ಕಾರವಾರ: ಜಿಲ್ಲೆಯ ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಸಂಗ್ರಹಗೊಂಡು ದಶಕಗಳಿಂದ ತ್ಯಾಜ್ಯ ವಿಲೇವಾರಿ ಘಟಕದೊಳಗೆ ದಾಸ್ತಾನು ಬಿದ್ದಿರುವ ಕಸದ ರಾಶಿಗಳಿಗೆ ಮುಕ್ತಿ ದೊರೆಯುವ ಕಾಲ ಸಮೀಪಿಸಿದೆ.
ಮೊದಲ ಹಂತದಲ್ಲಿ ಶಿರಸಿ, ಯಲ್ಲಾಪುರ ಮತ್ತು ಭಟ್ಕಳದ ತ್ಯಾಜ್ಯ ವಿಲೇವಾರಿ ಘಟಕದೊಳಗೆ ದಾಸ್ತಾನು ಆಗಿರುವ 1.46 ಲಕ್ಷ ಟನ್ ‘ಪಾರಂಪರಿಕ ತ್ಯಾಜ್ಯ’ಕ್ಕೆ ಮುಕ್ತಿ ಒದಗಿಸಲು ಸಿದ್ಧತೆ ನಡೆದಿದೆ. ವಾರದೊಳಗೆ ಕಸಗಳ ವಿಲೇವಾರಿ ಕೆಲಸ ಆರಂಭಗೊಳ್ಳಲಿದೆ.
‘ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿ, ದಾಸ್ತಾನು ಮಾಡಿರುವ ಪಾರಂಪರಿಕ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನ ಅನುಸರಿಸಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ₹11 ಕೋಟಿ ವೆಚ್ಚದಲ್ಲಿ ಮೂರು ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ರಾಶಿ ವಿಲೇವಾರಿಗೆ ಪುಣೆ ಮೂಲಕ ಖಾಸಗಿ ಕಂಪನಿ ಟೆಂಡರ್ ಪಡೆದುಕೊಂಡಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಎಇಇ ಕೆ.ಎಸ್.ಕಮ್ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರಿಸುಮಾರು 20 ರಿಂದ 25 ವರ್ಷಗಳಿಗೂ ಹೆಚ್ಚು ಕಾಲದಿಂದ ದಾಸ್ತಾನು ಬಿದ್ದಿರುವ ಕಸಗಳನ್ನು ವಿಲೇವಾರಿಗೊಳಿಸುವ ಸವಾಲು ಇದೆ. ಅವುಗಳನ್ನು ಜೆಸಿಬಿ ಬಳಸಿ ಪ್ರತ್ಯೇಕಿಸಿಕೊಂಡು, ಹಂತ ಹಂತವಾಗೊ ಒಣಗಿಸಲಾಗುತ್ತದೆ. ಬಳಿಕ ಅವುಗಳನ್ನು ಕಸ ಸಂಸ್ಕರಣೆ ಯಂತ್ರ ಬಳಸಿಕೊಂಡು ಪ್ರತ್ಯೇಕಿಸಲಾಗುತ್ತದೆ. ಪ್ಲಾಸ್ಟಿಕ್ ಕಸಗಳಿದ್ದರೆ ಪ್ರತ್ಯೇಕಿಸಿ ವಿಲೇವಾರಿ ಮಾಡಲಾಗುತ್ತದೆ. ಹಸಿ ಕಸಗಳನ್ನು ಪುಡಿ ಮಾಡಿ, ಗೊಬ್ಬರವಾಗಿ ಸಿದ್ಧಪಡಿಸಲಾಗುತ್ತದೆ’ ಎಂದು ವಿವರಿಸಿದರು.
‘ಟೆಂಡರ್ ಪಡೆದಿರುವ ಕಂಪನಿಗೆ ಎರಡು ತಿಂಗಳ ಹಿಂದೆಯೇ ತ್ಯಾಜ್ಯ ವಿಲೇವಾರಿಗೆ ಕಾರ್ಯಾದೇಶ ನೀಡಲಾಗಿದೆ. ಕಂಪನಿಯು ಮಳೆಗಾಲ ಇದ್ದ ಕಾರಣ ಕಸ ಒಣಗಿಸಲು ಸಮಸ್ಯೆಯ ಕಾರಣ ನೀಡಿತ್ತು. ಮಳೆಗಾಲ ಮುಗಿದ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಕೆಲಸ ಆರಂಭಗೊಳ್ಳಲಿದೆ. ಮೂರು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಪಾರಂಪರಿಕ ತ್ಯಾಜ್ಯ ವಿಲೇವಾರಿ ಪೂರ್ಣಗೊಳಿಸಲು 11 ತಿಂಗಳ ಗಡುವನ್ನು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ವೈಜ್ಞಾನಿಕ ವಿಧಾನದ ಮೂಲಕ ವಿಲೇವಾರಿ ಪ್ರಕ್ರಿಯೆ ನಡೆಯಲಿದೆಜಹೀರ್ ಅಬ್ಬಾಸ್ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ
ದಂಡ ವಿಧಿಸಿದ್ದ ಎನ್‌ಜಿಟಿ
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಸ್ಥಳೀಯ ಸಂಸ್ಥೆಗಳಿಗೆ ₹47.25 ಕೋಟಿ ದಂಡ ವಿಧಿಸಿತ್ತು. ತ್ಯಾಜ್ಯ ವಿಲೇವಾರಿ ಘಟಕದೊಳಗಿನ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಆದೇಶಿಸಿತ್ತು. ಶಿರಸಿ ಸೇರಿದಂತೆ ಕೆಲ ಸ್ಥಳೀಯ ಸಂಸ್ಥೆಗಳ ಹಳೆಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾದ ಕಸದ ದಾಸ್ತಾನನ್ನು ಡ್ರೋನ್ ಸರ್ವೆ ಮೂಲಕ ಅಳೆಯಲಾಗಿತ್ತು. ‘ಕಾರವಾರ ಸೇರಿದಂತೆ ಉಳಿದ 8 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ಟನ್‌ನಷ್ಟು ಪಾರಂಪರಿಕ ತ್ಯಾಜ್ಯ ದಾಸ್ತಾನಿದ್ದು ಅವುಗಳನ್ನು ಎರಡನೇ ಹಂತದಲ್ಲಿ ವಿಲೇವಾರಿ ಮಾಡಲಾಗುತ್ತದೆ’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಎಇಇ ಕೆ.ಎಸ್.ಕಮ್ಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.