ಕಾರವಾರ: ಐದು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಸಿಬ್ಬಂದಿ, ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳಲ್ಲಿ ಮಧ್ಯಾಹ್ನದ ತನಕ 29 ಬಸ್‌ಗಳು ಸಂಚರಿಸಿವೆ. ಸೋಮವಾರ ಮತ್ತಷ್ಟು ಬಸ್‌ಗಳು ಸಂಚರಿಸುವ ಸಾಧ್ಯತೆಯಿದೆ.
ಅಂಕೋಲಾದಿಂದ 12, ಕಾರವಾರ ಮತ್ತು ಕುಮಟಾದಿಂದ ತಲಾ ಐದು, ಶಿರಸಿಯಿಂದ ಮೂರು, ಯಲ್ಲಾಪುರದಿಂದ ಒಂದು ಬಸ್‌ಗಳು ಸ್ಥಳೀಯ ಮಾರ್ಗಗಳಲ್ಲಿ ಸಂಚರಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗಾಧಿಕಾರಿ ರಾಜಕುಮಾರ, 'ಭಾನುವಾರ 50 ಬಸ್‌ಗಳ ಸಂಚಾರ ಆರಂಭಿಸುವ ಗುರಿ ಹೊಂದಲಾಗಿತ್ತು. ರಜಾ ದಿನವೂ ಆಗಿರುವ ಕಾರಣ ಹೆಚ್ಚಿನ ಮಾರ್ಗಗಳಲ್ಲಿ ಸಂಚಾರ ಸಾಧ್ಯವಾಗಲಿಲ್ಲ. ಶೇ 70ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿದ್ದಾರೆ. ಆದರೆ, ಕೆಲವರಿಂದ ಅಡ್ಡಿಯಾಗುತ್ತಿದೆ. ಸೋಮವಾರ 100 ಬಸ್‌ಗಳನ್ನು ಆರಂಭಿಸುವ ವಿಶ್ವಾಸವಿದೆ' ಎಂದು ತಿಳಿಸಿದರು.
'ಮೊದಲಿಗೆ ಜಿಲ್ಲಾಮಟ್ಟದ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಆರಂಭಿಸಲಾಗುವುದು. ನಂತರ ಅಂತರಜಿಲ್ಲಾ ಮಾರ್ಗಗಳ ಬಸ್‌ಗಳ ಸೇವೆ ಶುರು ಮಾಡಲಾಗುವುದು' ಎಂದೂ ಹೇಳಿದರು.
ಸರ್ಕಾರಿ ಬಸ್‌ಗಳಿಲ್ಲದ ಕಾರಣ ವಿವಿಧೆಡೆ ಖಾಸಗಿ ವಾಹನಗಳ ಮಾಲೀಕರು ಹಾಗೂ ಚಾಲಕರು, ಸಂದರ್ಭದ ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರ ಸುಲಿಗೆ ಮಾಡುತ್ತಿರುವ ದೂರುಗಳೂ ಕೇಳಿ ಬರುತ್ತಿವೆ. ಶಿರಸಿ ಮತ್ತು ಕಾರವಾರದಲ್ಲಿ ಶನಿವಾರ ಮೂರು ಬಸ್‌ಗಳು ಸಂಚರಿಸಿದ್ದವು. ಬಸ್‌ಗಳ ಕೊರತೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರು, ಸರ್ಕಾರಿ ಸಾರಿಗೆಯ ಪುನರಾರಂಭಕ್ಕೆ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.