ADVERTISEMENT

ಕಾರವಾರ | ಕಸ ವಿಲೇವಾರಿ ‘ಸವಾಲು’: ಸರ್ಕಾರಿ ಜಾಗಕ್ಕೆ ಹುಡುಕಾಟ

ಗಣಪತಿ ಹೆಗಡೆ
Published 28 ಅಕ್ಟೋಬರ್ 2025, 4:44 IST
Last Updated 28 ಅಕ್ಟೋಬರ್ 2025, 4:44 IST
ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಸಂಗ್ರಹಿಸಿಟ್ಟ ಕಸದ ರಾಶಿಗೆ ಪ್ಲಾಸ್ಟಿಕ್ ಹೊದಿಕೆ ಮುಚ್ಚಿಡಲಾಗಿತ್ತು
(ಸಂಗ್ರಹ ಚಿತ್ರ)
ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಸಂಗ್ರಹಿಸಿಟ್ಟ ಕಸದ ರಾಶಿಗೆ ಪ್ಲಾಸ್ಟಿಕ್ ಹೊದಿಕೆ ಮುಚ್ಚಿಡಲಾಗಿತ್ತು (ಸಂಗ್ರಹ ಚಿತ್ರ)   

ಕಾರವಾರ: 5 ವರ್ಷಗಳ ಹಿಂದಷ್ಟೇ ಸ್ಥಾಪನೆಯಾಗಿ, ರಾಜ್ಯದಲ್ಲೇ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ಎಂಬ ಹೆಸರು ಪಡೆದಿದ್ದ ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯಿತಿಯ ಘಟಕ ಸ್ಥಳಾಂತರಕ್ಕೆ ಒತ್ತಡ ಹೆಚ್ಚಿದೆ. ಪರ್ಯಾಯ ಸ್ಥಳ ಸಿಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ನಗರದ ಹೊರವಲಯದಲ್ಲೇ ಇರುವ ಸದಾಶಿವಗಡ, ಕಣಸಗಿರಿ ಗ್ರಾಮಗಳನ್ನು ಸೇರಿಸಿ ರಚನೆಯಾಗಿರುವ ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿ ವಿಸ್ತೀರ್ಣದಲ್ಲಿ ಚಿಕ್ಕದಾಗಿದೆ. ಆದರೆ, ಜನಸಂಖ್ಯೆ, ವಾಣಿಜ್ಯ ಚಟುವಟಿಕೆಯಲ್ಲಿ ನಗರಕ್ಕೆ ಸಮನಾಗಿದೆ. ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿರುವ ಸದಾಶಿವಗಡದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿಯೇ ದೊಡ್ಡ ಸವಾಲಾಗಿದೆ.

2020ರಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಸಮೀಪದಲ್ಲೇ ಸ್ವಚ್ಛತಾ ಸಂಕೀರ್ಣ ನಿರ್ಮಾಣಗೊಂಡಿತ್ತು. 2021ರ ಆರಂಭದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಆರಂಭಗೊಂಡಿತ್ತು.

ADVERTISEMENT

‘ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕಣಸಗಿರಿ ಗ್ರಾಮದಲ್ಲಿ ಜಾಗ ಗುರುತಿಸಲಾಯಿತು. ಅಲ್ಲಿಯೂ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ಸರ್ಕಾರಿ ಜಾಗ ಸಿಗದೆ ಈ ಹಿಂದೆ ಜನವಸತಿ ಸ್ಥಳದಲ್ಲೇ ಘಟಕ ನಿರ್ಮಾಣಗೊಂಡಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಘನ ಮತ್ತು ಹಸಿ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಿ ನಿರ್ಮಿಸಿದ ಸ್ವಚ್ಛತಾ ಸಂಕೀರ್ಣ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಆಗಿದ್ದಕ್ಕೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದೇವು. ವಿರೋಧದ ನಡುವೆಯೂ ಘಟಕ ಆರಂಭಗೊಂಡಿತು. ಆಗಿನ ಜನಸಂಖ್ಯೆ, ಚಟುವಟಿಕೆಯಿಂದ ದಿನಕ್ಕೆ ಸರಾಸರಿ 3 ಕ್ವಿಂಟಲ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಕೇವಲ ಐದು ವರ್ಷದಲ್ಲಿ ಈ ಪ್ರಮಾಣ 8 ಕ್ವಿಂಟಲ್ ದಾಟಿದೆ. ಕೇವಲ ಒಂದೂವರೆ ಗುಂಟೆ ಪ್ರದೇಶದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವುಗಳ ವಿಲೇವಾರಿ ಪ್ರಕ್ರಿಯೆ ನಡೆಸುವುದು ಸವಾಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೂರಜ್ ದೇಸಾಯಿ ಹೇಳಿದರು.

