ADVERTISEMENT

ಕಾರವಾರ| ನೌಕಾದಳದ ರಸ್ತೆಯಿಂದ ಭೂಕುಸಿತ: ದೂರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:32 IST
Last Updated 18 ಜೂನ್ 2025, 14:32 IST
ಬೈತಕೋಲದ ಭೂದೇವಿ ಗುಡ್ಡದಲ್ಲಿ ಭೂಕುಸಿತ ಸಮಸ್ಯೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೈತಕೋಲ–ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್, ಜಂಟಿ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಅವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಪತ್ರ ನೀಡಿದರು.
ಬೈತಕೋಲದ ಭೂದೇವಿ ಗುಡ್ಡದಲ್ಲಿ ಭೂಕುಸಿತ ಸಮಸ್ಯೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೈತಕೋಲ–ಅಲಿಗದ್ದಾ ನಿವಾಸಿತರ ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್, ಜಂಟಿ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಅವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಪತ್ರ ನೀಡಿದರು.   

ಕಾರವಾರ: ಇಲ್ಲಿನ ಬೈತಕೋಲದ ಭೂದೇವಿ ಗುಡ್ಡದಲ್ಲಿ ನೌಕಾದಳದಿಂದ ನಿರ್ಮಾಣವಾದ ರಸ್ತೆ ಕಾಮಗಾರಿಯಿಂದ ಭೂಕುಸಿತ ಸಮಸ್ಯೆ ಆರಂಭಗೊಂಡಿದೆ ಎಂದು ಬೈತಕೋಲ– ಅಲಿಗದ್ದಾ ನಿವಾಸಿಗರ ಸಂಘದವರು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ದೂರು ನೀಡಿದ್ದಾರೆ.

‘ಭೂದೇವಿ ಗುಡ್ಡದ ತಪ್ಪಲಿನಲ್ಲಿ ಬೈತಕೋಲ ಗ್ರಾಮದ ನೂರಾರು ಕುಟುಂಬಗಳು ವಾಸವಾಗಿವೆ. ಈ ಜನರ ಸುರಕ್ಷತೆಯನ್ನು ಪರಿಗಣಿಸದೆ ನೌಕಾದಳವು ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಿದೆ. ಹೀಗೆ ರಸ್ತೆ ನಿರ್ಮಿಸುವ ಕೆಲಸ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದಂತಿಲ್ಲ. ಇದರಿಂದಲೇ ಭೂಕುಸಿತದ ಘಟನೆಗಳು ಹೆಚ್ಚುತ್ತಿವೆ’ ಎಂದು ದೂರಲಾಗಿದೆ.

‘ಮಳೆಗಾಲದ ಆರಂಭದಲ್ಲಿಯೇ ಗುಡ್ಡದಿಂದ ಅಪಾರ ಪ್ರಮಾಣದ ನೀರು ಮಣ್ಣು ಮತ್ತು ಕಲ್ಲಿನ ರಾಶಿಯ ಸಮೇತ ಬೈತಕೋಲ ಗ್ರಾಮದತ್ತ ನುಗ್ಗಿ ಬಂದಿದೆ. ಗುಡ್ಡದ ಮೇಲೆ ಹಲವೆಡೆ ಭೂಕುಸಿತ ಉಂಟಾಗಿದೆ. ಇದಕ್ಕೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ರಸ್ತೆಯೇ ಪ್ರಮುಖ ಕಾರಣ’ ಎಂದೂ ಆರೋಪಿಸಿದ್ದಾರೆ.

ADVERTISEMENT

‘ಬೈತಕೋಲ ಗ್ರಾಮಸ್ಥರ ಸುರಕ್ಷತೆಯ ಹಿತದೃಷ್ಟಿಯಿಂದ ಕೂಡಲೆ ಗುಡ್ಡ ಕುಸಿತ ತಡೆಗೆ ತುರ್ತು ಕ್ರಮ ಕೈಗೊಳ್ಳಲು ಜಿಲ್ಲಾಡಳಿತವು ನೌಕಾದಳಕ್ಕೆ ಸೂಚನೆ ನೀಡಬೇಕು. ಮಳೆನೀರು ಗ್ರಾಮಕ್ಕೆ ನುಗ್ಗಿ ಬರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.

ಸಂಘದ ಅಧ್ಯಕ್ಷ ಪ್ರೀತಮ್ ಮಾಸೂರಕರ್, ಜಂಟಿ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್ ಈ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.