ADVERTISEMENT

ರಾಷ್ಟ್ರೀಯ ಗುಣಮಟ್ಟದ ಸ್ಪರ್ಧೆಗೆ ಕುಮಟಾ ಆಸ್ಪತ್ರೆ

ಸರ್ಕಾರಿ ಆಸ್ಪತ್ರೆ: ಉತ್ತಮ ಅಂಕ ನೀಡಿದ ವೈದ್ಯರ ತಂಡ

ಎಂ.ಜಿ.ನಾಯ್ಕ
Published 25 ಫೆಬ್ರುವರಿ 2024, 4:34 IST
Last Updated 25 ಫೆಬ್ರುವರಿ 2024, 4:34 IST
ಕುಮಟಾ ತಾಲ್ಲೂಕು ಆಸ್ಪತ್ರೆ ಹೊರ ನೋಟ
ಕುಮಟಾ ತಾಲ್ಲೂಕು ಆಸ್ಪತ್ರೆ ಹೊರ ನೋಟ   

ಕುಮಟಾ: ಹೆಚ್ಚಿನ ಸೌಲಭ್ಯ, ಅತ್ಯುತ್ತಮ ವೈದ್ಯಕೀಯ ಸೇವೆ ಹಾಗೂ ಅವುಗಳ ದಾಖಲೀಕರಣಕ್ಕಾಗಿ ಕುಮಟಾ ತಾಲ್ಲೂಕು ಆಸ್ಪತ್ರೆ ಆರೋಗ್ಯ ಇಲಾಖೆಯ ರಾಷ್ಟ್ರೀಯ ಗುಣಮಟ್ಟ ಭರವಸಾ ಮಟ್ಟದ (ಎನ್.ಕ್ಯೂ.ಎ.ಎಸ್) ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ.

ಮೂರು ತಿಂಗಳ ಹಿಂದೆ ವಿಶೇಷ ತರಬೇತಿ ಪಡೆದ ನಾಲ್ವರು ಹಿರಿಯ ವೈದ್ಯರನ್ನು ಒಳಗೊಂಡ ತಂಡವು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸೇವೆಯ ಗುಣಮಟ್ಟ ಪರಿಶೀಲಿಸಿತ್ತು. ಆಸ್ಪತ್ರೆಯ ಎಲ್ಲ ವಿಭಾಗಗಳಿಗೂ ನೂರಕ್ಕೂ ಹೆಚ್ಚು ಪ್ರಶ್ನಾವಳಿಗಳ ಮೂಲಕ ಅಂಕ ನೀಡಿ ವಿಶ್ಲೇಷಣೆ ನಡೆಸಲಾಗಿದೆ.

‘ಆಸ್ಪತ್ರೆಯ ಶುಚಿತ್ವ, ದಾಖಲೀಕರಣ, ಸುರಕ್ಷಾ ಕ್ರಮ, ರೋಗಿಗಳಿಗೆ ಅನುಕೂಲವಾಗುವಂತೆ ವಿವಿಧ ಮಾರ್ಗಸೂಚಿ ನಾಮಫಲಕ ಅಳವಡಿಕೆ, ಸಮರ್ಪಕ ವಿದ್ಯುತ್ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಅಂಕ ನೀಡಲಾಗಿದೆ. ಆಸ್ಪತ್ರೆಯ ಅಪಘಾತ ಹಾಗೂ ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ಹಲವು ವಿಭಾಗಕ್ಕೆ ಶೇ 90ಕ್ಕಿಂತ ಹೆಚ್ಚು ಅಂಕ ಕೊಟ್ಟಿದ್ದಾರೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ತಿಳಿಸಿದರು.

