ADVERTISEMENT

ಉತ್ತರ ಕನ್ನಡ: ಜಲಮೂಲದ ನೈರ್ಮಲ್ಯ, ಮುಂದುವರಿದ ನಿರ್ಲಕ್ಷ್ಯ

ಗೋಕರ್ಣದಲ್ಲಿ ಕೋಟಿತೀರ್ಥ ಮಲಿನ: ಕಾಳಿ, ಅಘನಾಶಿನಿ ನದಿಯ ಸ್ವಚ್ಛತೆಗೂ ಇಲ್ಲ ಗಮನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 7:55 IST
Last Updated 15 ನವೆಂಬರ್ 2020, 7:55 IST
ಕಸ ಕಡ್ಡಿ, ಪಾಚಿ, ತ್ಯಾಜ್ಯಗಳಿಂದ ಮಲಿನವಾದ ಗೋಕರ್ಣದ ಕೋಟಿತೀರ್ಥದ ನೀರು.
ಕಸ ಕಡ್ಡಿ, ಪಾಚಿ, ತ್ಯಾಜ್ಯಗಳಿಂದ ಮಲಿನವಾದ ಗೋಕರ್ಣದ ಕೋಟಿತೀರ್ಥದ ನೀರು.   

ಕಾರವಾರ: ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ನದಿಗಳು, ಹತ್ತಾರು ಹೊಳೆಗಳು, ನೂರಾರು ತೊರೆಗಳಿವೆ. ಇಲ್ಲಿ ಬೆರಳೆಣಿಕೆಯಷ್ಟೇ ಕಾರ್ಖಾನೆಗಳು, ಧಾರ್ಮಿಕ ಕ್ಷೇತ್ರಗಳು ಜಲಮೂಲಗಳ ಸಮೀಪದಲ್ಲಿವೆ. ಆದರೂ ನೀರಿನ ನೈರ್ಮಲ್ಯದ ವಿಚಾರದಲ್ಲಿ ಹಿಂದೆ ಉಳಿದಿದೆ ಎಂಬುದು ಹಿಂದಿನಿಂದಲೂ ಕೇಳಿಬರುವ ಆರೋಪ.

‘ರುದ್ರಗಯಾ’ ಎಂದೇ ಪ್ರಸಿದ್ಧವಾಗಿರುವ, ಶಿವನ ಆತ್ಮಲಿಂಗವಿರುವ ಕ್ಷೇತ್ರ ಗೋಕರ್ಣ. ಇಲ್ಲಿನ ಪವಿತ್ರ ಕೋಟಿತೀರ್ಥ ಕೆಲವು ವರ್ಷಗಳಿಂದ ಕಸ ಕಡ್ಡಿ, ಕಮಲದ ಪಾಚಿ, ತ್ಯಾಜ್ಯಗಳಿಂದ ಮಲಿನವಾಗಿದೆ.

2014ರಲ್ಲಿ ಸ್ಥಳೀಯ ಆಡಳಿತವು ನೀರಿನ ಸ್ವಚ್ಛಗೊಳಿಸುವ ಕಾಮಗಾರಿ ನಡೆಸಲು ಹೋಗಿ ಮಾಡಿದ ಅವಾಂತರವೇ ಇದಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯ ಆಕ್ರೋಶವಾಗಿದೆ. ಸ್ಥಳೀಯರು ಬೇಸಿಗೆ ಕಾಲದಲ್ಲಿಯೇ ಕಾಮಗಾರಿ ಪ್ರಾರಂಭಿಸುವಂತೆ ಮನವಿ ಮಾಡಿದರೂ ಆಡಳಿತದ ಮಂದಿ ಕೇಳಲಿಲ್ಲ. ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೆಲಸ ಕೈಗೆತ್ತಿಕೊಂಡಿತ್ತು.

