ADVERTISEMENT

ಕಾರವಾರ: ನಗರಸಭೆ ವ್ಯಾಪ್ತಿಯ ಗುಡ್ಡೆಹಳ್ಳಿ ರಸ್ತೆ ಶಾಪಗ್ರಸ್ತ

ಕಾಯಿಲೆ ಬಿದ್ದವರ ಚಿಕಿತ್ಸೆಗೆ ಕರೆದೊಯ್ಯುವುದೂ ಸವಾಲು: ಓದಿಗೆ ಊರು ಬಿಡುವ ಚಿಂತೆ

ಗಣಪತಿ ಹೆಗಡೆ
Published 24 ಸೆಪ್ಟೆಂಬರ್ 2024, 5:47 IST
Last Updated 24 ಸೆಪ್ಟೆಂಬರ್ 2024, 5:47 IST
ಕಾರವಾರದ ಗುಡ್ಡೆಹಳ್ಳಿ ಗ್ರಾಮಕ್ಕೆ ಇಬ್ಬರು ಮಹಿಳೆಯರು ಕಾಲ್ನಡಿಗೆಯಲ್ಲಿ ಸಾಗಿದರು
ಕಾರವಾರದ ಗುಡ್ಡೆಹಳ್ಳಿ ಗ್ರಾಮಕ್ಕೆ ಇಬ್ಬರು ಮಹಿಳೆಯರು ಕಾಲ್ನಡಿಗೆಯಲ್ಲಿ ಸಾಗಿದರು   

ಕಾರವಾರ: ‘ನಮ್ಮೂರಲ್ಲಿ ಯಾರಿಗಾದರೂ ಗಂಭೀರ ಶೀಕು (ರೋಗ) ಬಂದರೆ ಅವರನ್ನು ಆಸ್ಪತ್ರೆಗೆ ಸಾಗಿಸುವುದೇ ಕಷ್ಟ. ಸತ್ತವರ ಶವವನ್ನು ಊರಿಗೆ ತರುವುದಂತೂ ದೊಡ್ಡ ಸವಾಲು. ಇಂಥ ಕಷ್ಟಗಳನ್ನು ಕಾಣುತ್ತಲೇ ಜೀವನದ ಐದಾರು ದಶಕ ಕಳೆಯಿತು’

ಹೀಗೆ ನೋವಿನ ನುಡಿಗಳೊಂದಿಗೆ ಭಾವುಕರಾದರು ನಗರ ವ್ಯಾಪ್ತಿಯಲ್ಲೇ ಇದ್ದರೂ, ಓಡಾಟಕ್ಕೆ ಸುಸಜ್ಜಿತ ರಸ್ತೆ ಕಾಣದ ಗುಡ್ಡೆಹಳ್ಳಿ ಗ್ರಾಮದ ವಿಶ್ರಾಮ ಗೌಡ.

‘ನಗರಸಭೆ ವ್ಯಾಪ್ತಿಯಲ್ಲೇ ಇದ್ದರೂ ಕುಗ್ರಾಮಗಳಿಗಿಂತ ಕನಿಷ್ಠ ಸೌಲಭ್ಯ ನಮ್ಮೂರಿಗಿದೆ. ಗುಡ್ಡೆಹಳ್ಳಿಯ ಶಿಖರದಿಂದ ಕಾರವಾರ ನೋಡಲು ಅಂದವಾಗಿ ಕಾಣುತ್ತದೆ. ಅದಕ್ಕಾಗಿ ಜನ ಬರುತ್ತಾರೆ. ಹೀಗೆ ಬಂದವರು ಸೌಲಭ್ಯಗಳ ಕೊರತೆಯ ಊರಿನ ಸ್ಥಿತಿ ಕಂಡು ಮರುಗುತ್ತಾರೆ’ ಎನ್ನುತ್ತ ಊರಿನ ದುಸ್ಥಿತಿಯನ್ನು ವಿವರಿಸಿದರು.

ADVERTISEMENT

‘ಊರಿನ ಹಿರಿಯ ರಾಮಾ ಗೌಡ ಮೃತದೇಹವನ್ನು ಕೋಲಿಗೆ ಕಟ್ಟಿಕೊಂಡ ಬಂದ ಸ್ಥಿತಿ ಊರಿನ ಕಷ್ಟದ ಸ್ಥಿತಿ ವಿವರಿಸಿದೆ. ಇಂಥದ್ದೇ ಸಮಸ್ಯೆಯನ್ನು ಹಲವು ಬಾರಿ ಅನುಭವಿಸಿದ್ದೇವೆ. ಐದು ದಿನಗಳ ಹಿಂದೆ ಗ್ರಾಮದ 11 ವರ್ಷದ ಬಾಲಕಿಯೊಬ್ಬಳಿಗೆ ವಿಷಕಾರಿ ಹಾವು ಕಚ್ಚಿತ್ತು. ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಹೈರಾಣಾಗುವ ಸ್ಥಿತಿ ಎದುರಿಸಬೇಕಾಯಿತು’ ಎಂದು ಗ್ರಾಮದ ಹಿರಿಯರೊಬ್ಬರು ಸಮಸ್ಯೆ ತೆರೆದಿಟ್ಟರು.

