಾಗಿಲ್ಲ. ಆದರೆ, ಕೃಷಿ ಕ್ಷೇತ್ರದ ಮೇಲೆ ಮಳೆ ನಕಾರಾತ್ಮಕ ಪರಿಣಾಮ ಬೀರಿದೆ.
ಮುಂಗಾರು ಆರಂಭಗೊಂಡ ಜೂನ್ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 850 ಕಿ.ಮೀಗಿಂತಲೂ ಹೆಚ್ಚು ಪ್ರಮಾಣದ ರಸ್ತೆ ಹಾನಿಗೆ ಒಳಗಾಗಿದೆ. ಅವುಗಳ ಪೈಕಿ 175 ಕಿ.ಮೀ ರಾಜ್ಯ ಹೆದ್ದಾರಿ, 412 ಕಿ.ಮೀ ಉದ್ದದ ಜಿಲ್ಲಾ ರಸ್ತೆ, 320 ಕಿ.ಮೀಗೂ ಹೆಚ್ಚಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಭಾರಿ ಮಳೆಯಿಂದಾಗಿ 44 ಸೇತುವೆ, ಕಿರು ಸೇತುವೆಗಳಿಗೆ ಹಾನಿ ಉಂಟಾಗಿದೆ. 226 ಶಾಲೆಗಳ ಕಟ್ಟಡಗಳಿಗೆ ಹಾನಿಯಾಗಿದ್ದು, ಅವುಗಳ ಮರು ನಿರ್ಮಾಣಕ್ಕೆ ₹8 ಕೋಟಿಯಷ್ಟು ಅನುದಾನದ ಅಗತ್ಯವಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಜೂನ್ ಆರಂಭದಲ್ಲೇ ಮಳೆ ಅಬ್ಬರಿಸಿತು. ಬಳಿಕ ಕೆಲವೇ ದಿನ ಬಿಡುವು ನೀಡಿ ಬಳಿಕ ನಿರಂತರವಾಗಿ ಸುರಿಯಿತು. ಅತಿಯಾದ ಮಳೆಯಿಂದ ಗೋವಿನ ಜೋಳ ಬೆಳೆಗೆ ಹೆಚ್ಚು ಹಾನಿ ಉಂಟಾಗಿದೆ. ಭತ್ತಕ್ಕೆ ಹೆಚ್ಚು ಹಾನಿ ಇರದಿದ್ದರೂ ಅಲ್ಲಲ್ಲಿ ಗದ್ದೆಗಳಲ್ಲಿ ನೀರು ಭಾರಿ ಪ್ರಮಾಣದಲ್ಲಿ ನಿಂತು ಹಾನಿಗೆ ಕಾರಣವಾಗಿದೆ. 251.6 ಹೆಕ್ಟೇರ್‌ನಷ್ಟು ಬೆಳೆ ಹಾನಿಗೊಳಗಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2021ರಲ್ಲಿ ಪ್ರವಾಹ, ಭೂಕುಸಿತಕ್ಕೆ ನಲುಗಿದ್ದ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದ ₹600 ಕೋಟಿಗೂ ಹೆಚ್ಚಿನ ಹಾನಿ ಉಂಟಾಗಿತ್ತು. 2024ರಲ್ಲಿ ಜೂನ್, ಜುಲೈ ತಿಂಗಳಿನಲ್ಲೇ ಭೂಕುಸಿತ, ಮಳೆಯಿಂದ ₹200 ಕೋಟಿಗೂ ಹೆಚ್ಚಿನ ಹಾನಿ ಸಂಭವಿಸಿತ್ತು. ಈ ಬಾರಿ ಈವರೆಗೆ ₹27.66 ಕೋಟಿ ಮೊತ್ತದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಲೆಕ್ಕ ಹಾಕಿದೆ.
ಮಳೆಯಿಂದ ಹಾನಿಗೆ ಒಳಗಾದ ಮನೆಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಿಸಲಾಗಿದೆ. ಸರ್ಕಾರಿ ಕಟ್ಟಡ ಆಸ್ತಿಯ ಹಾನಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.