
ಕಾರವಾರ: ಇಲ್ಲಿನ ತಹಶೀಲ್ದಾರ್ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಬಾಂಬ್ ಸ್ಫೋಟದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಆತಂಕಗೊಂಡಿದ್ದರು. ಕೆಲವರು ಕಚೇರಿಗೆ ಬರಲು ಹಿಂದೇಟು ಹಾಕಿದರು. ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರೀಯ ದಳ ಕಚೇರಿಯಲ್ಲಿ ಪರಿಶೀಲನೆ ಕೈಗೊಂಡಿತು.
‘ಗೈನಾ ರಮೇಶ್ ಎಂಬ ಹೆಸರಿನಲ್ಲಿ ಇ–ಮೇಲ್ ಕಳಿಸಿದ ಅಪರಿಚಿತರು ಕಚೇರಿಯನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ್ದರು. ತಮಿಳರು ಮತ್ತು ಪಾಕಿಸ್ತಾನಿಗಳು ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಎಚ್ಚರಿಸುವ ಜೊತೆಗೆ ತಮಿಳುನಾಡು ಸರ್ಕಾರದ ವಿರುದ್ಧದ ಬರಹಗಳು ಸಂದೇಶದಲ್ಲಿದ್ದವು’ ಎಂದು ತಹಶೀಲ್ದಾರ್ ನಿಶ್ಚಲ್ ನೊರ್‍ಹೋನಾ ತಿಳಿಸಿದರು.
‘ಅಪರಿಚಿತ ಖಾತೆಯಿಂದ ಬಾಂಬ್ ಸ್ಫೋಟದ ಬೆದರಿಕೆಯ ಇ–ಮೇಲ್ ಸಂದೇಶ ಕಾರವಾರ ಮತ್ತು ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಸುರಕ್ಷತೆ ಕ್ರಮವಾಗಿ ಕಚೇರಿಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ತಪಾಸಣೆ ನಡೆಸಿದೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಬೆದರಿಕೆ ಒಡ್ಡಿದವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.