ADVERTISEMENT

ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಬಸ್‌: ಪ್ರಯಾಣಿಕರಿಗಿಲ್ಲ ಊರು ತಲುಪುವ ಖಾತ್ರಿ

ಗಣಪತಿ ಹೆಗಡೆ
Published 24 ನವೆಂಬರ್ 2025, 4:48 IST
Last Updated 24 ನವೆಂಬರ್ 2025, 4:48 IST
ಕಾರವಾರದಿಂದ ಮುಡಗೇರಿ ಗ್ರಾಮಕ್ಕೆ ಸಂಚರಿಸುವ ಬಸ್ ಜಿಲ್ಲಾಧಿಕಾರಿ ಕಚೇರಿ ಸಮೀಪ ಬಂದ್ ಆಗಿದ್ದರಿಂದ ನಿರ್ವಾಹಕರ ಜೊತೆ ಸೇರಿ ಪ್ರಯಾಣಿಕರು ತಳ್ಳಿದರು
ಕಾರವಾರದಿಂದ ಮುಡಗೇರಿ ಗ್ರಾಮಕ್ಕೆ ಸಂಚರಿಸುವ ಬಸ್ ಜಿಲ್ಲಾಧಿಕಾರಿ ಕಚೇರಿ ಸಮೀಪ ಬಂದ್ ಆಗಿದ್ದರಿಂದ ನಿರ್ವಾಹಕರ ಜೊತೆ ಸೇರಿ ಪ್ರಯಾಣಿಕರು ತಳ್ಳಿದರು   

ಕಾರವಾರ: ತಾಲ್ಲೂಕಿನ ಕದ್ರಾ ಭಾಗದಿಂದ ಕಾರವಾರಕ್ಕೆ ಪ್ರಯಾಣಿಸುವ ಕಾಲೇಜು ವಿದ್ಯಾರ್ಥಿಗಳು ವಾರದಲ್ಲಿ ಎರಡು, ಮೂರು ದಿನ ತರಗತಿಗೆ ವಿಳಂಬವಾಗಿ ಹಾಜರಾಗುತ್ತಾರೆ. ಇದಕ್ಕೆ ಕಾರಣ ಅವರು ಅವಲಂಬಿಸಿರುವ ಸಾರಿಗೆ ಸಂಸ್ಥೆಯ ಬಸ್! ನಗರದಿಂದ ದೇವಳಮಕ್ಕಿಯತ್ತ ಪ್ರಯಾಣ ಬೆಳೆಸಿದವರಿಗೆ ಊರಿನ ತಂಗುದಾಣದ ಬಳಿ ತಲುಪುವವರೆಗೆ ತಾವು ತಲುಪುವ ಗ್ಯಾರಂಟಿ ಇರದು!

ಇವೆಲ್ಲ ನಿತ್ಯ ಸಾರಿಗೆ ಸಂಸ್ಥೆ ಅವಲಂಬಿಸಿರುವ ಜನರ ಆರೋಪಗಳು. ಈ ಆರೋಪಗಳಿಗೆ ಮಾರ್ಗಮಧ್ಯೆ ಕೆಟ್ಟು ನಿಂತ ಬಸ್ಸುಗಳೇ ನಿದರ್ಶನ. ತಾಲ್ಲೂಕಿನಲ್ಲಿ ನಿತ್ಯವೂ 3–4 ಕಡೆ ಬಸ್ಸುಗಳು ಕೆಟ್ಟು ನಿಂತ, ಟೈರ್ ಒಡೆದು ನಿಂತ ದೂರುಗಳು ಬರುತ್ತಿವೆ. ಮುಡಗೇರಿಗೆ ಸಂಚರಿಸುವ ಬಸ್‌ ಅನ್ನು ಬಹುತೇಕ ಸಮಯ ಪ್ರಯಾಣಿಕರೇ ನಿರ್ವಾಹಕರೊಂದಿಗೆ ಸೇರಿ ನೂಕಿ ಪ್ರಯಾಣ ಆರಂಭಿಸುವ ಸ್ಥಿತಿ ಇದೆ. ದುಃಸ್ಥಿತಿಯ ಬಸ್‌ಗಳು ಹೆಚ್ಚಿದ್ದು, ಕಳೆದ ಮೂರು ವರ್ಷದಲ್ಲಿ 104 ಬಸ್‌ಗಳು ಗುಜರಿಗೆ ತಲುಪಿವೆ.

