ADVERTISEMENT

ಆರೋಗ್ಯ ಇಲಾಖೆ ಕ್ರಮ; ಉತ್ತರ ಕನ್ನಡ ಜಿಲ್ಲೆಯಿಂದ ದೂರವಾದ ಮಂಗನ ಕಾಯಿಲೆ

ಲಸಿಕೆ ವಿತರಣೆ ಸ್ಥಗಿತ

ಗಣಪತಿ ಹೆಗಡೆ
Published 9 ಮಾರ್ಚ್ 2023, 19:45 IST
Last Updated 9 ಮಾರ್ಚ್ 2023, 19:45 IST
ಸಿದ್ದಾಪುರ ತಾಲ್ಲೂಕಿನ ತೋಟವೊಂದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಉಣ್ಣೆ ಸಂಗ್ರಹಿಸಿದರು  (ಸಂಗ್ರಹ ಚಿತ್ರ)
ಸಿದ್ದಾಪುರ ತಾಲ್ಲೂಕಿನ ತೋಟವೊಂದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಉಣ್ಣೆ ಸಂಗ್ರಹಿಸಿದರು  (ಸಂಗ್ರಹ ಚಿತ್ರ)   

ಕಾರವಾರ: ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆ (ಕೆ.ಎಫ್.ಡಿ.) ಈ ಬಾರಿ ಜಿಲ್ಲೆಯಿಂದ ದೂರವಾಗಿದೆ. ಈವರೆಗೆ ಕಾಯಿಲೆ ಪತ್ತೆಯಾದ ವರದಿ ಆಗಿಲ್ಲ.

2019ರಿಂದ ಸತತವಾಗಿ ನಾಲ್ಕು ವರ್ಷ ಸೆಪ್ಟೆಂಬರ್‌ ತಿಂಗಳಿನಿಂದ ಮೇ ವರೆಗೆ ಸಿದ್ದಾಪುರ, ಹೊನ್ನಾವರ ಸೇರಿದಂತೆ ಏಳು ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಭೀತಿ ಆವರಿಸುತ್ತಿತ್ತು. ಹಿಂದಿನ ನಾಲ್ಕು ವರ್ಷಗಳಲ್ಲಿ 199 ಮಂಗನ ಕಾಯಿಲೆ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿದ್ದವು. ಈ ಪೈಕಿ 8 ಮಂದಿ ಮೃತಪಟ್ಟಿದ್ದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ನಾಲ್ಕು ಕಡೆಗಳಲ್ಲಿ ಮಂಗ ಸತ್ತಿರುವ ಪ್ರಕರಣ ವರದಿಯಾಗಿದ್ದರೂ ಈವರೆಗೆ ಮಂಗನ ಕಾಯಿಲೆ ಕಾಣಿಸಿಕೊಂಡಿಲ್ಲ. ಮಂಗಗಳು ಸಾವನ್ನಪ್ಪಿದ ಪ್ರದೇಶ ವ್ಯಾಪ್ತಿಯಲ್ಲಿ ಜ್ವರ ಕಾಣಿಸಿಕೊಂಡಿದ್ದ ಶಂಕಿತ 30 ಮಂದಿಯ ರಕ್ತ ತಪಾಸಣೆಯನ್ನೂ ಆರೋಗ್ಯ ಇಲಾಖೆ ನಡೆಸಿತ್ತು. ಆದರೆ ಇವರಲ್ಲಿ ಯಾರೊಬ್ಬರೂ ಕಾಯಿಲೆಗೆ ತುತ್ತಾಗಿಲ್ಲ ಎಂಬುದೂ ದೃಢಪಟ್ಟಿದೆ.

ADVERTISEMENT

‘ಪ್ರತಿ ಬಾರಿ ಬೇಸಿಗೆ ಸಮೀಪಿಸಿದಂತೆ ಮಂಗನ ಕಾಯಿಲೆ ನಿಯಂತ್ರಣಕ್ಕೆ ವೇಗದ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಮಳೆಗಾಲದ ಸಂದರ್ಭದಿಂದಲೇ ಕಾಯಿಲೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. ಇದು ರೋಗ ಹರಡದಿರಲು ಮುಖ್ಯ ಕಾರಣವಾಗಿರಬಹುದು’ ಎಂದು ಹೊನ್ನಾವರದಲ್ಲಿರುವ ಕೆ.ಎಫ್.ಡಿ. ಚಿಕಿತ್ಸಾ ಕೇಂದ್ರದ ಅಧೀಕ್ಷಕ ಡಾ.ಸತೀಶ್ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಗನ ಕಾಯಿಲೆ ಹರಡಬಹುದಾದ ಸ್ಥಳಗಳನ್ನು ಈ ಮೊದಲೇ ಪಟ್ಟಿ ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಕಾಯಿಲೆ ಕಾಣಿಸಿಕೊಂಡ ಗ್ರಾಮಗಳಲ್ಲಿ ಉಣ್ಣೆ ನಿಯಂತ್ರಣ ಕೆಲಸ ಪರಿಣಾಮಕಾರಿಯಾಗಿ ಮಾಡಲಾಯಿತು. ಉಣ್ಣೆ ನಿರೋಧಕ ಡಿ.ಎಂ.ಪಿ. ತೈಲವನ್ನು ಜನರಿಗೆ ವಿತರಿಸಲಾಗಿತ್ತು. ಕಳೆದ ವರ್ಷ ಮಂಗನ ಕಾಯಿಲೆ ತಡೆ ಲಸಿಕೆಯನ್ನೂ ಹೆಚ್ಚು ಜನರು ತೆಗೆದುಕೊಳ್ಳುವಂತೆಯೂ ಕ್ರಮ ವಹಿಸಲಾಗಿತ್ತು’ ಎಂದೂ ತಿಳಿಸಿದರು.

‘ಸಿದ್ದಾಪುರ, ಹೊನ್ನಾವರದಲ್ಲಿ ಮಂಗ ಸತ್ತ ಪ್ರಕರಣ ವರದಿಯಾಗಿದ್ದವು. ತಕ್ಷಣ ಜನರು ಆರೋಗ್ಯ ಇಲಾಖೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಂಗ ಸತ್ತ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಉಣ್ಣೆಗಳು ಹರಡದಂತೆ ಕ್ರಮ ಕೈಗೊಳ್ಳಲಾಯಿತು. ಜನರಿಗೂ ಅರಣ್ಯ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಿದ್ದು ಫಲ ನೀಡಿತು’ ಎಂದರು.

***

ಹಿಂದೆಂದಿಗಿಂತ ಈ ಬಾರಿ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಈವರೆಗೆ ಫಲ ನೀಡಿದೆ.
–ಡಾ.ಸತೀಶ್ ಶೇಟ್, ಕೆ.ಎಫ್.ಡಿ. ಕೇಂದ್ರದ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.