ADVERTISEMENT

‘ಹಾರಿದ ಹಕ್ಕಿಗಳು’ ಕವನ ಪಠ್ಯದಲ್ಲಿ ಬಳಸದಂತೆ ಪತ್ರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 14:29 IST
Last Updated 4 ಜೂನ್ 2022, 14:29 IST
   

ಕಾರವಾರ: ‘ಎಂಟನೇ ತರಗತಿಯ ತಿಳಿ ಕನ್ನಡ, ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ದಿ.ಡಾ.ಆರ್.ವಿ.ಭಂಡಾರಿ ಅವರ ‘ಹಾರಿದ ಹಕ್ಕಿಗಳು’ ಕವನವನ್ನು ಬಳಸಲು ನೀಡಿದ್ದ ಪರವಾನಗಿಯನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಪತ್ರ ಬರೆದು ತಿಳಿಸಲಾಗಿದೆ’ ಎಂದು ಹೊನ್ನಾವರದ ಕೆರೆಕೋಣದ ‘ಸಹಯಾನ’ ಸಂಸ್ಥೆಯ ಯಮುನಾ ಗಾಂವ್ಕರ್ ತಿಳಿಸಿದ್ದಾರೆ.

‘ಪರಿಷ್ಕೃತ ಪಠ್ಯದ ಪದ್ಯಭಾಗದ ಎರಡನೇ ಕವನವನ್ನಾಗಿ (ಪುಟ ಸಂಖ್ಯೆ 69–71) ಪಠ್ಯದಲ್ಲಿ ಬಳಸಲು ಡಾ.ಆರ್.ವಿ.ಭಂಡಾರಿ ಅವರ ಕುಟುಂಬದ ಪರವಾಗಿ ಒಪ್ಪಿಗೆ ನೀಡಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಈ ಪಠ್ಯವನ್ನು ಹಿಂಪಡೆದ ಪತ್ರವನ್ನು ಸಚಿವರಿಗೆ ಕಳುಹಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ನಾಡಿನ ಜನತೆಯ ಸಾಕ್ಷಿ ಪ್ರಜ್ಞೆಯಂತಿದ್ದ ಡಾ.ಆರ್.ವಿ.ಭಂಡಾರಿ ಅವರು ಅರವತ್ತರ ದಶಕದಲ್ಲಿಯೇ ಎರಡು ಸ್ನಾತಕೋತ್ತರ ಉನ್ನತ ಪದವಿಗಳನ್ನು ಅಧ್ಯಯನ ಮಾಡಿದ್ದರು. ನಂತರ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಕೊನೆಯವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. 35 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದವರು’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ADVERTISEMENT

‘ನೂರಾರು ಪುಸ್ತಕಗಳನ್ನು ಬರೆದು ಮಕ್ಕಳ ಸಾಹಿತ್ಯ, ವಿಮರ್ಶೆ, ಕತೆ, ಕಾದಂಬರಿ, ವೈಚಾರಿಕ, ಮಾನವಿಕ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು. ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಯೂ ಆಗಿದ್ದರು. 40 ದಶಕ ವಿವಿಧ ಸರ್ಕಾರಗಳ ಅವಧಿಯಲ್ಲಿ ಪಠ್ಯ ಪುಸ್ತಕ ರಚನೆಗೆ ಪ್ರಬುದ್ಧ ಸಲಹೆಗಳನ್ನು, ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಿದ್ದರು’ ಎಂದೂ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.