ADVERTISEMENT

‘ಆಸ್ಪತ್ರೆಗೆ ಸ್ಥಳೀಯ ರೋಟರಿ ಸಂಸ್ಥೆ ಹಾಗೂ ಇತರೆ ದಾನಿಗಳು ನೀಡಿದ ನೆರವು ಗುಣಮಟ್ಟ ವೃದ್ಧಿಗೆ ಕಾರಣವಾಗಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯ ನಿರ್ಣಯಕ್ಕೆ ಮತ್ತೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಆಗಮಿಸಲಿದೆ. ರಾಷ್ಟ್ರಮಟ್ಟದಲ್ಲಿ ಬಹುಮಾನ ಬಂದರೆ ಬಹುಮಾನ ಮೊತ್ತವನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ. ಆಸ್ಪತ್ರೆಗಳು ಗುಣಮಟ್ಟದ ವೈದ್ಯಕೀಯ ಸೇವೆ ಅಳವಡಿಸಿಕೊಳ್ಳಲು ಪ್ರೋತ್ಸಾಹಕವಾಗಿ ಈ ಸ್ಪರ್ಧೆ ಆಯೋಜಿಸಲಾಗಿದೆ’ ಎಂದರು.

‘ರೋಟರಿ ಸಂಸ್ಥೆ 2022ರಲ್ಲಿ ಆಸ್ಪತ್ರೆಗೆ ₹1 ಕೋಟಿಗೂ ಅಧಿಕ ಮೌಲ್ಯದ ಸೌಲಭ್ಯಗಳನ್ನು ನೀಡಿದೆ. ಐಸಿಯು ಆನ್ ವೀಲ್ಸ್ ಎಂಬುಲೆನ್ಸ್, ತುರ್ತು ನಿಗಾ ಘಟಕ ಹಾಸಿಗೆಗಳು, ಅನಸ್ಥೇಶಿಯಾ ವರ್ಕ್ ಸ್ಟೇಶನ್, ಅಲ್ಟ್ರಾ ಸೌಂಡ್ ವಿಥ್ ಎಕೋ ಯಂತ್ರ, ಐ.ಸಿ.ಯು ಹಾಸಿಗೆ, ಎಬಿಜಿ ಯಂತ್ರ, ರೋಗ ತಪಾಸಣಾ ಯಂತ್ರ, ಶಸ್ತ್ರ ಚಿಕಿತ್ಸಾ ಕೊಠಡಿ ದೀಪ, ಹೆರಿಗೆ ಮಂಚ ಮುಂತಾದವು ಸೇರಿವೆ. ಸುಮಾರು ₹20 ಲಕ್ಷ ವೆಚ್ಚದ ಹೆಚ್ಚುವರಿ ಸೌಲಭ್ಯವನ್ನೂ ನೀಡಲಾಗಿದೆ. ಕುಮಟಾ ಮೂಲದ ದಾನಿಗಳಾದ ಪ್ರಕಾಶ ನಾಯಕ, ಶರತ್ ಪೈ ಅಂಥವರು ದೊಡ್ಡ ಪ್ರಮಾಣದಲ್ಲಿ ನೆರವು ನೀಡಿದ್ದಾರೆ’ ಎನ್ನುತ್ತಾರೆ ರೋಟರಿ ಕ್ಲಬ್ ಕುಮಟಾ ಘಟಕದ ಪದಾಧಿಕಾರಿ ಅತುಲ್ ಕಾಮತ್.

೨೪ಕೆಎಂಟಿ೨ಇಪಿ: ಆಸ್ಪತ್ರೆಯ ಸುಸಜ್ಜಿತ ತುರ್ತು ನಿಗಾ ಘಟಕ

ರಾಷ್ಟ್ರೀಯ ಗುಣಮಟ್ಟ ಸ್ಪರ್ಧೆಗೆ ಆಸ್ಪತ್ರೆ ಆಯ್ಕೆ ಮಾಡಿರುವುದು ಪ್ರೋತ್ಸಾಹ ಸಿಕ್ಕಂತಾಗಿದೆ. ಜನರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ಒದಗಿಸಲು ಇದು ಪ್ರೇರಣೆಯಾಗಲಿದೆ

-ಡಾ.ಗಣೇಶ ನಾಯ್ಕ ಆಡಳಿತ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.