‘ಕಾರವಾರ ಸಾರಿಗೆ ಘಟಕದ ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದೆ. ದುರಸ್ತಿ ಕಾರ್ಯದಲ್ಲಿ ವಿಳಂಬ ಉಂಟಾಗುತ್ತಿದೆ. ಕೆಲ ಬಸ್ಸುಗಳನ್ನು ಅಂಕೋಲಾದ ಘಟಕದಿಂದ ನಿರ್ವಹಣೆ ಮಾಡುತ್ತಿದ್ದು, ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ದೂರಿದರು.

ADVERTISEMENT

‘ಶಿರಸಿ ವಿಭಾಗದಲ್ಲಿ ಕೋವಿಡ್‌ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಮಾರ್ಗಗಳ ಮರುಆರಂಭ ಹಂತ ಹಂತವಾಗಿ ಸಾಗಿದೆ. 84 ಹೊಸ ಬಸ್ಸುಗಳು ಬಂದಿದ್ದು, ನಿರ್ವಹಣೆ ಮಾಡಲಾಗುತ್ತಿದೆ’ ಎಂಬುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ ಹೇಳುತ್ತಾರೆ.

ಜೊಯಿಡಾ ತಾಲ್ಲೂಕಿನ ತಮ್ಮಣಗಿ, ಆಮಸೇತ, ಕಾಳಸಾಯಿಗೆ, ಅಣಶಿ, ಕ್ಯಾಸಲ್ ರಾಕ್, ಸೇರಿ ಹಲವೆಡೆ ದಿನಕ್ಕೆ ಒಮ್ಮೆ ಸಂಚರಿಸುವ ಬಹುತೇಕ ಬಸ್ಸುಗಳು ಹಳೆಯದಾಗಿದ್ದು, ಮಾರ್ಗ ಮಧ್ಯೆ ಕೆಟ್ಟು ನಿಂತಿರುತ್ತವೆ. ತಾಂತ್ರಿಕ ದೋಷದ ಕಾರಣ ನೀಡಿ ಬಸ್ಸುಗಳು ಬಸ್ ನಿಲ್ದಾಣ ಬಿಟ್ಟು ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿಲ್ಲ ಎಂಬ ದೂರುಗಳಿವೆ.

‘ಭಟ್ಕಳ ತಾಲ್ಲೂಕಿನ ಗಂಜಿಗೇರಿ, ಕೆಕ್ಕೊಡ, ಅಳ್ವೇಕೋಡಿ, ಉತ್ತರಕೊಪ್ಪ ಮಾರ್ಗದಲ್ಲಿ ಮೊದಲಿನ ಹಾಗೇ ನಿಗದಿತ ವೇಳೆ ಬಸ್‌ ಸಂಚಾರ ಇಲ್ಲ ಎನ್ನುವುದು ಸಾರ್ವಜನಿಕರ ದೂರು. ಸಾರಿಗೆ ಘಟಕದಲ್ಲಿ 60 ಬಸ್‌ಗಳಿದ್ದು, 16 ಹೊಸ ಬಸ್‌ಗಳ ಪೂರೈಕೆ ಆಗಿದೆ’ ಎಂದು ಘಟಕ ವ್ಯವಸ್ಥಾಪಕ ದಿವಾಕರ ತಿಳಿಸಿದ್ದಾರೆ.

‘ಸಿದ್ದಾಪುರ ತಾಲ್ಲೂಕಿನ ಕೆಲವು ಮಾರ್ಗಗಳಲ್ಲಿ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಸ್‍ನ ಸಮಯ ಬದಲಾವಣೆ ಆಗುತ್ತದೆ. ಅವುಗಳನ್ನು ಹೊರತುಪಡಿಸಿದರೆ ಸಕಾಲಕ್ಕೆ ಬಸ್ ಸಂಚರಿಸುತ್ತಿವೆ’ ಎನ್ನುತ್ತಾರೆ ಸಿದ್ದಾಪುರ ಘಟಕದ ನಿಯಂತ್ರಣಾಧಿಕಾರಿ.

