ADVERTISEMENT

ಕವಾಳೆ ಗಣಪತಿ ಭಾಗ್ವತರಿಗೆ ಯಕ್ಷಗಾನ ಅಕಾಡೆಮಿಯ ‘ಯಕ್ಷ ಸಿರಿ’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 16:24 IST
Last Updated 29 ಆಗಸ್ಟ್ 2022, 16:24 IST
ಕವಾಳೆ ಗಣಪತಿ ಭಾಗ್ವತ
ಕವಾಳೆ ಗಣಪತಿ ಭಾಗ್ವತ   

ಯಲ್ಲಾಪುರ: ಯಕ್ಷಗಾನದ ನೃತ್ಯ, ಮದ್ದಲೆ, ಭಾಗವತಿಕೆ, ಚೆಂಡೆ ಈ ನಾಲ್ಕೂ ಪ್ರಕಾರದ ಕಲಾವಿದರಾದ ತಾಲ್ಲೂಕಿನ ಕವಾಳೆ ಗಣಪತಿ ಭಾಗ್ವತ, ಯಕ್ಷಗಾನ ಅಕಾಡೆಮಿ ನೀಡುವ ಈ 2022ನೇ ಸಾಲಿನ ಪ್ರತಿಷ್ಠಿತ ‘ಯಕ್ಷಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಯಕ್ಷಗಾನ ಕಲಾವಿದರ ಕುಟುಂಬದಲ್ಲಿ 1959ರಲ್ಲಿ ಜನಿಸಿದ ಗಣಪತಿ ಭಾಗ್ವತರು, ತಂದೆ ರಾಮಚಂದ್ರ ಭಾಗವತ ಅವರ ಬಳಿ ತಮ್ಮ 14ನೇ ವಯಸ್ಸಿನಲ್ಲಿ ಯಕ್ಷಗಾನದ ಕಲಿಕೆ ಮದ್ದಲೆಯಿಂದ ಆರಂಭಿಸಿದರು. ನಂತರ ಹಂಗಾರಕಟ್ಟೆ ಮತ್ತು ಉಡುಪಿಗಳಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸಿದರು.

ಯಕ್ಷಗಾನ ಲೋಕದ ದಿಗ್ಗಜರಾದ ನಾರಾಯಣಪ್ಪ ಉಪ್ಪೂರು, ತಿಮ್ಮಪ್ಪ ನಾಯಕ ಬೆಳಿಂಜೆ, ದುರ್ಗಪ್ಪ ಗುಡಿಗಾರ್ ಮುಂತಾದ ಕಲಾವಿದರ ಮಾರ್ಗದರ್ಶನ ಹಾಗೂ ಮಹಾಬಲ ಹೆಗಡೆ ಕೆರೆಮನೆ, ಶಂಭು ಹೆಗಡೆ ಕೆರೆಮನೆ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಪಿ.ವಿ.ಹಾಸ್ಯಗಾರ, ಶೇಣಿ ಗೋಪಾಲಕೃಷ್ಣ ಭಟ್ಟ, ವಾಸುದೇವ ಸಾಮಗ, ನೆಬ್ಬೂರು ನಾರಾಯಣ ಭಾಗ್ವತ, ಕೊಳಗಿ ಅನಂತ ಹೆಗಡೆ ಮತ್ತಿತರ ಅನೇಕ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಕ್ವಗೊಳಿಸಿತು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗಣಪತಿ ಭಾಗ್ವತ್, ‘ಪ್ರಶಸ್ತಿ ಇಷ್ಟು ವರ್ಷದ ಸೇವೆಗೆ ಸಂದ ಗೌರವ. ಇದು ನನಗಲ್ಲ ಕಲೆಗೆ ಮೀಸಲು. ಕಲಾವಿದ, ಕಲಿಕೆಯ ವಿದ್ಯಾರ್ಥಿಗೆ ಅಧ್ಯಯನ ಶೀಲತೆ, ನಿರಂತರ ಕಲಿಕೆ, ಏಕ ಸೂತ್ರ, ಯಕ್ಷಗಾನ ಎಂಬ ವಿಶ್ವವಿದ್ಯಾಲಯದಲ್ಲಿ ನಾನಿನ್ನೂ ವಿದ್ಯಾರ್ಥಿ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.