ADVERTISEMENT

ಮಳೆ ಬಂತೆಂದು ಕಾಮಗಾರಿ ಪೂರ್ಣಗೊಳಿಸುವ ಆತುರದಲ್ಲಿ ಟಿಪ್ಪರ್, ಲಾರಿ ಹೋಗಲು ಮಣ್ಣು ತುಂಬಲಾಗಿತ್ತು. ಈ ಮಣ್ಣಿನ ಜೊತೆಗೆ ಕಮಲ, ಪಾಚಿಯ ಬೀಜಗಳೂ ಬಂದಿದ್ದೇ ಕೋಟಿತೀರ್ಥದ ನೀರು ಕೆಡಲು ಕಾರಣವಾಯಿತು. ಆದರೆ, ಆಡಳಿತ ಮಾತ್ರ ಪುರೋಹಿತರಿಂದಲೇ ನೀರು ಹೊಲಸಾಗಿದೆ ಎಂದು ಗೂಬೆ ಕೂರಿಸಿತು ಎನ್ನುವುದು ಸ್ಥಳೀಯ ಪುರೋಹಿತರ ಪ್ರತಿವಾದವಾಗಿದೆ.

ಸ್ವತಃ ಪರಶಿವನ ಆತ್ಮಲಿಂಗವೇ ಮಳೆಗಾಲದಲ್ಲಿ ಕೆಲವೊಮ್ಮೆ ಚರಂಡಿ ನೀರಿನಲ್ಲಿ ಮುಳುಗುತ್ತಿದೆ. ಸಮುದ್ರಕ್ಕೆ ಸೇರುವ ನಾಲೆಯಲ್ಲಿ ಸಮುದ್ರದ ನೀರು ಶೇಖರವಾಗಿ, ಮಳೆಯ ನೀರು ಸೇರಿದಾಗ ಹೀಗಾಗುತ್ತದೆ. ದೇವರಿಗೆ ಅಭಿಷೇಕ ಮಾಡಿದ ನೀರು ಗರ್ಭಗುಡಿಯಿಂದ ಹೊರಹೋಗದೇ ತಿರುಗಿ ಬರುತ್ತದೆ. ಭಕ್ತರು ಪೂಜೆಯ ಅವಕಾಶದಿಂದ ವಂಚಿತರಾಗಿದ್ದೂ ಇದೆ. ನಾಲೆಯ ಹೂಳೆತ್ತಬೇಕು ಎಂದು ಹಲವು ವರ್ಷಗಳಿಂದ ಸ್ಥಳೀಯರು ಬೇಡಿಕೆ ಮಂಡಿಸುತ್ತಿದ್ದಾರೆ.

ಈ ವರ್ಷ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಇಚ್ಛಾಶಕ್ತಿಯಿಂದ ಹಳ್ಳದ ಸ್ವಲ್ಪ ಭಾಗದ ಹೂಳೆತ್ತಲಾಗಿದೆ. ಈಚೆಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ ಅವರೂ ಕೋಟಿ ತೀರ್ಥವನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಮೌಖಿಕ ಆದೇಶ ಮಾಡಿದ್ದಾರೆ.

ಶಿರಸಿ ನಗರ ವ್ಯಾಪ್ತಿಯಲ್ಲಿ ಕೋಟೆಕೆರೆ, ದೇವಿಕರೆ ಪ್ರಮುಖ ಜಲಮೂಲಗಳು. ಇದನ್ನು ಹೊರತುಪಡಿಸಿ ಏಳು ಕೆರೆಗಳಿದ್ದು, ಬಹುತೇಕ ಸೂಕ್ತ ನಿರ್ವಹಣೆ ಕಂಡಿಲ್ಲ. ಕೋಟೆಕೆರೆಗೆ ಈಗಲೂ ಸುತ್ತಮುತ್ತಲಿನ ಪ್ರದೇಶಗಳಿಂದ ಮಲಿನ ನೀರು ಸೇರುತ್ತಿದೆ ಎಂಬ ದೂರು ಸಾರ್ವಜನಿಕರದ್ದಾಗಿದೆ.

ಇದರಿಂದ ಕೆರೆಯ ಪಕ್ಕದ ಜಮೀನಿನಲ್ಲಿ ಗಬ್ಬು ವಾಸನೆ ಬರುತ್ತದೆ ಎನ್ನುತ್ತಾರೆ ಸ್ಥಳೀಯರು. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಕೆರೆಯ ಸಂರಕ್ಷಣೆ ಪ್ರತಿವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುತ್ತಿವೆ.

