ಕುಮಟಾ: ‘ಕುಮಟಾ ಹಾಗೂ ಗೋಕರ್ಣ ರೈಲು ನಿಲ್ದಾಣಕ್ಕೆ ಎರಡನೇ ಪ್ಲಾಟ್ ಫಾರಂ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಸ್ಟೇಶನ್ ಮಾಸ್ಟರ್ ಲೋಕೇಶ ಗೌಡ ಮಾಹಿತಿ ನೀಡಿದ್ದಾರೆ.
ಇಡೀ ಜಿಲ್ಲೆಯಲ್ಲಿ ಪಟ್ಟಣದ ಮಧ್ಯ ಭಾಗದಲ್ಲಿ ಹಾಗೂ ಬಸ್ ನಿಲ್ದಾಣಕ್ಕೆ ಅತಿ ಹತ್ತಿರದಲ್ಲಿರುವ ಇಲ್ಲಿನ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರಂ ಸೌಲಭ್ಯ ಇರಲಿಲ್ಲ. ಇಲ್ಲಿಯ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇದೀಗ ಎರಡನೇ ಪ್ಲಾಟ್ ಫಾರಂ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ.
ಕೆಲವು ರೈಲುಗಳು ಎರಡನೇ ಪ್ಲಾಟ್ ಫಾರಂ ಕಡೆ ಬಂದು ನಿಂತಾಗ ವೃದ್ಧರು ಹಾಗೂ ಅನಾರೋಗ್ಯ ಪೀಡಿತರು ರೈಲಿನಿಂದ ಇಳಿಯಲು, ಏರಲು ಪರದಾಡುವ ಸ್ಥಿತಿ ಇತ್ತು. ಬಹಳ ದಿನಗಳಿಂದ ಬೇಡಿಕೆ ಇದ್ದ ಎರಡನೇ ಪ್ಲಾಟ್ ಫಾರಂ ನಿರ್ಮಾಣಕ್ಕಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೊಂಕಣ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು ಎನ್ನಲಾಗಿದೆ.
‘ಕುಮಟಾದ ಮುಖ್ಯ ಬಸ್ ನಿಲ್ದಾಣ ಎದುರು ಇರುವ ರೈಲ್ವೆ ನಿಲ್ದಾಣ ರಸ್ತೆಗೆ ಪ್ರವೇಶಿಸುವಲ್ಲಿ ತೀರಾ ಹಾಳಾಗಿದ್ದು, ಶಾಸಕರ ನಿಧಿಯಿಂದ ಅಲ್ಲಿ ₹5 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಪೇವರ್ಸ್ ಅಳವಡಿಸಿ ದುರಸ್ತಿ ಕಾರ್ಯ ಕೈಕೊಳ್ಳಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.