ADVERTISEMENT

ಸಾಹಿತ್ಯ ಸಮ್ಮೇಳನ | ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ: ಜಯಪ್ರಕಾಶ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:35 IST
Last Updated 22 ಫೆಬ್ರುವರಿ 2026, 2:35 IST
<div class="paragraphs"><p>ಕಾರವಾರದ ದಿ.ಶಂಕರ ಬಾಬಿ ಸಾವಂತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಜಯಪ್ರಕಾಶ ಶೆಟ್ಟಿ ಉದ್ಘಾಟಿಸಿದರು.</p></div>

ಕಾರವಾರದ ದಿ.ಶಂಕರ ಬಾಬಿ ಸಾವಂತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ.ಜಯಪ್ರಕಾಶ ಶೆಟ್ಟಿ ಉದ್ಘಾಟಿಸಿದರು.

   

ಕಾರವಾರ: ‘ಪ್ರೀತಿ ಇರುವ ಕಡೆ, ಭೀತಿ ಇಲ್ಲದ ಕಡೆ ಅದ್ಭುತಗಳು ಸಂಭವಿಸುತ್ತವೆ. ಯುದ್ಧಕ್ಕಿಂತ ಪ್ರೀತಿಗೆ ಹೆಚ್ಚು ಶಕ್ತಿ ಇದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಜಯಪ್ರಕಾಶ ಶೆಟ್ಟಿ ಹೇಳಿದರು.

ಇಲ್ಲಿನ ದಿ.ಶಂಕರ ಬಾಬಿ ಸಾವಂತ ಸಭಾಂಗಣದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಅಜ್ಞಾನದ ಬೆಳಕಿನಿಂದ ಜ್ಞಾನ ಲೋಕ ನೋಡುವ ಕೆಟ್ಟ ಕಾಲದಲ್ಲಿದ್ದೇವೆ. ಸುಳ್ಳು ಅಲ್ಪಾಯುಷಿ. ಸತ್ಯ ಚಿರಾಯುಷಿ ಎಂಬುದರನ್ನು ಅರಿತುಕೊಳ್ಳಬೇಕು. ಸಳ್ಳು ಎಷ್ಟೇ ವಿಜೃಂಭಿಸಿದರೂ ಸತ್ಯಕ್ಕೆ ಅಂತಿಮ ಜಯ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಬದುಕುತ್ತಿದ್ದೇವೆ. ಕಾರವಾರದ ನೆಲ ಗಾಂಧೀಜಿಯೊಂದಿಗೆ ಆಪ್ತತೆ ಇಟ್ಟುಕೊಂಡ ಜಾಗ. ಉತ್ತಮ ಚರಿತ್ರೆ ಹೊಂದಿರುವ ಇಲ್ಲಿ ದ್ವೇಷದ ಬದಲು ಪ್ರೀತಿ ಬಿತ್ತುವ ಜನರಿದ್ದಾರೆ’ ಎಂದರು.

‘ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕನ್ನಡದ ಸಾಹಿತಿಗಳ ಕೊಡುಗೆ ಅನನ್ಯ. ಸಾಹಿತ್ಯ ಸಮಾಜಕ್ಕೆ ದಾರಿ ತೋರಿಸುವ ಮಾರ್ಗವಾಗಬೇಕು. ಸನ್ಮಾರ್ಗದಲ್ಲಿ ಸಮಾಜ ಮುನ್ನಡೆಸುವ ಸಾಹಿತಿಗಳಿಗೆ ಗೌರವ ಹೆಚ್ಚು’ ಎಂದರು.