ಗೋಕರ್ಣದ ಗ್ರಾಮೀಣ ಭಾಗದಲ್ಲಿ ಚಲಿಸುವ ಬಸ್ಸುಗಳ ಸಂಖ್ಯೆ ಪ್ರಮಾಣ ಇಳಿಕೆಯಾಗಿದೆ. ಬಹುತೇಕ ದಿನ ಬಸ್‌ಗಳು ಮಾರ್ಗಮಧ್ಯೆ ಕೆಟ್ಟು ನಿಲ್ಲುವುದರಿಂದ ಕುಮಟಾ, ಅಂಕೋಲದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಅಂಕೋಲಾ ತಾಲ್ಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕುಂಟಗಣಿ, ಮಾಬಗಿ, ಅಂಗಡಿ ಬೈಲ್ ಸೇರಿದಂತೆ ಇತರ ಗ್ರಾಮಗಳಿಗೆ ಸಂಚರಿಸುವ ಬಸ್‍ಗಳು ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ ಎಂಬುದು ಜನರ ಆರೋಪ. ಅಡ್ಲುರು, ಹೊನ್ನಾಳಿ, ಮೂಲೆಮನೆ ಸೇರಿದಂತೆ ಹಲವು ಗ್ರಾಮಗಳ ಪ್ರಯಾಣಿಕರು ಪಟ್ಟಣಕ್ಕೆ ತೆರಳಲು ಬಸ್‍ಗಳಿಗೆ ಗಂಟೆಗಟ್ಟಲೆ ಕಾಯಬೇಕಾಗುತ್ತಿದೆ ಎಂಬ ದೂರುಗಳೂ ಇವೆ.

ಮುಂಡಗೋಡ ಪಟ್ಟಣದಿಂದ ಹುಬ್ಬಳ್ಳಿ ಹಾಗೂ ಶಿರಸಿಗೆ ನಿತ್ಯ ಸಂಚರಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಬಸ್ ಹತ್ತಲು ಪರದಾಡುತ್ತಾರೆ. ಸಮಯಕ್ಕೆ ಸರಿಯಾಗಿ ಬಸ್ ಬಾರದಿರುವುದು, ಬಂದಿರುವ ಬಸ್‍ನಲ್ಲಿ ಜೋತು ಬಿದ್ದು ಪ್ರಯಾಣಿಸುವುದು ನಿತ್ಯದ ಪ್ರಯಾಣಿಕರ ಗೋಳಾಗಿದೆ.

‘ಗ್ರಾಮೀಣ ಭಾಗಕ್ಕೆ ತೆರಳುವ ಬಸ್‍ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಬೇರೆ ಘಟಕದಿಂದ ಬರುವ ಬಸ್‍ಗಳು ಕೆಲವೊಮ್ಮೆ ಬರುವುದಿಲ್ಲ. ಆಗ ಎರಡರಿಂದ ಮೂರು ಗಂಟೆ ಮತ್ತೊಂದು ಬಸ್ ಬರುವರೆಗೂ ನಿಲ್ದಾಣದಲ್ಲಿ ಕಾಯಬೇಕಾಗುತ್ತದೆ’ ಎಂದು ಪ್ರಯಾಣಿಕ ಮಂಜುನಾಥ ಹುಲಸ್ವಾರ್ ಹೇಳಿದರು.

‘ಹೊಸ ಘಟಕ ಸ್ಥಾಪಿಸಿದ್ದರೂ ಹೊಸ ಬಸ್‍ಗಳನ್ನು ಬಿಡದೆ ಬೇರೆ ಕಡೆ ಓಡಿಸಿ ಹಳೆಯದಾಗಿರುವ ಬಸ್‍ಗಳನ್ನು ಇಲ್ಲಿಂದ ಬಿಡುತ್ತಿದ್ದಾರೆ. ಇದರಿಂದ ಪದೇ ಪದೆ ಬಸ್‌ಗಳು ಕೆಟ್ಟು ನಿಲ್ಲುವುದು ಹೆಚ್ಚಿದೆ’ ಎಂದು ಮುಂಡಗೋಡ ನಿವಾಸಿ ವಿಠಲ್ ಎಂ. ದೂರಿದರು.

