ಶಿರಸಿ: ‘ಅರಣ್ಯವಾಸಿಗಳ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತೆ ಕಾರ್ಯನಿರ್ವಹಿಸಿದ ಅರಣ್ಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರಣ್ಯವಾಸಿಗಳ ವಿರುದ್ಧ ಮನ ಬಂದಂತೆ ವರ್ತಿಸಲು ಅರಣ್ಯವಾಸಿಗಳು ಎರಡನೇ ದರ್ಜೆ ನಾಗರಿಕರಲ್ಲ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ರೋಶ ಹೊರ ಹಾಕಿದರು.
ಹೊನ್ನಾವರ ತಾಲ್ಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗಾರ ಗ್ರಾಮದ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಸಾಗುವಳಿ ಕ್ಷೇತ್ರದಲ್ಲಿ ದೌರ್ಜನ್ಯ ಎಸಗಿದ ಅರಣ್ಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ಮೂಲಕ ಸೋಮವಾರ ದೂರು ನೀಡಿ ಮಾತನಾಡಿದರು.
‘ಅರಣ್ಯ ಹಕ್ಕು ಕಾಯಿದೆ ಅರ್ಜಿ ಸಲ್ಲಿಸಿ, ಅರ್ಜಿ ವಿಚಾರಣೆ ಇರುವಂತ ಸಂದರ್ಭದಲ್ಲಿ ಅರಣ್ಯವಾಸಿಗೆ ಕಾನೂನಿನಲ್ಲಿ ಅವಕಾಶ ನೀಡದೆ ದೈಹಿಕ, ಮಾನಸಿಕ, ನಷ್ಟ, ಕಾನೂನಿಗೆ ಚ್ಯುತಿ ತಂದಿರುವ ಅರಣ್ಯ ಸಿಬ್ಬಂದಿ ಮೇಲೆ ಶೀಘ್ರ ಕಾನೂನು ಕ್ರಮ ಜರುಗಿಸಬೇಕು. ಏಕಾಏಕಿಯಾಗಿ ಸಾಗುವಳಿ ಕ್ಷೇತ್ರಕ್ಕೆ 30ಕ್ಕಿಂತ ಹೆಚ್ಚು ಅರಣ್ಯ ಸಿಬ್ಬಂದಿ, ಪೊಲೀಸ್ ರಕ್ಷಣೆಯೊಂದಿಗೆ ಪ್ರವೇಶಿಸಿ, ಚಿತ್ರಿಕರಿಸುತ್ತಿರುವ ಮೊಬೈಲ್‌ನ ಕಸಿದುಕೊಂಡು ಮಹಿಳಾ ಅಧಿಕಾರಿ ದರ್ಪದಿಂದ ವರ್ತಿಸಿದ್ದಾರೆ’ ಎಂದರು.
‘40 ವರ್ಷದ ಗೇರು ಮರಗಳು, ಮಧ್ಯದಲ್ಲಿರುವ ಗಿಡ ಬುಡ ಸಹಿತ ಕಿತ್ತು ನಾಶಪಡಿಸಿ ₹50 ಸಾವಿರ ಸಷ್ಟಪಡಿಸಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಉದ್ದೇಶ ಪೂರ್ವಕವಾಗಿ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರಪಡಿಸಿದ್ದಾರೆ. ಅರಣ್ಯ ಕಚೇರಿಯಲ್ಲಿ ಅನಾಗರಿಕವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಹೇಳಿದರು.
ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಗಣೇಶ ನಾಯ್ಕ, ಶ್ರೀಕಾಂತ ದೇಶಭಂಡಾರಿ ಹೊನ್ನಾವರ, ಭಾಸ್ಕರ ದೇಶಭಂಡಾರಿ ಹೊದ್ಕೆ, ವಾಸುದೇವ ದೇಶಭಂಡಾರಿ, ರಿತೇಶ ನಾಯ್ಕ, ಸುಧಾಕರ ದೇಶಭಂಡಾರಿ, ಗಣಪತಿ ನಾಯ್ಕ, ನಾರಾಯಣ ನಾಯ್ಕ, ಪರಶುರಾಮ ನಾಯ್ಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.