‘23 ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ವಹಿವಾಟಿನ ಮಾರುಕಟ್ಟೆ ಸದಾಶಿವಡಗದಲ್ಲಿದೆ. ಜನಸಂಖ್ಯೆ 22 ಸಾವಿರದಷ್ಟಿದೆ. ಭಾನುವಾರ ನಡೆಯುವ ಸಂತೆಯಿಂದಲೂ ಸಾಕಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ. ಇವೆಲ್ಲದರ ಪರಿಣಾಮ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದು ಎಕರೆ ಜಾಗದಲ್ಲಿ ವಿಶಾಲವಾದ ತ್ಯಾಜ್ಯ ವಿಲೇವಾರಿ ಘಟಕ ಅಗತ್ಯವಿದೆ’ ಎನ್ನುತ್ತಾರೆ ಅವರು.

ಚಿತ್ತಾಕುಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ–66ರ ಬದಿಯಲ್ಲಿ ಕಸ ಎಸೆದಿರುವುದು
ಚಿತ್ತಾಕುಲದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರಿ ಜಾಗ ಹುಡುಕಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ. ಸ್ಥಳ ಗುರುತಿಸಿದ ಬಳಿಕ ಅಲ್ಲಿಯೇ ಸ್ವಚ್ಛತಾ ಸಂಕೀರ್ಣ ನಿರ್ಮಾಣ ಆಗಲಿದೆ
ವೀರನಗೌಡರ ಏಗನಗೌಡರ ತಾಲ್ಲೂಕು ಪಂಚಾಯಿತಿ ಇಒ

ಕಸ ಸಂಗ್ರಹಕ್ಕೆ ಒಪ್ಪದ ನಗರಸಭೆ

‘ಚಿತ್ತಾಕುಲ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಸಂಕೀರ್ಣಕ್ಕೆ ವಿಶಾಲ ಸ್ಥಳ ಇಲ್ಲದಿರುವುದು ಒಂದೆಡೆಯಾದರೆ ಇಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ಜನರಿಂದಲೂ ವಿರೋಧ ವ್ಯಕ್ತವಾಗುತ್ತಿದ್ದ ಕಾರಣಕ್ಕೆ ಹಸಿ ಕಸ ಸಂಗ್ರಹ ವಿಲೇವಾರಿಗೆ ಶಿರವಾಡದಲ್ಲಿರುವ ವಿಲೇವಾರಿ ಘಟಕಕ್ಕೆ ಸಾಗಿಸುವಂತೆ ನಗರಸಭೆಗೆ ಮನವಿ ಮಾಡಲಾಗಿತ್ತು. ಆದರೆ ನಗರ ವ್ಯಾಪ್ತಿಯ ಕಸ ವಿಲೇವಾರಿಗೆ ಸ್ಥಳಾವಕಾಶದ ಕೊರತೆ ಇದೆ ಜೊತೆಗೆ ಸದಸ್ಯರಿಂದಲೂ ವಿರೋಧವಿದೆ ಎಂಬ ಕಾರಣ ನೀಡಿ ನಗರಸಭೆ ಅಧಿಕಾರಿಗಳು ನಿರಾಕರಿಸಿದರು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೂರಜ್ ದೇಸಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.