‘ಕುಮಟಾ ಸಾರಿಗೆ ಘಟಕದಲ್ಲಿ ಖಾಸಗಿಯಾಗಿ ಬಸ್ ಮೆಕ್ಯಾನಿಕ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತಿರುವ ಕಾರಣ ಬಸ್ಸುಗಳ ದುರಸ್ತಿ ಕಾರ್ಯದಲ್ಲಿ ವ್ಯತ್ಯಯವಾಗುತ್ತಿದೆ’ ಎಂದು ಘಟಕ ವ್ಯವಸ್ಥಾಪಕ ವಿನಾಯಕ ದೇಶಭಂಡಾರಿ ಹೇಳಿದರು.

‘ಗ್ರಾಮಕ್ಕೆ ಹಿಂದೆ ಬಿಡುತ್ತಿದ್ದ ಒಂದು ಬಸ್ ಅನ್ನು ರದ್ದು ಮಾಡಿದ್ದಾರೆ. ಉಳಿದ ಊರುಗಳ ಬಸ್ ಶುಲ್ಕಕ್ಕೆ ಹೋಲಿಸಿದರೆ ಹೆಗಡೆ ಗ್ರಾಮಸ್ಥರು ಹೆಚ್ಚಿನ ಶುಲ್ಕ ಪಾವತಿಸಬೇಕಾಗಿದೆ’ ಎಂದು ಹೆಗಡೆ ಗ್ರಾಮಸ್ಥ ಅಮರನಾಥ ಭಟ್ ದೂರಿದರು.

