ಕಾರವಾರ: ಒಂದು ಕಾಲದಲ್ಲಿ ಬಗೆಬಗೆಯ, ಬಣ್ಣ ಬಣ್ಣದ ಮೀನುಗಳ ಮೂಲಕ ಆಕರ್ಷಿಸುತ್ತಿದ್ದ ‘ಸಾಗರ ಮತ್ಸ್ಯಾಲಯ’ ಪಾಳುಬಿದ್ದು ಹಲವು ವರ್ಷ ಕಳೆದಿದೆ. ಗಿಡಗಂಟಿ ಸುತ್ತುವರಿದುಕೊಂಡಿರುವ ಕಟ್ಟಡದ ತುಂಬ ಒಡೆದ ಮದ್ಯದ ಬಾಟಲಿಗಳ ರಾಶಿ ಕಾಣಸಿಗುತ್ತಿದೆ.
ಕಾರವಾರಕ್ಕೆ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅನುಕೂಲ ಆಗಿದ್ದ ಸಾಗರ ಮತ್ಸ್ಯಾಲಯ ಆರೇಳು ವರ್ಷಗಳ ಹಿಂದೆ ಶಿಥಿಲಗೊಂಡು ಸ್ಥಗಿತಗೊಂಡಿದೆ. ಮೀನುಗಳ ಅಕ್ವೇರಿಯಂಗಳನ್ನು ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಮತ್ಸ್ಯಾಲಯ ಕಟ್ಟಡ ಮಾತ್ರ ಬೀಳುವ ಹಂತಕ್ಕೆ ತಲುಪಿದ್ದರೂ ತೆರವುಗೊಳ್ಳದೆ ಉಳಿದುಕೊಂಡಿದೆ.
‘ಸಾಗರ ಮತ್ಸ್ಯಾಲಯ ಕಟ್ಟಡವನ್ನು ಗಿಡಗಂಟಿಗಳು ಆವರಿಸಿಕೊಂಡಿದೆ. ಒಂದು ಕಾಲದಲ್ಲಿ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ತಾಣವೀಗ ಸರಿಸೃಪಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದೇ ಕಟ್ಟಡದ ಬದಿಯಲ್ಲಿ ಯುವಕರ ಗುಂಪು ಮದ್ಯ ಸೇವನೆ, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಿದೆ. ಕಟ್ಟಡದ ಆವರಣದ ತುಂಬ ಒಡೆದ ಮದ್ಯದ ಬಾಟಲಿಗಳು, ಪ್ಯಾಕೆಟ್‌ಗಳು ಕಾಣಸಿಗುತ್ತಿವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಪರೇಶ್ ಮಾಂಜ್ರೇಕರ.
1992ರಲ್ಲಿ ಮೀನುಗಾರಿಕೆ ಇಲಾಖೆ ಸಾಗರ ಮತ್ಸ್ಯಾಲಯ ಸ್ಥಾಪನೆ ಮಾಡಿತ್ತು. ಐದಾರು ಬಾರಿ ನವೀಕರಣ ಮಾಡಲಾಗಿದ್ದ ಕಟ್ಟಡವನ್ನು 2013ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆ ಬಳಿಕ ಜಿಲ್ಲಾ ಪ್ರವಾಸೋದ್ಯಮ ನಿರ್ವಹಣಾ ಸಮಿತಿಯು ಮತ್ಸ್ಯಾಲಯದಲ್ಲಿ ನವೀಕರಣ ಕಾಮಗಾರಿ ಕೈಗೊಂಡು, ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸಾಗರಜೀವಿಗಳನ್ನೂ ಇಟ್ಟಿತ್ತು. ಕಟ್ಟಡದ ಚಾವಣಿ ಕುಸಿಯುವ ಅಪಾಯ ಎದುರಾದ ಬಳಿಕ ಅಕ್ವೇರಿಯಂ, ಇಲ್ಲಿಯೇ ಇದ್ದ ನೀಲಿ ತಿಮಿಂಗಿಲದ ಮೂಳೆಯನ್ನು ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
‘ಸಾಗರ ಮತ್ಸ್ಯಾಲಯ ಕಟ್ಟಡ ಶಿಥಿಲಗೊಂಡಿದ್ದರಿಂದ ಎರಡು ವರ್ಷದ ಹಿಂದೆಯೇ ಕಟ್ಟಡ ತೆರವಿಗೆ ಲೋಕೋಪಯೋಗಿ ಇಲಾಖೆ ಶಿಫಾರಸ್ಸು ಮಾಡಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ವೆಚ್ಚದಲ್ಲಿ ಈ ಹಿಂದೆ ಕ್ರಿಯಾಯೋಜನೆಯೂ ಸಿದ್ಧಗೊಂಡಿದೆ. ಆದರೆ, ಕಟ್ಟಡ ಮತ್ತು ಜಾಗ ಮೀನುಗಾರಿಕೆ ಇಲಾಖೆ ಹೆಸರಿನಲ್ಲಿದ್ದು ಅವರಿಂದಲೇ ನೆಲಮಹಡಿ ನಿರ್ಮಾಣ ನಡೆಯಬೇಕು. ಮೊದಲ ಮಹಡಿಯನ್ನು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿ ಮತ್ಸ್ಯಾಲಯ ನಿರ್ವಹಿಸುವ ಒಪ್ಪಂದ ಈ ಮುಂಚೆ ನಡೆದಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಟ್ಟಡ ತೆರವುಗೊಳಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದು ಸದ್ಯದಲ್ಲಿಯೇ ತೆರವು ಕಾರ್ಯಚರಣೆ ನಡೆಯಲಿದೆಮಂಗಳಗೌರಿ ಭಟ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಸಿಆರ್‌ಝಡ್ ಕಾಯ್ದೆ ಅಡ್ಡಿ ಸಾಧ್ಯತೆ
‘ಸಾಗರ ಮತ್ಸ್ಯಾಲಯ ಕಟ್ಟಡ 33 ವರ್ಷಗಳಷ್ಟು ಹಿಂದೆಯೇ ನಿರ್ಮಾಣಗೊಂಡಿದೆ. ಆದರೂ ಒಮ್ಮೆ ಅದನ್ನು ಪೂರ್ಣ ತೆರವುಗೊಳಿಸಿದರೆ ಪುನರ್ ನಿರ್ಮಾಣಕ್ಕೆ ಸಿಆರ್‌ಝಡ್ ಕಾಯ್ದೆ ಅಡ್ಡಿಯಾಗಬಹುದು. ಹೊಸ ಕಟ್ಟಡಕ್ಕೆ ಅನುಮತಿ ಪಡೆಯಲು ದೀರ್ಘ ಅವಧಿಯೇ ತಗುಲಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.
‘ಕಟ್ಟಡ ಸಂಪೂರ್ಣ ತೆರವುಗೊಳಿಸದೆ ನೆಲಗಟ್ಟಿನವರೆಗೆ ತೆರವುಗೊಳಿಸಿ ಮೂಲ ಅಡಿಪಾಯದಷ್ಟೇ ಕಟ್ಟಡ ನಿರ್ಮಿಸುವುದಾದರೆ ಜಿಲ್ಲಾ ಮಟ್ಟದ ಸಿಆರ್‌ಝಡ್ ಸಮಿತಿ ಅನುಮತಿ ಪಡೆಯಬಹುದು. ಆದರೆ ಕಟ್ಟಡ ವಿಸ್ತರಣೆ ನಡೆಸುವುದು ಸಾಧ್ಯವಾಗದು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.