ADVERTISEMENT

ಕಾರವಾರ: ‘ಸೂಪರ್ ಸ್ಪೆಷಾಲಿಟಿ’ ಪ್ರಸ್ತಾವ ಮುಂದಕ್ಕೆ

₹210 ಕೋಟಿ ಅನುದಾನಕ್ಕೆ ಬೇಡಿಕೆ: ಆಡಳಿತಾತ್ಮಕ ಮಂಜೂರಾತಿಗೆ ನಕಾರ

ಗಣಪತಿ ಹೆಗಡೆ
Published 11 ಜುಲೈ 2025, 4:54 IST
Last Updated 11 ಜುಲೈ 2025, 4:54 IST
ಕ್ರಿಮ್ಸ್ ಆಸ್ಪತ್ರೆಯ ಹೊಸ ಕಟ್ಟಡ
ಕ್ರಿಮ್ಸ್ ಆಸ್ಪತ್ರೆಯ ಹೊಸ ಕಟ್ಟಡ   

ಕಾರವಾರ: ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿ ನಿರಂತರ ಹೋರಾಟ ನಡೆಸಿದ್ದರೂ ಸದ್ಯಕ್ಕೆ ಸುಸಜ್ಜಿತ ಸೌಲಭ್ಯದ ಆಸ್ಪತ್ರೆ ಸ್ಥಾಪನೆ ಸಾಧ್ಯವಿಲ್ಲ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿ 300 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ₹210 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವವನ್ನು ಮುಂದೂಡುವಂತೆ ಮಾರ್ಚ್ 14ರಂದೇ ರಾಜ್ಯ ಸರ್ಕಾರ ಪತ್ರ ಬರೆದಿರುವುದು ತಿಳಿದುಬಂದಿದೆ.

ಕ್ರಿಮ್ಸ್ ಅಧೀನದ ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಇದೇ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್ ವಿಭಾಗವು ಅಂದಾಜು ವೆಚ್ಚದ ವರದಿ ಸಿದ್ಧಪಡಿಸಿ, ಅನುದಾನ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿತ್ತು.

ADVERTISEMENT

‘ದೊಡ್ಡ ಮೊತ್ತದ ಯೋಜನೆ ಇದಾಗಿರುವ ಕಾರಣ ಆರ್ಥಿಕ ಇಲಾಖೆ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಮುಂಬರುವ ಬಜೆಟ್‌ ವೇಳೆಗೆ ಈ ಕುರಿತು ನಿರ್ಣಯ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸದ್ಯಕ್ಕೆ ಪ್ರಸ್ತಾವ ಮುಂದೂಡಲಾಗುತ್ತಿದೆ ಎಂದು ಸರ್ಕಾರ ಸೂಚಿಸಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರ 2023ರ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಾಗಿ ಪ್ರತಿಧ್ವನಿಸಿತ್ತು. ಆಸ್ಪತ್ರೆ ಸ್ಥಾಪನೆ ಕುರಿತ ಚರ್ಚೆ ವಿಧಾನಸಭೆಯಲ್ಲೂ ನಡೆದಿದ್ದವು. ಚುನಾವಣೆ ಘೋಷಣೆಗೆ ಕೆಲವೇ ದಿನ ಮುನ್ನ ಕುಮಟಾದಲ್ಲಿ 15 ಎಕರೆ ಜಾಗ ಆಸ್ಪತ್ರೆ ಸ್ಥಾಪನೆಗೆ ಹಿಂದಿನ ಸರ್ಕಾರ ಮಂಜೂರು ಮಾಡಿ ಆದೇಶಿಸಿತ್ತು. ಹೊಸ ಸರ್ಕಾರ ರಚನೆ ಬಳಿಕ ಕ್ರಿಮ್ಸ್‌ನಲ್ಲಿಯೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೌಕರ್ಯ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಭರವಸೆ ನೀಡಿದ್ದರು.

ಸತೀಶ ಸೈಲ್
ಡಾ.ಪೂರ್ಣಿಮಾ ಆರ್.ಟಿ.
ಕ್ರಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಕರ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಲಾಗುತ್ತಿದೆ. ಸ್ಪಂದನೆ ಸಿಗುವ ವಿಶ್ವಾಸವಿದೆ.
ಸತೀಶ ಸೈಲ್ ಶಾಸಕ
450 ಹಾಸಿಗೆಯ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಅಲ್ಲಿಯೇ ಈಗಿನದಕ್ಕಿಂತ ಹೆಚ್ಚು ಸೌಕರ್ಯ ಒದಗಿಸಲು ಅವಕಾಶ ಆಗಲಿದೆ
ಡಾ.ಪೂರ್ಣಿಮಾ ಆರ್.ಟಿ. ಕ್ರಿಮ್ಸ್ ನಿರ್ದೇಶಕಿ

ಕಟ್ಟಡ ಸ್ಥಳಾಂತರ ವಿಳಂಬ:

ಕ್ರಿಮ್ಸ್‌ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳು ಕಳೆದಿವೆ. ಈವರೆಗೂ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭಿಸದ ಬಗ್ಗೆ ಸಾರ್ವಜನಿಕ ವಲಯದಲ್ಲೂ ಆಕ್ಷೇಪ ವ್ಯಕ್ತವಾಗುತ್ತಿದೆ. ಇದರ ಪಕ್ಕದಲ್ಲಿನ ಹಳೆಯ ಕಟ್ಟಡದಲ್ಲಿಯೇ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ‘ಹೊಸ ಕಟ್ಟಡ ಉದ್ಘಾಟನೆ ಬಳಿಕ ಹಳೆಯ ಕಟ್ಟಡದಿಂದ ಜಿಲ್ಲಾಸ್ಪತ್ರೆಯನ್ನು ಸ್ಥಳಾಂತರಿಸಲಾಗುತ್ತದೆ. ಹಳೆಯ ಕಟ್ಟಡ ಸಂಪೂರ್ಣ ತೆರವುಗೊಳಿಸಿ ಅಲ್ಲಿಯೇ 300 ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣಗೊಳ್ಳಬೇಕಿದೆ. ಆದರೆ 450 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ಇನ್ನೂ ಕ್ರಿಮ್ಸ್‌ಗೆ ಹಸ್ತಾಂತರವಾಗಿಲ್ಲ. ಹಸ್ತಾಂತರಕ್ಕೆ ಮುನ್ನ ಪಿಡಬ್ಲ್ಯೂಡಿಯಿಂದ ಥರ್ಡ್ ಪಾರ್ಟಿ ಪರಿಶೀಲನೆ ನಡೆಸಿ ವರದಿ ಪಡೆಯಬೇಕಾಗುತ್ತದೆ. ಪರಿಶೀಲನೆ ಮುಗಿದು 15 ದಿನವಾಗಿದೆ. ವರದಿ ಇನ್ನಷ್ಟೆ ಕೈಸೇರಬೇಕು’ ಎಂದು ಕ್ರಿಮ್ಸ್ ನಿರ್ದೇಶಕಿ ಡಾ.ಪೂರ್ಣಿಮಾ ಆರ್.ಟಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.