
ಕಾರವಾರ: ‘ಜಾತಿ, ಧರ್ಮಗಳ ಹೆಸರಿನಲ್ಲಿ ಛಿದ್ರವಾಗುತ್ತಿರುವ ಸಮಾಜದಲ್ಲಿ ಕುವೆಂಪು ಸಾರಿದ ವಿಶ್ವ ಮಾನವತೆಯ ಸಂದೇಶ ಪಾಲಿಸುವುದು ಅಗತ್ಯವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಇಲ್ಲಿನ ದಿವೇಕರ್ ಪದವಿ ಪೂರ್ವ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕುವೆಂಪು ಕೇವಲ ಕವಿ, ಸಾಹಿತಿಯಾಗಿರದೆ ಶತಮಾನಗಳ ಕಾಲ ಸಮಾಜ ಸನ್ಮಾರ್ಗದಲ್ಲಿ ಸಾಗುವ ಪಾಠವನ್ನು ಸಾಹಿತ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ. ಕನ್ನಡ ಭಾಷೆಗೆ ಅವರ ಕೊಡುಗೆ ಅನನ್ಯ. ಅವರ ಜೀವನಾದರ್ಶ ವಿಶ್ವಕ್ಕೆ ಮಾದರಿಯಾಗಿದೆ. ಅವರಿಗೆ ಕನ್ನಡ ಪ್ರೇಮದ ಜೊತೆಯಲ್ಲಿ ಪರಿಸರದ ಪ್ರೇಮ ಅಪಾರವಾಗಿತ್ತು’ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ, ‘ಕುವೆಂಪು ಅವರು ಕನ್ನಡ ಸಾಹಿತ್ಯದ ಮೇಲ್ಪರ್ವತ ಇದ್ದಂತೆ. ಅವರು ಸಾಹಿತ್ಯದಲ್ಲಿ ಬರೆದಂತೆ ಬದುಕಿದರು. ಅಲ್ಪಮಾನವರಾಗಿರುವಂತ ಮನುಷ್ಯರನ್ನು ವಿಶ್ವ ಮಾನವನಾಗಿ ಮಾಡುವುದು ಶಿಕ್ಷಣದ ಕರ್ತವ್ಯ’ ಎಂದರು.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ, ದಿವೇಕರ್ ಪದವಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಗೀತಾ ತೋರ್ಕೆ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಲಲಿತಾ ಶೆಟ್ಟಿ, ಉಪನ್ಯಾಸಕರಾದ ಸಂತೋಷ ಶೇಟ್ , ಗಣೇಶ್ ಭಟ್ ಪಾಲ್ಗೊಂಡಿದ್ದರು.
ಪುಷ್ಪ ನಮನ
ಹಳಿಯಾಳ: ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಇಲ್ಲಿನ ತಹಶೀಲ್ದಾರ ಕಾಯಾ೯ಲಯದಲ್ಲಿ ಆಚರಿಸಲಾಯಿತು.
ಕಾಯ೯ಕ್ರಮದಲ್ಲಿ ತಹಶೀಲ್ದಾರ ಫೀರೊಜ ಷಾ ಸೋಮನಕಟ್ಟಿ ಮಾತನಾಡಿ, ವಿಶ್ವಮಾನವ ದಿನಾಚರಣೆಯ ಕುರಿತು ವಿವರಿಸಿದರು. ಶಿಕ್ಷಕ ವಿಠ್ಠಲ ಕೋವೆ೯ಕರ ವಿಶ್ವ ಮಾನವ ದಿನಾಚರಣೆ ಕುರಿತು ಹಾಗೂ ರಾಷ್ಟ್ರಕವಿ ಕುವೆಂಪುರವರ ಕುರಿತು ಸುಧೀರ್ಘವಾಗಿ ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕದ ಅಧ್ಯಕ್ಷೆ ಸುಮಂಗಲಾ ಅಂಗಡಿ, ಸಿದ್ದಪ್ಪ ಬಿರಾದಾರ, ಜಿ.ಎಸ್ ಮಠಪತಿ, ಜೆ.ಡಿ.ಗಂಗಾಧರ ಮುಂತಾದವರು ಭಾಗವಹಿಸಿದ್ದರು