ADVERTISEMENT

ಕುಮಟಾ: ಹದಗೆಟ್ಟ ರಸ್ತೆಗೆ ಜನ ಹೈರಾಣ

ಎರಡು ವರ್ಷದಿಂದ ಬಿಡುಗಡೆಯಾಗದ ಅನುದಾನ: ಆರೋಪ

ಎಂ.ಜಿ.ನಾಯ್ಕ
Published 23 ಏಪ್ರಿಲ್ 2025, 4:35 IST
Last Updated 23 ಏಪ್ರಿಲ್ 2025, 4:35 IST
ಕುಮಟಾ ಪಟ್ಟಣದ ಭಾಗ್ವತ ಪೆಟ್ರೋಲ್ ಬಂಕ್ ರಸ್ತೆ ಹಾಳಾಗಿರುವುದು 
ಕುಮಟಾ ಪಟ್ಟಣದ ಭಾಗ್ವತ ಪೆಟ್ರೋಲ್ ಬಂಕ್ ರಸ್ತೆ ಹಾಳಾಗಿರುವುದು    

ಕುಮಟಾ: ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಗಳು ಸೇರಿದಂತೆ ವಾರ್ಡ್‍ಗಳ ವ್ಯಾಪ್ತಿಯ ಮಾರ್ಗಗಳು ಹದಗೆಟ್ಟಿದ್ದು, ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವ ಸ್ಥಿತಿ ಎದುರಾಗಿದೆ.

ಪಟ್ಟಣದ ಪಿಕ್‌‍ಅಪ್ ಬಸ್ ನಿಲ್ದಾಣದಿಂದ ಮೀನು ಮಾರುಕಟ್ಟೆಗೆ ತಿರುಗುವ ಭಾಗ್ವತ ಪೆಟ್ರೋಲ್ ಬಂಕ್ ರಸ್ತೆ, ವಿವೇಕನಗರ ರಸ್ತೆ, ಕೊಪ್ಪಳಕರವಾಡಿ ರಸ್ತೆ, ನೆಹರು ನಗರ ರಸ್ತೆ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಗಳು ಕಳೆದ ಎರಡು ವರ್ಷಗಳಿಂದ ದುರಸ್ತಿ ಕಂಡಿಲ್ಲ ಎಂಬುದು ಜನರ ದೂರು.

ಹೊಂಡಬಿದ್ದ ರಸ್ತೆಗಳಲ್ಲಿ ವಾಹನಗಳು, ಆಟೊಗಳು, ದ್ವಿಚಕ್ರ ವಾಹನ ಸವಾರರು ಹರಸಾಹಸದೊಂದಿಗೆ ಸಾಗುವ ಅನಿವಾರ್ಯತೆ ಉಂಟಾಗಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿನ ಹೊಂಡದಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿದೆ.

ADVERTISEMENT

‘ಮಳೆಗಾಲದಲ್ಲಿ ವಿವೇಕನಗರ ಐದನೇ ಕ್ರಾಸ್ ರಸ್ತೆಗೆ ಮುಖ್ಯ ರಸ್ತೆಯ ನೀರು ನುಗ್ಗಿ ಜಲಾವೃತಗೊಳ್ಳುತ್ತದೆ. ಇದನ್ನು ಸ್ಥಳೀಯ ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಬಂದು ಪರಿಶೀಲಿಸಿದ್ದರು. ಆದರೆ, ಈವರೆಗೆ ರಸ್ತೆ ದುರಸ್ತಿ ಕಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಜಯದೇವ ಬಳಗಂಡಿ ದೂರಿದರು.

ಇದು ಕೇವಲ ಒಂದು ಬಡಾವಣೆಯ ಸಮಸ್ಯೆಯಾಗಿರದೆ, ಪಟ್ಟಣದ ವಿವಿಧ ವಾರ್ಡುಗಳ ರಸ್ತೆಗಳ ಕುರಿತಾಗಿಯೂ ಜನರು ದೂರುತ್ತಿದ್ದಾರೆ. ರಸ್ತೆಗಳನ್ನು ದುರಸ್ತಿಪಡಿಸುವಂತೆ ಪುರಸಭೆಗೆ ಹಲವು ಬಾರಿ ಮನವಿಯನ್ನೂ ಮಾಡಿದ್ದಾರೆ.

‘ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಹಣ ಬಂದಿಲ್ಲ. ಈಚೆಗಷ್ಟೆ ಮಂಜೂರಾಗಿ ಬಂದ ₹1.30 ಕೋಟಿ 15ನೇ ಹಣಕಾಸು ನಿಧಿಯಲ್ಲಿ ₹30 ಲಕ್ಷ ಮಾತ್ರ ರಸ್ತೆ ಹೊಂಡ ಮುಚ್ಚಲು ಬಳಸಬಹುದು. ಹಿಂದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮಂಜೂರಾದ ₹5 ಲಕ್ಷ ಮೊತ್ತದಲ್ಲಿ ಕೆಲ ಅಗತ್ಯ ದುರಸ್ತಿ ಕಾರ್ಯ ನಡೆಸಲು ಸಾಧ್ಯವಾಗಿತ್ತು. ಪಟ್ಟಣದ ಸುಮಾರು 8 ಕಿ.ಮೀ. ರಸ್ತೆ ದುರಸ್ತಿ ಕಾರ್ಯ ಆಗಬೇಕಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ ಪ್ರತಿಕ್ರಿಯಿಸಿದರು.

‘ಪಟ್ಟಣದ ತೀರಾ ಹಾಳಾದ ರಸ್ತೆ ದುರಸ್ತಿಗೆ ಕನಿಷ್ಠ ₹5 ಕೋಟಿ ಮೊತ್ತ ಬೇಕು. ಮಳೆಗಾಲ ಆರಂಭವಾಗುವುದರೊಳಗೆ ತೀರಾ ಅಗತ್ಯವಿದ್ದ ರಸ್ತೆ ದುರಸ್ತಿಗೆ ಬೇರೆ ಬೇರೆ ಮೂಲದಿಂದ ಹಣಕಾಸು ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಕೆಲ ರಸ್ತೆಗಳನ್ನು ಶಾಸಕರ ಅಭಿವೃದ್ಧಿ ನಿಧಿ ಮೊತ್ತದಿಂದ ದುರಸ್ತಿ ಮಾಡಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಈಗಿನ ಸರ್ಕಾರದ ಅವಧಿಯಲ್ಲಿ ಪಟ್ಟಣ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ
ದಿನಕರ ಶೆಟ್ಟಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.