‘ನಗರ ವ್ಯಾಪ್ತಿಯಲ್ಲಿ ಒಂಬತ್ತು ಕೆರೆಗಳಿದ್ದು, ಅವುಗಳ ಸೂಕ್ತ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಹೊಸ ಆಡಳಿತ ಮಂಡಳಿಯೂ ಸದ್ಯ ರಚನೆಯಾಗಿದ್ದು, ಸಭೆಯಲ್ಲಿ ಕೆರೆಗಳ ನಿರ್ವಹಣೆಗೆ ವಿಶೇಷ ಅನುದಾನದ ಪ್ರಸ್ತಾವ ಇಡಲಾಗುವುದು. ಸ್ವಚ್ಛತೆ, ಜಲಮೂಲಗಳ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ರಮೇಶ ನಾಯಕ ತಿಳಿಸಿದರು.

ಬನವಾಸಿ ಯಲ್ಲಿ ವರದಾ ನದಿ ದಡದಲ್ಲಿ ನೂರಾರು ಎಕರೆ ಕೃಷಿಭೂಮಿ ಇದೆ. ಬೆಳೆಗಳ ರಕ್ಷಣೆಗೆ ರೈತರು ರಾಸಾಯನಿಕ ಸಿಂಪಡಿಸುವುದು ಅನಿವಾರ್ಯ. ಇವುಗಳು ಮಳೆಯ ನೀರಿನೊಂದಿಗೆ ನದಿಗೆ ಸೇರಿ ನೀರು ಕಲುಷಿತಗೊಳ್ಳುವ ಅಪಾಯವಿದೆ. ಈ ಕುರಿತು ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಸ್ಥಳೀಯ ಪ್ರಮುಖ ಷಣ್ಮುಗಪ್ಪ.

ಹೊನ್ನಾ ವರವು ವಿಶಿಷ್ಟವಾದ ಭೌಗೋಳಿಕ ಲಕ್ಷಣ ಹೊಂದಿರುವ ತಾಲ್ಲೂಕು. ನದಿ ದಂಡೆ, ಸಮುದ್ರ ತೀರ ಹಾಗೂ ಬೆಟ್ಟಗುಡ್ಡಗಳ ನಡುವೆ ಪೂಜಾ ಸ್ಥಳಗಳಿವೆ. ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿ ಶರಾವತಿ ನದಿಯ ಬಲದಂಡೆಯಲ್ಲಿದ್ದು, ನದಿಯಿಂದ ಸಾಕಷ್ಟು ದೂರದಲ್ಲಿದೆ.

ತಾಲ್ಲೂಕಿನ ಹೆಚ್ಚಿನ ದೇವಸ್ಥಾನ ಗಳಲ್ಲಿ ಪೂಜೆ, ಪುನಸ್ಕಾರಗಳಿಗೆ ಕೊಡುವ ಮಹತ್ವವನ್ನು, ದೇವಸ್ಥಾನದ ತ್ಯಾಜ್ಯ ನಿರ್ವಹಣೆಗೆ ನೀಡುತ್ತಿಲ್ಲ ಎನ್ನುವ ಆಪಾದನೆಗಳಿವೆ. ನದಿ ದಂಡೆಗಳ ಮೇಲಿರುವ ಪೂಜಾ ಕೇಂದ್ರಗಳ ತ್ಯಾಜ್ಯ ನೇರವಾಗಿ ಹಾಗೂ ಕೆಲವೊಮ್ಮೆ ಪರೋಕ್ಷವಾಗಿ ನದಿ ನೀರನ್ನು ಸೇರಿಕೊಳ್ಳುತ್ತಿದೆ. ಸದ್ಯ ಈ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಲ್ಲ. ಹಾಗಾಗಿ ತ್ಯಾಜ್ಯದ ಪರಿಣಾಮ ಇನ್ನೂ ಗಂಭೀರ ಸ್ವರೂಪ ಪಡೆದಿಲ್ಲ.

