ಅಂಕೋಲಾ: ‘180 ಮನೆಗಳಿರುವ ನಮ್ಮ ಗ್ರಾಮಕ್ಕೆ ಚುನಾವಣೆ ವೇಳೆ ಮತ ಕೇಳಲು ಮಾತ್ರ ರಾಜಕೀಯ ಮುಖಂಡರು ಬರುತ್ತಾರೆ. ಆಮೇಲೆ ಊರಿನತ್ತ ಯಾರೊಬ್ಬರೂ ಕಣ್ಣು ಹಾಯಿಸುವುದಿಲ್ಲ. ಗ್ರಾಮಕ್ಕೆ ಸಂಪರ್ಕಿಸಲು ಸರಿಯಾದ ರಸ್ತೆಯೂ ಇಲ್ಲ’
ಅಸಮಾಧಾನದೊಂದಿಗೆ ಗ್ರಾಮದ ಸಮಸ್ಯೆಯನ್ನು ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಕಣಿ–ಶಿವಪುರ ಗ್ರಾಮಸ್ಥರು ತೋಡಿಕೊಂಡ ಪರಿ ಇದು. ತಾಲ್ಲೂಕು ಕೇಂದ್ರದಿಂದ 23 ಕಿ.ಮೀ ದೂರದಲ್ಲಿರುವ ಈ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ಗ್ರಾಮಕ್ಕೆ ಕಾಲಿಟ್ಟವರಿಗೆ ಕಾಣಸಿಗುತ್ತದೆ.
‘ರಾಷ್ಟ್ರೀಯ ಹೆದ್ದಾರಿಯಿಂದ 7 ಕಿ.ಮೀ ದೂರದಲ್ಲಿರುವ ಗ್ರಾಮ ಸಂಪರ್ಕಿಸಲು ಏಕೈಕ ಮಣ್ಣಿನ ರಸ್ತೆಯೇ ಆಸರೆ. ಮಳೆಗಾಲದಲ್ಲಿ ಕೆಸರಾಗಿ, ಬೇಸಿಗೆಯಲ್ಲಿ ಧೂಳು ಹಾರಾಡುವ ರಸ್ತೆಯಲ್ಲೇ ಓಡಾಟ ನಡೆಸುತ್ತೇವೆ. ಗಟ್ಟಿಮುಟ್ಟಾಗಿದ್ದವರು ಮಾತ್ರ ಈ ರಸ್ತೆಯಲ್ಲಿ ವಾಹನ ಚಲಾಯಿಸಬಹುದು’ ಎಂದು ಗ್ರಾಮದ ಯುವಕರು ಹೇಳಿದರು.
‘ರಸ್ತೆ ಸಂಪರ್ಕವೇ ಸರಿ ಇಲ್ಲ ಎಂಬ ಕಾರಣಕ್ಕೆ ಗ್ರಾಮಕ್ಕೆ ಈವರೆಗೂ ಬಸ್ ಓಡಾಡುತ್ತಿಲ್ಲ. ಪಟ್ಟಣದ ಶಾಲೆ, ಕಾಲೇಜುಗಳಿಗೆ ತೆರಳುವ ಗ್ರಾಮದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಕ್ರಮಿಸಿ, ಹೆದ್ದಾರಿಯಲ್ಲಿ ಸಂಚರಿಸುವ ಬಸ್ ಹಿಡಿಯಬೇಕು. ಸಕಾಲಕ್ಕೆ ತರಗತಿಗೆ ತಲಪಲು ಸಾಧ್ಯವಾಗದೆ ಅವರು ಪಡಿಪಾಟಲು ಅನುಭವಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
‘ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಸಿಕೊಡಿ ಎಂಬ ಬೇಡಿಕೆ ಹಲವು ವರ್ಷಗಳಿಂದ ಮುಂದಿಡುತ್ತಿದ್ದೇವೆ. ಅಧಿಕಾರಿಗಳು ಮಾತ್ರ ಅರ್ಜಿ ಸ್ಪಂದಿಸುತ್ತಿಲ್ಲ. ತೋಟ, ಗದ್ದೆಗೆ ನೀರು ಹಾಯಿಸಲು ಪಂಪ್‌ಸೆಟ್ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಮನೆ ಮನೆಗೆ ನೀರು ತಲುಪಿಸುವ ಜಲಜೀವನ್ ಮಿಷನ್ ಯೋಜನೆಯೂ ಗ್ರಾಮದಲ್ಲಿ ಸಾಕಾರಗೊಂಡಿಲ್ಲ’ ಎಂದು ರೈತರು ದೂರಿದರು.
ಗ್ರಾಮದಲ್ಲಿ ರಸ್ತೆ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಈವರೆಗೆ ಸ್ಪಂದನೆ ಸಿಕ್ಕಿಲ್ಲಸುಮನಾ ನಾಯಕ ಮೊಗಟಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಟವರ್ ಇದೆ..ನೆಟ್‌ವರ್ಕ್ ಇಲ್ಲ
‘ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆಯೇ ಬಿಎಸ್ಎನ್ಎಲ್ ಟವರ್ ನಿರ್ಮಾಣಗೊಂಡಿದೆ. ಆದರೆ ಟವರ್ ನಿರ್ಮಿಸಿದ ಮೇಲೆ ಈವರೆಗೆ ಯಾವುದೇ ಸಂಪರ್ಕವನ್ನು ನೀಡಿಲ್ಲ. ಈ ಕುರಿತು ಸಂಬಂಧ ಪಟ್ಟವರನ್ನು ಪ್ರಶ್ನಿಸಿದರೆ ಟವರ್ ನಿರ್ಮಿಸುವ ಕೆಲಸ ಮುಗಿದಿದೆ ಕೇಬಲ್ ಸಂಪರ್ಕ ನೀಡಲು ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆಯ ಅನುಮತಿ ಬೇಕೆಂದು ವರ್ಷಗಳಿಂದ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಟವರ್ ಇದ್ದರೂ ನೆಟ್‌ವರ್ಕ್ ಇಲ್ಲದೆ ತೊಂದರೆ ಎದುರಿಸುತ್ತಿದ್ದೇವೆ’ ಎಂದು ಗ್ರಾಮದ ಮುಖಂಡ ಪ್ರದೀಪ ನಾಯಕ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.