ಶಾಸಕ ಸತೀಶ ಸೈಲ್, ‘ಮಾತೃಭಾಷೆ ಯಾವುದೇ ಇದ್ದರೂ ಕನ್ನಡದ ಮೇಲೆ ಪ್ರೀತಿ ಇರಬೇಕು. ಅಭಿವೃದ್ಧಿ ಬೇರೆ ರಾಜ್ಯದವರನ್ನು ನಮ್ಮತ್ತ ಸೆಳೆಯುವಂತೆ ಮಾಡುತ್ತಿದ್ದೇವೆ. ಉದ್ಯೋಗಕ್ಕೆ ನೆರೆ ರಾಜ್ಯಕ್ಕೆ ವಲಸೆ ಹೋಗುವುದನ್ನು ತಡೆದು, ಇಲ್ಲಿನ ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲು ಕೈಗಾರಿಕೆ ಸ್ಥಾಪನೆಯಾಗಬೇಕಿದೆ’ ಎಂದರು.

ಸರ್ವಾಧ್ಯಕ್ಷತೆ ವಹಿಸಿದ್ದ ಜಿ.ಡಿ.ಗೋವಿಂದಕುಮಾರ ಮಾತನಾಡಿ, ‘ರಾಷ್ಟ್ರೀಯ ಯೋಜನೆಗಳ ಹೇರಿಕೆಗಳು ನಿರಂತರವಾಗಿದ್ದರೂ ಕಾರವಾರದ ನೆಲದಲ್ಲಿ ಮೂಲಸಂಸ್ಕೃತಿ ಬಲವಾಗಿ ಬೇರೂರಿಕೊಂಡಿದೆ. ಗಡಿಭಾಗದ ಈ ಪ್ರದೇಶದಲ್ಲಿ ಕನ್ನಡದ ಪ್ರೀತಿ ಹೆಚ್ಚುತ್ತಿದೆ. ರಂಗಭೂಮಿ ಕನ್ನಡತನ ಉಳಿವಿಗೆ ಬಲ ತುಂಬುತ್ತಿದೆ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ‘ಹಾಲಕ್ಕಿ, ಕುಣಬಿ, ಗೊಂಡರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅವಕಾಶವಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಇಚ್ಚಾಶಕ್ತಿ ತೋರಿಸುತ್ತಿಲ್ಲ. ಬುಡಕಟ್ಟು ಜನರ ಸಂಖ್ಯೆ ಹೆಚ್ಚಿದರೆ ಮೀಸಲು ಕ್ಷೇತ್ರವಾಗುವ ಆತಂಕ ಇದಕ್ಕೆ ಕಾರಣ’ ಎಂದರು.

ಬಿಇಒ ಉಮೇಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಸಮ್ಮೇಳನದ ಕಾರ್ಯಾಧ್ಯಕ್ಷ ಮಾಧವ ನಾಯಕ, ಜಿ.ಡಿ.ಮನೋಜೆ, ಮರ್ತುಜಾ ಹುಸೇನ್ ಆನೆಹೊಸೂರ, ಪಿ.ಆರ್.ನಾಯ್ಕ, ಪ್ರೇಮಾ ಟಿ.ಎಂ.ಆರ್, ಇತರರು ಪಾಲ್ಗೊಂಡಿದ್ದರು.

ಕಾರವಾರ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ 500 ಮೀಟರ್ ಉದ್ದದ ನಾಡಧ್ವಜದ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.

ಅದ್ದೂರಿ ಮೆರವಣಿಗೆ

ಸಮ್ಮೇಳನದ ಸರ್ವಾಧ್ಯಕ್ಷ ಜಿ.ಡಿ.ಗೋವಿಂದಕುಮಾರ ಅವರನ್ನು ಮಿತ್ರ ಸಮಾಜ ಮೈದಾನದಿಂದ ಶಿವಾಜಿ ಕಾಲೇಜು ಆವರಣದವರೆಗೆ ಅದ್ದೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಅರ್ಧ ಕಿ.ಮೀ ಉದ್ದದ ನಾಡಧ್ವಜವನ್ನು ಮೆರವಣಿಗೆಯಲ್ಲಿ ತರಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಧ್ವಜ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಕಲಾತಂಡಗಳು ಜಾನಪದ ಕಲಾವಿದರ ತಂಡಗಳು ಮೆರವಣಿಗೆಯಲ್ಲಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.