ನಿಂಬೆಹಣ್ಣು
ಕಾರವಾರ: ಬಿಸಿಲ ಝಳ ಏರಿಕೆಯಾಗುತ್ತಿರುವ ಬೆನ್ನಲ್ಲೇ ಬೇಡಿಕೆ ಹೆಚ್ಚಿಸಿಕೊಂಡಿರುವ ನಿಂಬೆಹಣ್ಣಿನ ದರವೂ ಗಗನಮುಖಿಯಾಗಿರುವುದು ಗ್ರಾಹಕರ ಜೇಬಿಗೆ ಭಾರ ಎನಿಸತೊಡಗಿದೆ.
ನಗರದ ಮಾರುಕಟ್ಟೆಯಲ್ಲಿ ಭಾನುವಾರದ ಸಂತೆಯಲ್ಲಿ ಪ್ರತಿ ನಿಂಬೆಹಣ್ಣಿನ ದರವು ಸರಾಸರಿ ₹5 ರಿಂದ ₹6 ರಷ್ಟಿದ್ದರೆ, ದೊಡ್ಡ ಗಾತ್ರದ ನಿಂಬೆಹಣ್ಣಿನ ದರವು ₹8 ತಲುಪಿದೆ. ಉಳಿದ ತರಕಾರಿಗಳ ದರವು ಬಹುತೇಕ ಸ್ಥಿರವಾಗಿದ್ದರೆ, ನಿಂಬೆಹಣ್ಣಿನ ದರ ಮಾತ್ರ ವಾರದಿಂದ ವಾರಕ್ಕೆ ಏರಿಕೆ ಆಗುತ್ತಿದೆ.
ನಿಂಬೆಹಣ್ಣಿನ ದರ ಏರಿಕೆಯಾದ ಕಾರಣ ನಿಂಬೆಹಣ್ಣಿನ ಶರಬತ್, ನಿಂಬು ಸೋಡಾ ಬೆಲೆಯಲ್ಲೂ ವ್ಯತ್ಯಾಸ ಆಗಿದೆ. ಹಲವು ತಂಪುಪಾನೀಯ ಮಳಿಗೆಗಳಲ್ಲಿ ನಿಂಬೆ ಪಾನೀಯಗಳ ಬೆಲೆಯನ್ನು ₹25ರ ಬದಲಾಗಿ ₹30ಕ್ಕೆ ಏರಿಕೆ ಮಾಡಲಾಗಿದೆ.
‘ನಗರದ ಮಾರುಕಟ್ಟೆಗೆ ಹುಬ್ಬಳ್ಳಿ, ಸವಣೂರು, ವಿಜಯಪುರದಿಂದ ನಿಂಬೆಹಣ್ಣು ಪೂರೈಕೆ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲೇ ಪ್ರತಿ ಚೀಲಕ್ಕೆ ₹6,000 ದರ ನಿಗದಿಯಾಗಿದೆ. ಪ್ರತಿ ಚೀಲದಲ್ಲಿ ಸರಾಸರಿ 1,200 ರಿಂದ 1,500 ನಿಂಬೆಹಣ್ಣುಗಳಿರುತ್ತವೆ. ಗಾತ್ರಕ್ಕೆ ತಕ್ಕಂತೆ ಅವುಗಳನ್ನು ಪ್ರತ್ಯೇಕಿಸಿ ಬೇರೆ ಬೇರೆ ದರಕ್ಕೆ ಮಾರಾಟ ಮಾಡಿದರೆ ಮಾತ್ರ ತಕ್ಕಮಟ್ಟಿಗಿನ ಲಾಭ ಗಳಿಸಬಹುದು’ ಎನ್ನುತ್ತಾರೆ ವ್ಯಾಪಾರಿ ಸವಣೂರಿನ ಹಸನ್.
‘ಪ್ರತಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ದರ ಏರಿಕೆಯಾಗುವುದು ಸಹಜ. ಈ ಅವಧಿಯಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚು, ಇಳುವರಿ ಕಡಿಮೆ. ಈ ಬಾರಿ ನಿಗದಿತ ಅವಧಿಗೂ ಮುನ್ನವೇ ದರದಲ್ಲಿ ಏರಿಕೆ ಕಂಡುಬಂದಿದೆ. ಸಗಟು ಮಾರುಕಟ್ಟೆಯಲ್ಲೇ ದರ ಏರಿಕೆಯಾಗಿದ್ದರಿಂದ ಚಿಲ್ಲರೆ ಮಾರಾಟದಲ್ಲಿ ದರ ಹೆಚ್ಚಳವಾಗಿದೆ. ಏಪ್ರಿಲ್, ಮೇ ವೇಳೆಗೆ ದರ ಇನ್ನಷ್ಟು ಹೆಚ್ಚಳವಾದರೂ ಅಚ್ಚರಿಪಡಬೇಕಿಲ್ಲ’ ಎಂದರು.
‘ದೊಡ್ಡ ಗಾತ್ರದ, ಹೆಚ್ಚು ರಸವಿರುವ ನಿಂಬೆಹಣ್ಣು ಮಾರುಕಟ್ಟೆಯಲ್ಲಿ ಸಿಗುವುದು ಕಡಿಮೆಯಾಗಿದೆ. ಸಿಕ್ಕ ನಿಂಬೆಹಣ್ಣಿಗೂ ದರ ಹೆಚ್ಚಳವಾಗಿದೆ. ನಿಂಬೆಹಣ್ಣಿನ ತಂಪುಪಾನೀಯಕ್ಕೆ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ನಿಂಬು ಸೋಡಾ ವ್ಯಾಪಾರಿ ನಾರಾಯಣ ಗೌಡ ಹೇಳಿದರು.
‘ಬಿಸಿಲ ಝಳದಿಂದ ಪಾರಾಗಲು ನಿಂಬೆಹಣ್ಣಿನ ಪಾನೀಯಗಳ ಸೇವನೆಗೆ ಆದ್ಯತೆ ನೀಡಬೇಕಾಗುತ್ತಿದೆ. ಅಡುಗೆಯಲ್ಲೂ ನಿಂಬೆಹಣ್ಣು ಬಳಕೆ ಹೆಚ್ಚಿಸುವುದು ಅನಿವಾರ್ಯ. ಆದರೆ, ಗಗನಮುಖಿ ದರದಿಂದ ಖರೀದಿಗೆ ಬೇಸರವಾಗುತ್ತಿದೆ’ ಎಂದು ಗೃಹಿಣಿ ನಿರ್ಮಲಾ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.