ADVERTISEMENT

ಕೊರೊನಾಗಿಂತ ಹೆಚ್ಚು ಭಯ ಹುಟ್ಟಿಸಿದ್ದು ಕೆಎಫ್‌ಡಿ !

ಉತ್ತರ ಕನ್ನಡ ಜಿಲ್ಲೆಯಲ್ಲಿ 68 ಮಂಗನ ಕಾಯಿಲೆ ಪ್ರಕರಣ

ಸಂಧ್ಯಾ ಹೆಗಡೆ
Published 30 ಏಪ್ರಿಲ್ 2020, 11:56 IST
Last Updated 30 ಏಪ್ರಿಲ್ 2020, 11:56 IST
   

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗಿಂತ ಹೆಚ್ಚಾಗಿ ಕ್ಯಾನಸೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಹೆಚ್ಚು ಭಯ ಹುಟ್ಟಿಸಿದೆ. ಫೆಬ್ರುವರಿಯಿಂದ ಈವರೆಗೆ ಜಿಲ್ಲೆಯಲ್ಲಿ 68 ಪ್ರಕರಣಗಳು ದೃಢಪಟ್ಟಿವೆ.

ಶ್ರಮಿಕ ವರ್ಗದವರು, ಕೃಷಿಕರನ್ನೇ ಹೆಚ್ಚಾಗಿ ಕಾಡುವ ಈ ಕಾಯಿಲೆ ಕಾಡಂಚಿನಲ್ಲಿ ಬದುಕುವವರ ನಿದ್ದೆಗೆಡಿಸಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಏಪ್ರಿಲ್‌ ತಿಂಗಳಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಕೊರೊನಾ ಸೋಂಕಿನ ಗದ್ದಲದಲ್ಲಿ ಕೆಎಫ್‌ಡಿ ಪ್ರಕರಣಗಳ ಸದ್ದಡಗಿದೆ.

‘2018ರಲ್ಲಿ ಸಿದ್ದಾಪುರ, ಹೊನ್ನಾವರ, ಭಟ್ಕಳ, ಜೊಯಿಡಾ ತಾಲ್ಲೂಕುಗಳಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ, 2019ರಲ್ಲಿ ಶಿರಸಿ, ಅಂಕೋಲಾ, ಕುಮಟಾ (ಯಾಣ) ತಾಲ್ಲೂಕುಗಳಲ್ಲೂ ಪತ್ತೆಯಾಯಿತು. ಆ ಮೂಲಕ ಜಿಲ್ಲೆಯ ಏಳು ತಾಲ್ಲೂಕುಗಳು ಮಂಗನ ಕಾಯಿಲೆ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿದವು. ಈ ಬಾರಿ ಜೊಯಿಡಾದ ಗುಂದ, ಕುಂಬಾರವಾಡದಂತಹ ಪ್ರದೇಶಗಳಲ್ಲಿ ಕೆಎಫ್‌ಡಿ ಪ್ರಕರಣ ದೃಢಪಟ್ಟಿದೆ. ದಶಕಗಳ ಈಚೆಗೆ ಇಲ್ಲಿ ಈ ಪ್ರಕರಣಗಳು ಕಂಡುಬಂದಿರಲಿಲ್ಲ’ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ADVERTISEMENT

’ಕಳೆದ ವರ್ಷ ಜನೆವರಿಯಲ್ಲಿ ಮೊದಲ ಕೆಎಫ್‌ಡಿ ಪ್ರಕರಣ ದಾಖಲಾಗಿತ್ತು. ಈ ವರ್ಷ ಫೆಬ್ರುವರಿಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮಾರ್ಚ್‌ ಕೊನೆಯವರೆಗೆ 27 ಜನರಿಗೆ ಮಂಗನ ಕಾಯಿಲೆ ಬಂದಿತ್ತು. ಆದರೆ, ಏಪ್ರಿಲ್‌ನಲ್ಲಿ ಏಕಾಏಕಿ ಏರಿಕೆಯಾಗಿ, 41 ಜನರ ರಕ್ತ ಪರೀಕ್ಷೆ ಮಾದರಿಗಳು ಪಾಸಿಟಿವ್ ಬಂದಿವೆ. ಈ ಬಾರಿ ಮಂಗಗಳ ಸಾವು ಕೂಡ ಅಧಿಕವಾಗಿದೆ. 113ಕ್ಕೂ ಹೆಚ್ಚು ಮಂಗಗಳು ಸತ್ತಿವೆ. ಸಿದ್ದಾಪುರ ತಾಲ್ಲೂಕೊಂದರಲ್ಲೇ 80ರಷ್ಟು ಮಂಗಗಳ ಮೃತದೇಹ ಪತ್ತೆಯಾಗಿದೆ. ಮಂಗಗಳ ಸಾವು, ಮನುಷ್ಯ ಕಾಡಿನ ಓಡಾಟ, ಕಾಡುಪ್ರಾಣಿಗಳ ಸಂಚಾರ ಇವೆಲ್ಲವೂ, ಮಂಗನ ಕಾಯಿಲೆ ಹೆಚ್ಚಲು ಕಾರಣವಾಗುತ್ತವೆ’ ಎನ್ನುತ್ತಾರೆ ಅವರು.

‘ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಯಿಲೆ ನಿರೋಧಕ ಲಸಿಕೆ ಹಾಕಲು ಪ್ರಾರಂಭಿಸಿದ್ದರೆ, ಈ ವರ್ಷ ಆಗಸ್ಟ್‌ನಲ್ಲೇ ಲಸಿಕೆ ಹಾಕಲು ಪ್ರಾರಂಭಿಸಿದ್ದೆವು. ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದ್ದೇವೆ. ಸಾಮಾನ್ಯವಾಗಿ ಹಿರಿಯರನ್ನು ಬಾಧಿಸುತ್ತಿದ್ದ ಕಾಯಿಲೆ, ಈ ಬಾರಿ ಮಕ್ಕಳಿಗೂ ಬಂದಿದೆ. ಇಂತಹ ಕಡೆಗಳಲ್ಲಿ ಮನೆಗಳ ಸುತ್ತ ಔಷಧ ಸಿಂಪರಣೆ ಮಾಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್.

’ಲಾಕ್‌ಡೌನ್ ಆರಂಭವಾದ ಮೇಲೆ ಹಳ್ಳಿಗಳಲ್ಲಿ ಜನರು ಬೇರೆಡೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ, ಕಾಡಿಗೆ ಕಟ್ಟಿಗೆ, ದರಕು ತರಲು ಹೋಗುವುದು ಹೆಚ್ಚಾಯಿತು. ಇದು ಕೂಡ ಏಪ್ರಿಲ್ ತಿಂಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಲು ಕಾರಣವಾಗಿರಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.