‘25ಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡಿರುವ ಗುಡ್ಡೆಹಳ್ಳಿಯಲ್ಲಿ 120ರಷ್ಟು ಜನಸಂಖ್ಯೆ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, 10 ಮಂದಿ ವಿದ್ಯಾರ್ಥಿಗಳಿದ್ದಾರೆ. ಪ್ರೌಢಶಿಕ್ಷಣಕ್ಕೆ ಬಿಣಗಾ ಅಥವಾ ಕಾರವಾರ ನಗರದಲ್ಲಿನ ಪರಿಚಯಸ್ಥರು, ಬಂಧುಗಳ ಮನೆಯಲ್ಲಿ ಮಕ್ಕಳನ್ನು ಉಳಿಯಲು ಬಿಡಬೇಕಾದ ಸ್ಥಿತಿ ಇದೆ’ ಎಂದರು.

ಕಾರವಾರ ನಗರ ವ್ಯಾಪ್ತಿಯ ಗುಡ್ಡೆಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಡಿದಾದ ಕಚ್ಚಾರಸ್ತೆ
ಗುಡ್ಡೆಹಳ್ಳಿ ರಸ್ತೆಯ ದುರಸ್ತಿಗೆ ಹಿಂದಿನ ಶಾಸಕರು ಅನುದಾನ ಕೊಡಿಸಿದ್ದರೂ ಕೆಲಸ ಆಗಿಲ್ಲ. ತ್ವರಿತವಾಗಿ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ರವಿರಾಜ ಅಂಕೋಲೇಕರ್ ನಗರಸಭೆ ಅಧ್ಯಕ್ಷ
ಗುಡ್ಡೆಹಳ್ಳಿಗೆ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸುತ್ತಲೇ ಮೂರು ತಲೆಮಾರು ಕಳೆಯಿತು. ರಸ್ತೆ ಸುಧಾರಣೆಯಾಗದ ಹೊರತು ಆರೋಗ್ಯ ಶಿಕ್ಷಣದಂತಹ ಸೌಲಭ್ಯ ಪಡೆಯುವುದೂ ಕಷ್ಟವಾಗಿದೆ
ದೇವರಾಯ ಗೌಡ ಗ್ರಾಮಸ್ಥ
ಅನುದಾನ ಸಿಕ್ಕರೂ ಸುಧಾರಣೆಯಾಗದ ರಸ್ತೆ
‘ಗ್ರಾಮಕ್ಕೆ 1.2 ಕಿ.ಮೀ ಉದ್ದದ ರಸ್ತೆ ಸುಧಾರಣೆಗೆ ₹50 ಲಕ್ಷ ಮಂಜೂರಾಗಿತ್ತು. ಈವರೆಗೆ ಕೆಲಸ ಸರಿಯಾಗಿ ನಡೆದಿಲ್ಲ. ಕೆಲವೇ ಅಡಿಗಳಷ್ಟು ದೂರದವರೆಗೆ ಜಲ್ಲಿ ಕಲ್ಲು ಮಿಶ್ರಣ ಮಾಡಿದ್ದರು. ಉಳಿದ ಕೆಲಸವನ್ನು ಈವರೆಗೆ ಮಾಡಿಲ್ಲ’ ಎಂದು ಗುಡ್ಡೆಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ‘ಶವವನ್ನು ಕೋಲಿಗೆ ಕಟ್ಟಿಕೊಂಡು ಸಾಗಿದ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡು ಜಲ್ಲಿ ಹರವಿದ್ದ ರಸ್ತೆಯ ಮೇಲೆ ಮಣ್ಣು ಹಾಸುವ ಕೆಲಸ ನಡೆದಿದೆ. ಉಳಿದ ಭಾಗ ದುರಸ್ತಿಪಡಿಸುವ ಕೆಲಸವನ್ನೂ ಕೈಗೊಳ್ಳಬೇಕು’ ಎಂದೂ ಹೇಳಿದ್ದಾರೆ. ರಸ್ತೆ ಸುಧಾರಣೆ ಕಾಮಗಾರಿ ನಡೆಯದ ಕುರಿತು ಮಾಹಿತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.