ಗೋಕರ್ಣ: ಇಲ್ಲಿಯ ಸಮೀಪದ ತೊರ್ಕೆ ಗ್ರಾಮದ ದೇವಣ ಮಜರೆಯ ಭೂಕುಸಿತವಾದ ಸ್ಥಳಕ್ಕೆ ಸೋಮವಾರ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಭೂಕುಸಿತ ಪರಿಣಿತರ ತಂಡ, ಜಿಲ್ಲಾ ವಿಪತ್ತು ಪರಿಣಿತರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಶುಕ್ರವಾರ ರಾತ್ರಿ ದೇವಣದಲ್ಲಿ ಸ್ವಲ್ಪ ಭೂಕುಸಿತ ಉಂಟಾಗಿತ್ತು. ಗುಡ್ಡದಿಂದ ಭಾರಿ ಮಣ್ಣು ಕುಸಿದು ಕೆಳಗೆ ಬಿದ್ದಿತ್ತು. ಇದು ಹತ್ತಿರ ಇದ್ದ ಮೂರು ಮನೆಗಳಿಗೆ ಆತಂಕ ಉಂಟುಮಾಡಿತ್ತು. ಶನಿವಾರ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ ಕರ್ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದರು. ಅವರ ಸೂಚನೆಯಂತೆ ಹತ್ತಿರದ ಮೂರು ಮನೆಯ ನಿವಾಸಿಗಳನ್ನು ಭಾನುವಾರ ಸ್ಥಳಾಂತರಿಸಲಾಗಿದೆ.
ಹೊನ್ನ ರಾಮಾ ಗೌಡ, ಮಂಕಾಳಿ ಶಿವು ಗೌಡ ಮತ್ತು ವೆಂಕಟರಮಣ ಹೊನ್ನ ಗೌಡ ಎಂಬ ಮನೆಯವರೆ ಸ್ಥಳಾಂತರ ಗೊಂಡವರು. ಎಲ್ಲರೂ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದಿದ್ದಾರೆ.
ಸ್ಥಳಾಂತರಗೊಳ್ಳುವಂತೆ ನೋಟಿಸ್
ಈಗಾಗಲೇ ತೊರ್ಕೆ ಗ್ರಾಮ ಪಂಚಾಯಿತಿಯ ಹೊಸ್ಕಟ್ಟಾ ಮತ್ತು ಮಸಾಕಲ್ ಗ್ರಾಮದ 7 ಮನೆಗಳಿಗೆ ಸ್ಥಳಾಂತರಗೊಳ್ಳುವಂತೆ ಕುಮಟಾ ತಹಶೀಲ್ದಾರ್ ನೋಟಿಸ್ ಸಹ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿಯಿತ್ತು ಸ್ಥಳಾಂತರಗೊಳ್ಳಲು ಕ್ರಮವನ್ನೂ ಸಹ ಕೈಗೊಂಡಿದ್ದಾರೆ. ಆ ಮನೆಗಳ ಸಾಲಿಗೆ ದೇವಣದ ಮೂರು ಮನೆಗಳೂ ಸೇರಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.