ADVERTISEMENT

60 ಶಾಲೆಗಳಲ್ಲಿ ತರಕಾರಿ ಕೈತೋಟ

ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಬಿಇಒ ಎಂ.ಎಸ್.ಹೆಗಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 9:14 IST
Last Updated 18 ಫೆಬ್ರುವರಿ 2020, 9:14 IST
ಶಿರಸಿ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಸ್ಕಾಂ ಅಧಿಕಾರಿ ಧರ್ಮ ಮಾತನಾಡಿದರು
ಶಿರಸಿ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಸ್ಕಾಂ ಅಧಿಕಾರಿ ಧರ್ಮ ಮಾತನಾಡಿದರು   

ಶಿರಸಿ: ಎಸ್ಸೆಸ್ಸೆಲ್ಸಿ ಪೂರ್ವ ತಯಾರಿ ಪರೀಕ್ಷೆ ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ನಡೆಯುತ್ತಿದೆ. ಶೇ 95ಕ್ಕಿಂತ ಹೆಚ್ಚು ಅಂಕ ಪಡೆದ ಶೈಕ್ಷಣಿಕ ಜಿಲ್ಲೆಯ ಮಕ್ಕಳಿಗೆ ಫೆ.26ರಿಂದ ಒಂದು ವಾರ ಸನಿವಾಸ ತರಬೇತಿ ಹಮ್ಮಿಕೊಳ್ಳಲಾಗುತ್ತದೆ ಎಂದು ಬಿಇಒ ಎಂ.ಎಸ್.ಹೆಗಡೆ ಹೇಳಿದರು.

ಸೋಮವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನರೇಗಾ ಯೋಜನೆಯಲ್ಲಿ ತಾಲ್ಲೂಕಿನ 60 ಶಾಲೆಗಳಲ್ಲಿ ತರಕಾರಿ ಕೈತೋಟ ಪ್ರಾರಂಭಿಸಲು ಸೂಚಿಸಲಾಗಿದೆ ಎಂದರು.

ತಾಲ್ಲೂಕಿನ ಭೈರುಂಬೆ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಮೇಲಧಿಕಾರಿಗೆ ಪತ್ರ ಬರೆಯಲು ಸಭೆ ನಿರ್ಧರಿಸಿತು. ವಿಷಯ ಪ್ರಸ್ತಾಪಿಸಿದ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅವರು, ‘ಭೈರುಂಬೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ, ಮಹಿಳಾ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರು ಬಂದಿವೆ. ಇವರಿಬ್ಬರ ನಡುವಿನ ಮನಸ್ತಾಪದಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಇವರಿಬ್ಬರನ್ನೂ ವರ್ಗಾವಣೆ ಮಾಡಬೇಕಾಗಿದೆ’ ಎಂದರು.

ADVERTISEMENT

ಸದಸ್ಯ ನರಸಿಂಹ ಹೆಗಡೆ ಮಾತನಾಡಿ, ‘ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣವಾಗಿದೆ. ಆದರೆ, ಹಸ್ತಾಂತರವಾಗದ ಕಾರಣ ಉದ್ಘಾಟನೆಯಾಗಿಲ್ಲ. ಆದರೆ, ವೈದ್ಯರ ತರಾತುರಿ ನಿರ್ಣಯದಿಂದ ಉದ್ಘಾಟನೆಗೆ ಮುನ್ನವೇ ಹೊಸ ಕಟ್ಟಡ ಬಳಕೆಯಾಗುತ್ತಿದೆ. ಸರ್ಕಾರದ ನಿಯಮಕ್ಕೆ ಬೆಲೆಯಿಲ್ಲದಂತೆ, ವರ್ತಿಸುತ್ತಿರುವ ವೈದ್ಯರು ಇಲ್ಲಿರುವ ಅಗತ್ಯವಿಲ್ಲ’ ಎಂದರು.

‘ಪಹಣಿಯಲ್ಲಿ ಪ್ರಮುಖ ಬೆಳೆ ಮಿಶ್ರಬೆಳೆಯಡಿ, ಮಿಶ್ರಬೆಳೆಯಲ್ಲಿ ಪ್ರಮುಖ ಬೆಳೆ ನಮೂದಾಗುತ್ತಿದೆ. ಇದರಿಂದ ಬೆಳೆಸಾಲ ಪಡೆಯಲು ತೀವ್ರ ಸಮಸ್ಯೆ ಆಗುತ್ತಿದೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ ಹೇಳಿದರು.

ರೈತರಿಗೆ ಬೆಳೆವಿಮೆ ಸಂದಾಯ ಸಂಬಂಧ 103 ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಬಾಕಿಯಿವೆ. ಆಧಾರ್ ಕಾರ್ಡ್‌ ಹಾಗೂ ಬ್ಯಾಂಕ್ ಖಾತೆಯಲ್ಲಿನ ಮಾಹಿತಿ ವ್ಯತ್ಯಾಸದಿಂದ ಸಮಸ್ಯೆ ಉದ್ಭವಿಸಿದ್ದು, ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿ ಸಭೆಗೆ ಸಮಜಾಯಿಷಿ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ವಿನಾಯಕ ಭಟ್ಟ ಮಾತನಾಡಿ, ‘ರೇವಣಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕವಾಗಿದೆ. ಕೋವಿಡ್–19ರ ಕುರಿತು ಮನೆಮನೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಎಲ್ಲ ಜಲಮೂಲಗಳಿಗೆ ಕ್ಲೋರಿನೇಷನ್ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.