ನಗರ ಬಸ್ತಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಮಾ ಮುಖ್ಯಪ್ರಾಣ, ಶರಾವತಿ ನದಿ ದಂಡೆಯಲ್ಲಿ ಅನಾದಿ ಕಾಲದಿಂದಿರುವ ದೇವಸ್ಥಾನವಾಗಿದೆ. ವರ್ಷದಲ್ಲಿ ಸರಿಸುಮಾರು ಆರು ತಿಂಗಳು ಯಕ್ಷಗಾನ ನಡೆಯುವ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಗುಂಡಬಾಳ ನದಿಯ ದಡದಲ್ಲಿದೆ.

‘ಪಂಚಾಯಿತಿಯಿಂದ ಕಸದ ತೊಟ್ಟಿ ಅಳವಡಿಸಿರುವುದನ್ನು ಬಿಟ್ಟರೆ ಮಲಿನ ನೀರು ಹಾಗೂ ಇತರ ತ್ಯಾಜ್ಯ ನಿರ್ವಹಣೆಗೆ ಕ್ರಮ ತೆಗೆದುಕೊಂಡಿಲ್ಲ. ಉದ್ಯೋಗ ಖಾತ್ರಿಯಲ್ಲಿ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಬಹುದು. ಭಕ್ತರ ಸಂಖ್ಯೆ ಹೆಚ್ಚಾದರೆ ಇದು ಅನಿವಾರ್ಯವಾಗುತ್ತದೆ’ ಎಂದು ನಗರಬಸ್ತಿಕೇರಿ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ ತಿಳಿಸಿದರು.

ಮಲಿನ ನದಿ ಕಾಳಿ!:

ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ಹೊಂದಿರುವ ಕಾಳಿಯು, ರಾಜ್ಯದಲ್ಲಿ ಅತಿಹೆಚ್ಚು ಮಲಿನವಾದ 17 ನದಿಗಳ ಪೈಕಿ ಒಂದು. ಜೊಯಿಡಾದ ಡಿಗ್ಗಿಯಲ್ಲಿ ಹುಟ್ಟಿ ಕಾರವಾರದಲ್ಲಿ ಸಮುದ್ರ ಸೇರುವಾಗ ಹಲವು ಬೃಹತ್ ವಿದ್ಯುತ್ ಯೋಜನೆಗಳನ್ನು ದಾಟುತ್ತದೆ. ಹರಿವಿನ ಮಧ್ಯದಲ್ಲಿ ಸಿಗುವ ದಾಂಡೇಲಿಯಲ್ಲಿ, ಹಲವು ಕಾರ್ಖಾನೆಗಳ ತ್ಯಾಜ್ಯವನ್ನು ನೇರವಾಗಿ ನದಿ ನೀರಿಗೆ ಬಿಡುತ್ತಿರುವ ಆರೋಪವಿದೆ.

ಕೆಲವೆಡೆ ನದಿಯಂಚಿನ ಮನೆಗಳಿಂದ ಶೌಚಾಲಯದ ಕಲ್ಮಶವನ್ನೂ ನದಿಗೆ ಸೇರಿಸುವ ಬಗ್ಗೆ ದೂರುಗಳಿವೆ. ಆಗಾಗ ಅಧಿಕಾರಿಗಳು ದಂಡ, ನೋಟಿಸ್‌ನಂತಹ ಕ್ರಮಗಳನ್ನು ಜರುಗಿಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ ಎನ್ನುವುದು ಸ್ಥಳೀಯರ ಆಕ್ಷೇಪವಾಗಿದೆ. ಇದರ ನೀರು ಬಳಕೆಗೆ ಯೋಗ್ಯವಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆ.5ರಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಗೆ ತಿಳಿಸಿತ್ತು.

ಅಘನಾಶಿನಿಗೆ ಕೋಳಿ ತ್ಯಾಜ್ಯದ ಸಂಕಟ!:

ಇದುವರೆಗೂ ಯಾವ ಅಭಿವೃದ್ಧಿ ಯೋಜನೆಗಳ ಹೊಡೆತಕ್ಕೂ ಸಿಲುಕದ ತಾಲ್ಲೂಕಿನ ಜೀವನದಿ ಅಘನಾಶಿನಿ, ಕೆಲವು ವರ್ಷಗಳಿಂದ ಸ್ಥಳೀಯರು ಎಸೆಯುವ ಮಾಂಸದ ಕೋಳಿ ತ್ಯಾಜ್ಯದಿಂದ ಮಲಿನವಾಗುತ್ತಿದೆ.