‘ಯಲ್ಲಾಪುರ ತಾಲ್ಲೂಕಿನ ಮಾಗೋಡಿಗೆ ಕೋವಿಡ್ ನಂತರ ಬಸ್ ಸಂಚಾರ ಕಡಿಮೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಾಗೋಡಿಗೆ ಸಂಜೆ 6 ಗಂಟೆಯ ನಂತರ ಒಂದು ಬಸ್ ಅಗತ್ಯವಿದೆ. 4 ಗಂಟೆ ಬಸ್ ತಪ್ಪಿದಾಗ ರಿಕ್ಷಾದವರು ಹೆಚ್ಚಿನ ಹಣ ಕೇಳುತ್ತಾರೆ’ ಎನ್ನುತ್ತಾರೆ ಮಹಾಬಲೇಶ್ವರ ಭಟ್ ಮಾಗೋಡು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಸಿದ್ದಾಪುರ ತಾಲ್ಲೂಕಿನ ಬಾಳೇಸರ ಸಮೀಪ ಮಾರ್ಗಮಧ್ಯೆ ಕೆಟ್ಟು ನಿಂತಿದ್ದ ಬಸ್
ಮುಂಡಗೋಡದಿಂದ ಹುಬ್ಬಳ್ಳಿಗೆ ಹೊರಟಿದ್ದ ಸಾರಿಗೆ ಬಸ್ ದಾರಿ ಮಧ್ಯೆ ಕೆಟ್ಟು ನಿಂತಿತ್ತು
ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ಸುಗಳ ಸಂಖ್ಯೆ ಕಡಿಮೆಯಾದ ಕಾರಣ ವಿದ್ಯಾರ್ಥಗಳಿಗೆ ಸಮಯಕ್ಕೆ ಸರಿಯಾಗಿ ಕಾಲೇಜು ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದೆ
ವಿನೋದ ಗೌಡ ಪಾಲಕ
ಜೊಯಿಡಾದಿಂದ ಡಿಗ್ಗಿ ಭಾಗಕ್ಕೆ ಸಂಚರಿಸುತ್ತಿದ್ದ ಬಸ್ಸನ್ನು ಬಂದ್ ಮಾಡಲಾಗಿದೆ. ರಾಮನಗರದಿಂದ ಬಜಾರಕುಣಂಗಕ್ಕೆ ವಾರದ ಬಹುತೇಕ ದಿನ ಬಸ್ ಸಂಚರಿಸುತ್ತಿಲ್ಲ
ಮಹೇಶ ಮೀರಾಶಿ ಕಾಲೇಜು ವಿದ್ಯಾರ್ಥಿ
ಪ್ರತ್ಯೇಕ ಸಾರಿಗೆ ಘಟಕವಿಲ್ಲ
ಹೊನ್ನಾವರ ತಾಲ್ಲೂಕಿಗೆ ಪ್ರತ್ಯೇಕ ಸಾರಿಗೆ ಘಟಕ ಸ್ಥಾಪಿಸಬೇಕು ಎಂಬ ಬೇಡಿಕೆ ಈವರೆಗೂ ಈಡೇರಿಲ್ಲ. ಸದ್ಯ ಕುಮಟಾ ಘಟಕದ 147 ಮತ್ತು ಹಾಗೂ ಭಟ್ಕಳ ಘಟಕದ 57 ಬಸ್‌ಗಳು ಗ್ರಾಮೀಣ ಭಾಗದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಆರೋಳ್ಳಿ ಭಾಸ್ಕೇರಿ ಕವಲಕ್ಕಿ ಮುಂತಾದೆಡೆ ಬಸ್ಸಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಕಡತೋಕಾ ಜಡ್ಡಿಗದ್ದೆ ಕೆಕ್ಕಾರ ಭಾಗದ ಬಸ್ ಸಮಸ್ಯೆ ಬಗೆಹರಿದಿಲ್ಲ. ರಸ್ತೆ ಸಂಪರ್ಕ ಇಲ್ಲದ ಹಿರೇಬೈಲ್‌ಗೆ ತೆರಳಬೇಕಾದ ಬಸ್ ಹೊಸ್ಗೋಡ್ ತನಕ ಮಾತ್ರ ಹೋಗುತ್ತಿದೆ. ಮಹಿಮೆಗೆ ಬಸ್ ಸಂಚರಿಸದಿದ್ದರಿಂದ ಆ ಭಾಗದ ಜನರು ಬಸ್ ಹತ್ತಲು 7 ಕಿ.ಮೀ ಕ್ರಮಿಸಿ ಹೆದ್ದಾರಿಗೆ ಬರುತ್ತಿದ್ದಾರೆ. ‘ದೂರದಲ್ಲಿರುವ ಕುಮಟಾ ಅಥವಾ ಭಟ್ಕಳ ಘಟಕದ ಬಸ್‌ಗಳನ್ನು ಅವಲಂಭಿಸಿರುವುದರಿಂದ ಬಸ್ ಕೆಟ್ಟರೆ ತುರ್ತಾಗಿ ಬದಲಿ ವ್ಯವಸ್ಥೆ ಮಾಡುವುದು ತೊಂದರೆ’ ಎಂಬುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಮಸ್ಯೆ ಹೇಳಿಕೊಳ್ಳುತ್ತಾರೆ.
ಮೆಕ್ಯಾನಿಕ್‌ಗಳ ಕೊರತೆ!
ಶಿರಸಿ ತಾಲ್ಲೂಕಿನ ಒಂದಿಲ್ಲೊಂದು ಮಾರ್ಗದಲ್ಲಿ ನಿತ್ಯವೂ ಸಾರಿಗೆ ಸಂಸ್ಥೆಯ ಬಸ್ ಕೆಟ್ಟು ನಿಂತಿರುವುದು ಸಾಮಾನ್ಯವಾಗಿದೆ. ‘ಬಾಳೇಸರ ಜಡ್ಡಿಗದ್ದೆ ಮಂಜುಗುಣಿ ಕಕ್ಕಳ್ಳಿ ಗೋಣ್ಸರ ಗೋಳಿಮಕ್ಕಿ ಸೋಂದಾ ಸೇರಿ ದೂರದ ಊರಿನ ಬಸ್‍ಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಘಟ್ಟದ ಪ್ರದೇಶದಲ್ಲಿ ಇವು ಹತ್ತಿ ಬರಲು ಕಷ್ಟಪಡುವ ಸ್ಥಿತಿಯಿದೆ’ ಎನ್ನುತ್ತಾರೆ ಹುಲೇಕಲ್ ನಿವಾಸಿ ಗುರುಪ್ರಸಾದ. ‘ಮೆಕ್ಯಾನಿಕ್‍ಗಳ ಕೊರತೆಯಿದೆ. ಟೈರ್ ಸೇರಿ ದುರಸ್ತಿ ಉಪಕರಣಗಳು ನಿಯಮಿತವಾಗಿ ಪೂರೈಕೆ ಇಲ್ಲ’ ಎನ್ನುತ್ತಾರೆ ಶಿರಸಿ ಸಾರಿಗೆ ಘಟಕದ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.