ADVERTISEMENT

‘ಬಾಲರಾಮ’ನ ಹೋಲುವ ‘ಕೋದಂಡರಾಮ’

ಭಟ್ಕಳ ಮಣ್ಕುಳಿಯ ರಘುನಾಥ ದೇವಾಲಯದಲ್ಲಿದೆ ಧನಸ್ಸುಧಾರಿ ಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 5:56 IST
Last Updated 21 ಜನವರಿ 2024, 5:56 IST
ರಘುನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಕೋದಂಡ ರಾಮ
ರಘುನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಕೋದಂಡ ರಾಮ   

ಭಟ್ಕಳ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಬಾಲರಾಮನ ಮೂರ್ತಿ ಈಗ ದೇಶದ ಗಮನಸೆಳೆಯುತ್ತಿದೆ. ಅದೇ ಮೂರ್ತಿಯ ಮಾದರಿಯನ್ನು ಹೋಲುವ ಭಟ್ಕಳದ ಮಣ್ಕುಳಿಯಲ್ಲಿರುವ ರಘುನಾಥ ದೇವಸ್ಥಾನದಲ್ಲಿರುವ ಕೋದಂಡರಾಮ ಮೂರ್ತಿ ಭಕ್ತರ ಗಮನಸೆಳೆಯಲಾರಂಭಿಸಿದೆ.

ಬಾಲರಾಮನ ಮೂರ್ತಿಯು ಹೇಗಿರಬಹುದು ಎಂಬ ಕುತೂಹಲಕ್ಕೆ ಶುಕ್ರವಾರ ಉತ್ತರ ಸಿಕ್ಕಿತು. ಮೂರ್ತಿಯ ಚಿತ್ರ ಗಮನಿಸಿದ ಭಕ್ತರ ಮನದಲ್ಲಿ ಇಲ್ಲಿನ ಕೋದಂಡರಾಮನ ಮೂರ್ತಿಯು ಅಚ್ಚೊತ್ತಿತು. ಆಕರ್ಷಣೆಯ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ಸ್ಥಾಪಿತವಾಗಲಿರುವ ಮೂರ್ತಿಯಂತೆಯೇ ಮಣ್ಕುಳಿಯಲ್ಲಿರುವ ಪುಟ್ಟ ದೇವಾಲಯದ ಮೂರ್ತಿಯೂ ಇರುವುದು ಸಹಜವಾಗಿ ಇಲ್ಲಿನ ಭಕ್ತರ ಹೆಮ್ಮೆಗೆ ಕಾರಣವಾಗಿದೆ. 

1590ರಲ್ಲಿ ಚೆನ್ನಾಬೈರಾದೇವಿ ಕಾಲದಲ್ಲಿ ಪ್ರತಿಷ್ಠಾಪಿಸಿದ ಏಕೈಕ ರಾಮನಮೂರ್ತಿ ಇದಾಗಿದೆ. ಕೆಳದಿ ಸಂಸ್ಥಾನದ ಚೆನ್ನಬೈರಾದೇವಿ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದ ನಾರಾಯಣ ಕಿಣಿ ಹಾಗೂ ಬಾಳಾ ಕಿಣಿ ಎಂಬ ಸಹೋದರರು ಇಲ್ಲಿ ಕೋದಂಡ ರಾಮನನ್ನು ಪ್ರತಿಷ್ಠಾಪಿಸಿ ಪೂಜಿಸಿದರು ಎಂಬ ಇತಿಹಾಸ ಇದೆ.

ADVERTISEMENT

‘ದ್ರಾವಿಡ ಶೈಲಿಯಲ್ಲಿ ಗೋಪುರ ನಿರ್ಮಾಣ ಮಾಡಿ ಅಲ್ಲಲ್ಲಿ ಹನುಮನ ಕಪಿಚೇಷ್ಟೆಯ ಆಕೃತಿಗಳನ್ನು ಗೋಪುರದ ಮೇಲೆ ಚಿತ್ರಿಸಲಾಗಿದೆ. 1955ರಲ್ಲಿ ಗುದ್ದುಗೆಯ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಧರ ಸ್ವಾಮಿಗಳು ಸಂಜೆ ವಿಹಾರಕ್ಕೆ ಹೊರಟಾಗ ಈ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದ ವೆಂಕಟೇಶ ಭಟ್ ಅವರನ್ನು ಕರೆದು ಪುನರುತ್ಥಾನ ಮಾಡಲು ಸೂಚಿಸಿದ್ದರು ಎಂಬ ಐತಿಹ್ಯವಿದೆ’ ಎನ್ನುತ್ತಾರೆ ದೇವಸ್ಥಾನದ ಅರ್ಚಕ ರಾಮಚಂದ್ರ ಭಟ್.