ಕತಗಾಲದ ಮಾಂಸದ ಕೋಳಿ ಅಂಗಡಿಗಳಲ್ಲಿ ದಿನವೆಲ್ಲ ಉತ್ಪತ್ತಿಯಾದ ತ್ಯಾಜ್ಯವನ್ನು ಸಂಗ್ರಹಿಸಿಸಲಾಗುತ್ತದೆ. ಅದನ್ನು ರಾತ್ರಿ ಮೂಟೆಕಟ್ಟಿ ಆಟೊರಿಕ್ಷಾದಲ್ಲಿ ತಂದು ಈಗ ಸೇತುವೆ ನಿರ್ಮಾಣವಾಗುತ್ತಿರುವ ಉಪ್ಪಿನಪಟ್ಟಣ ಧಕ್ಕೆ ಬಳಿ ನದಿಗೆ ಎಸೆಯುತ್ತಾರೆ.

ನದಿಯ ಉಬ್ಬರ ಸಂದರ್ಭದಲ್ಲಿ ಕೋಳಿ ಕಾಲು, ಕರುಳು ತೇಲಿ ಹೋಗಿ ಜನವಸತಿ ಇರುವ ನದಿ ದಡಗಳಲ್ಲಿ ಬಿದ್ದು ದುರ್ವಾಸನೆ ಉಂಟಾಗುತ್ತದೆ. ಕಾಗೆ, ಹದ್ದುಗಳು ಅವುಗಳನ್ನು ಎತ್ತಿಕೊಂಡು ಬಂದು ಮನೆ ಅಂಗಳದಲ್ಲಿ, ಬಾವಿಗಳಲ್ಲಿ ಬೀಳಿಸುತ್ತವೆ.

ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಅಳಕೋಡ ಗ್ರಾಮ ಪಂಚಾಯಿತಿಗೆ ದೂರಿದ್ದರು. ಅಂದಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ್, ‘ಕೋಳಿ ತ್ಯಾಜ್ಯ ನದಿಗೆ ಎಸೆಯದಂತೆ ಅಂಗಡಿಕಾರರಿಗೆ ಮೂರು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿದೆ’ ಎಂದರು.

***

* ಸ್ಥಳೀಯ ಆಡಳಿತದ ಧೋರಣೆಯಿಂದ ಬೇಸತ್ತು ಸಾರ್ವಜನಿಕರ ಸಹಯೋಗದೊಂದಿಗೆ ವರ್ಷಕ್ಕೆ ₹ 5 ಲಕ್ಷ ವೆಚ್ಚ ಮಾಡಿ ಮೂರು ವರ್ಷಗಳಿಂದ ನೀರನ್ನು ನಾವು ಸ್ವಚ್ಛಗೊಳಿಸುತ್ತಿದ್ದೇವೆ.

– ಸದಾನಂದ ಉಪಾಧ್ಯ, ಅಧ್ಯಕ್ಷ, ಗೋಕರ್ಣ ಪಟ್ಟವಿನಾಯಕ ಗೆಳೆಯರ ಬಳಗ.

* ಕೋಳಿ ತ್ಯಾಜ್ಯವನ್ನು ಅತ್ಯುತ್ತಮ ಸಾವಯವ ಗೊಬ್ಬರ ತಯಾರಿಕೆಗೆ ಬಳಸಬಹುದು. ಅದನ್ನು ನದಿಗೆ ಎಸೆಯುವುದು ಅಕ್ಷಮ್ಯ. ತಡೆಯಲು ಕತಗಾಲ ಉಪ ಪೊಲೀಸ್ ಠಾಣೆಗೆ ಸೂಚಿಸಲಾಗುವುದು.

– ಆನಂದಮೂರ್ತಿ, ಪಿ.ಎಸ್.ಐ, ಕುಮಟಾ ಠಾಣೆ.

(ಪ್ರಜಾವಾಣಿ ತಂಡ: ಸದಾಶಿವ ಎಂ.ಎಸ್, ಗಣಪತಿ ಹೆಗಡೆ, ರವಿ ಸೂರಿ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.