ಕಾರವಾರದ ಕೊಡಸಳ್ಳಿಯಲ್ಲಿರುವ ಜಲ ವಿದ್ಯುದಾಗಾರ.
ಕಾರವಾರ: 120 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯದ ತಾಲ್ಲೂಕಿನ ಕೊಡಸಳ್ಳಿ ವಿದ್ಯುದಾಗಾರಕ್ಕೆ (ಕೆಪಿಸಿ) ವಿದ್ಯುತ್ ಪೂರೈಕೆ ಸ್ಥಗಿತಗೊಂಡು 16 ದಿನವಾಗಿದೆ. ಇಲ್ಲಿನ ಅಣೆಕಟ್ಟೆ, ವಿದ್ಯುದಾಗಾರ ನಿರ್ವಹಣೆಗೆ ಜನರೇಟರ್ ಬಳಕೆ ಅನಿವಾರ್ಯವಾಗಿದೆ.
ತಾಲ್ಲೂಕಿನ ಕದ್ರಾದಿಂದ ಕೊಡಸಳ್ಳಿ ಸಂಪರ್ಕಿಸುವ ರಸ್ತೆಯ ಬಾಳೆಮನೆ ಸಮೀಪ ಭೂಕುಸಿತದಿಂದ ಸಂಪರ್ಕ ಸ್ಥಗಿತಗೊಂಡಿದೆ. ಜನರೇಟರ್ ಕಾರ್ಯನಿರ್ವಹಣೆಗೆ, ಡೀಸೆಲ್ ಪೂರೈಕೆಗೂ ಸಮಸ್ಯೆಯಾಗಿದೆ.
‘ಜೂನ್ 10 ರಿಂದ ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗುತಿತ್ತು. 19ರಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. ಇದರಿಂದ ಅಣೆಕಟ್ಟೆ, ಜಲ ವಿದ್ಯುದಾಗಾರದಲ್ಲಿನ ಯಂತ್ರೋಪಕರಣಗಳ ಚಾಲನೆಗೆ ಅಡ್ಡಿ ಆಗಿದೆ. ಪರ್ಯಾಯ ವ್ಯವಸ್ಥೆಗೆ ಡೀಸೆಲ್ ಜನರೇಟರ್ ಇರಿಸಿಕೊಂಡಿದ್ದರಿಂದ ಅದರ ಬಲದಲ್ಲಿ ಯಂತ್ರೋಪಕರಣ, ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಕೊಡಸಳ್ಳಿ ಜಲ ವಿದ್ಯುದಾಗಾರದ ಕಾರ್ಯಪಾಲಕ ಎಂಜಿನಿಯರ್ ಶ್ರೀಕಾಂತ ಕಲಗಾರೆ ತಿಳಿಸಿದರು.
ಕಾರವಾರದ ಕೊಡಸಳ್ಳಿಯಲ್ಲಿರುವ ಜಲ ವಿದ್ಯುದಾಗಾರ.
‘ಪ್ರತಿ ಮಳೆಗಾಲದಲ್ಲೂ ವಿದ್ಯುತ್ ವ್ಯತ್ಯಯವಾಗುತ್ತದೆ. ಇದೇ ಮೊದಲ ಬಾರಿಗೆ ನಿರಂತರ 16 ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲ. ಸಮಸ್ಯೆ ಪರಿಹಾರಕ್ಕೆ ಹೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.
‘ವಿದ್ಯುತ್ ಉತ್ಪಾದನೆ ಪ್ರಕ್ರಿಯೆಗೆ ಅಗತ್ಯವಿರುವ ಯಂತ್ರೋಪಕರಣಗಳ ನಿರ್ವಹಣೆಗೆ 33ಕೆವಿ ಮಾರ್ಗದಿಂದ ಪೂರೈಕೆಯಾಗುವ ವಿದ್ಯುತ್ ಅಗತ್ಯವಿದೆ. ಸದ್ಯಕ್ಕೆ ಜನರೇಟರ್ ಬಳಸಿಯೇ ವಿದ್ಯುತ್ ಉತ್ಪಾದನೆ ಕೆಲಸ ನಡೆದಿದೆ. ಇಲ್ಲಿ ಬಳಸಿದ ವಿದ್ಯುತ್ ನಾವು ಬಳಸಬೇಕಾದರೆ, ಪ್ರತ್ಯೇಕ ವ್ಯವಸ್ಥೆ, ಅನುಮತಿ ಪಡೆಯಬೇಕು’ ಎಂದು ಶ್ರೀಕಾಂತ ಕಲಗಾರೆ ತಿಳಿಸಿದರು.
ಕೊಡಸಳ್ಳಿ ಜಲ ವಿದ್ಯುದಾಗಾರದಲ್ಲಿ ಸದ್ಯ ಜನರೇಟರ್ ಬಳಸಿ ನಿರ್ವಹಣೆ ಕೆಲಸ ನಡೆದಿದ್ದು ಅಗತ್ಯ ಪ್ರಮಾಣದಷ್ಟು ಮಾತ್ರ ಡೀಸೆಲ್ ಇದೆ. ಖಾಲಿಯಾದರೆ ತುಂಬಾ ಕಷ್ಟವಾಗಲಿದೆ.ಶ್ರೀಧರ ಕೋರಿ ಮುಖ್ಯ ಎಂಜಿನಿಯರ್ ಕೊಡಸಳ್ಳಿ ವಿದ್ಯುದಾಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.