‘ಅಯೋಧ್ಯೆಯ ಬಾಲರಾಮನ ಮೂರ್ತಿಯಂತೆ ಕೋದಂಡ ರಾಮ ಮೂರ್ತಿಯನ್ನು ಕೂಡ ಏಕ ಕೃಷ್ಣಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಕೈಯಲ್ಲಿ ಬಿಲ್ಲು ಬಾಣ ಹಿಡಿದ ಯುದ್ದಕ್ಕೆ ಹೊರಟು ನಿಂತ ರಾಮನ ಮೂರ್ತಿ ಭಕ್ತರ ಕಣ್ಮನ ಸೆಳೆಯವಂತಿದೆ. ಕೊದಂಡ ರಾಮ ಮೂರ್ತಿಯ ಮೇಲ್ಗಡೆ ಹುಲಿಯ ಬಾಯಲ್ಲಿ ವಿಷ್ಣುವಿನ ದಶವತಾರ ಮೂರ್ತಿ ಕೆತ್ತನೆ ಮಾಡಲಾಗಿದೆ. ತಲೆಯ ಮೇಲ್ಗಡೆ ಕೀರ್ತಿ ಕಿರಿಟ ಇರಿಸಿದ್ದು, ಕೆಳಭಾಗದಲ್ಲಿ ಗರುಡನನ್ನು ಕೆತ್ತನೆ ಮಾಡಲಾಗಿದೆ. ಕೋದಂಡ ರಾಮ ಮೂರ್ತಿ ಬಲಭಾಗದಲ್ಲಿ ಬಿಲ್ಲುಧಾರಿ ಲಕ್ಷ್ಮಣ ಹಾಗೂ ಎಡಭಾಗದಲ್ಲಿ ಸೀತೆಯನ್ನು ಚಿಕ್ಕದಾಗಿ ಕೆತ್ತನೆ ಮಾಡಿರುವುದು ವಿಶೇಷವಾಗಿದೆ’ ಎಂದು ವಿವರಿಸಿದರು.

ರಾಮ ನವಮಿಯಂದು ತೊಟ್ಟಿಲು ಸೇವೆಯಲ್ಲಿ ಕೂರಿಸುವ ಬಾಲರಾಮ
ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಗರ್ಭಗುಡಿ
ರಘುನಾಥ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ಹೊರ ಊರುಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ
ರಾಮಚಂದ್ರ ಭಟ್ ಅರ್ಚಕ

ರಾಮನವಮಿಯಂದು ತೊಟ್ಟಿಲು ಸೇವೆ ರಘುನಾಥ ದೇವಸ್ಥಾನದಲ್ಲಿ ರಾಮನವಮಿಯಂದು ವಿಶೇಷ ಸೇವೆ ನಡೆಯುತ್ತದೆ. ಭಟ್ಕಳದ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಎರಡು ದಿವಸ ಮೊದಲು ಹನುಮಂತನ ಉತ್ಸವ ಮೂರ್ತಿಯೂ ರಘುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ರಾಮನ ಅಪ್ಪಣೆ ಪಡೆದು ರಾಮನವಮಿಯಂದು ಹನುಮಂತ ರಥ ಏರುವುದು ವಾಡಿಕೆ. ರಾಮನವಮಿ ದಿವಸ ಇಲ್ಲಿ ಬಾಲರಾಮನ ಮೂರ್ತಿಗೆ ತೊಟ್ಟಿಲು ಸೇವೆ ನಡೆಸಲಾಗುತ್ತದೆ. ಬಾಲರಾಮನ ಮೂರ್ತಿಗೆ ಮಗುವಿನ ಅಲಂಕಾರ ಮಾಡಿ ತೊಟ್ಟಿಲಲ್ಲಿರಿಸಿ ಆಡಿಸಲಾಗುತ್ತದೆ. ಮಕ್ಕಳಾಗದವರು ಭಕ್ತರು ಈ ಸಮಯದಲ್ಲಿ ದೇಗುಲಕ್ಕೆ ಬೇಟಿ ನೀಡಿ ಹರಕೆ ಹೊತ್ತರೆ ಈಡೇರುವುದು ಎನ್ನುವುದು ಭಕ್ತರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.