ಚಾತುರ್ಮಾಸ್ಯ ವ್ರತಕ್ಕಾಗಿ ಕುಮಟಾ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪದ ಪ್ರವೇಶ ದ್ವಾರವನ್ನು ಸಿಂಗರಿಸಲಾಗಿದೆ
ಕುಮಟಾ: ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಚಾತುರ್ಮಾಸ್ಯ ವ್ರತ ಕಾರ್ಯಕ್ರಮಕ್ಕಾಗಿ ತಾಲ್ಲೂಕಿನ ಕೋನಳ್ಳಿಯ ವನದುರ್ಗಾ ಕಲ್ಯಾಣ ಮಂಟಪದ ಆವರಣ ಸಿಂಗಾರಗೊಂಡಿದೆ.
ಕೋನಳ್ಳಿ ಗ್ರಾಮಸ್ಥರು ಹಾಗೂ ಭಕ್ತರು ಕಳೆದ ಮೂರು ತಿಂಗಳಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಸಿದ್ಧತೆ ಕೆಲಸ ನಡೆಸಿದ್ದಾರೆ.
‘ಚಾತುರ್ಮಾಸ್ಯ ವ್ರತಾಚರಣೆ ಸಮನ್ವಯ ಸಮಿತಿಗಳು ಕಾರ್ಯಕ್ರಮ ತಯಾರಿಗಾಗಿ ಮೂರು ತಿಂಗಳಲ್ಲಿ ಕುಮಟಾ, ಹೊನ್ನಾವರ ತಾಲ್ಲೂಕುಗಳಲ್ಲಿ 60ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ. 42 ದಿನಗಳ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅವರೆಲ್ಲರಿಗೂ ಮೂರು ಹೊತ್ತು ಭೋಜನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಆರ್.ನಾಯ್ಕ ತಿಳಿಸಿದರು.
‘ಸಾಕಷ್ಟು ಪ್ರಮಾಣದಲ್ಲಿ ದವಸ, ಧಾನ್ಯ, ದಿನಸಿ ಸಾಮಗ್ರಿಗಳನ್ನು ಹೊರೆಗಾಣಿಕೆಯಾಗಿ ಬಂದಿವೆ. ಸಾವಿರಾರು ಜನರು ಕುಳಿತುಕೊಳ್ಳ ಬಹುದಾದಷ್ಟು ಪ್ರದೇಶಕ್ಕೆ ಪೆಂಡಾಲ್ ಹಾಕಿ ಕಲಾವಿದ ದಾಮೋದರ ನಾಯ್ಕ ಅವರು ವಿಶೇಷ ವೇದಿಕೆ ನಿರ್ಮಿಸಿದ್ದಾರೆ. ಪ್ರತಿ ದಿನವೂ ಕುಮಟಾದ ಗಣಪತಿ ನಾಯ್ಕ, ಕಾರ್ತಿಕ ಚಿಟ್ಟಾಣಿ, ಕೂಜಳ್ಳಿ ಮೋಹನ ನಾಯ್ಕರಂಥ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭರತ ನಾಟ್ಯ, ತಾಳೆಗರಿ ರಾಮಾಯಣ ಪಠಣ, ಕುಂಚ ಗೀತ ರಾಮಾಯಣ, ಸುಗಮ ಸಂಗೀಥ, ಭಜನೆ, ಗೀತ ರೂಪಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಗುರುವಾರ ಬೆಳಿಗ್ಗೆ 9.30ಕ್ಕೆ ಕುಮಟಾ ನಾಮಧಾರಿ ಕಲ್ಯಾಣ ಮಂಟಪಕ್ಕೆ ಆಗಮಿಸುವ ಶ್ರೀಗಳನ್ನು ಅಲ್ಲಿಂದ 10 ಕಿ.ಮೀ. ದೂರದ ಕೋನಳ್ಳಿ ಗ್ರಾಮಕ್ಕೆ ಬೈಕ್ ಹಾಗೂ ಕಾರು ರ‍್ಯಾಲಿ ನಡುವೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಗುವುದು. 11 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಸಚಿವರು, ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.