ADVERTISEMENT

ಉತ್ತರಕನ್ನಡ: ಕನ್ನಡ ಬಳಕೆಗೆ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 14:17 IST
Last Updated 1 ಜುಲೈ 2020, 14:17 IST

ಶಿರಸಿ: ‘ಕರ್ನಾಟಕದ ಉದ್ಯೋಗಗಳು ಕನ್ನಡಿಗರ ಹಕ್ಕು’ ಅಭಿಯಾನದ ಭಾಗವಾಗಿ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ಬರುವ ಆಗಸ್ಟ್‌ 15ರ ಒಳಗಾಗಿ ಕನ್ನಡ ಬಳಕೆ ಮಾಡುವಂತೆ ಪತ್ರ ಚಳವಳಿ ಆರಂಭಿಸಲಾಗುತ್ತದೆ ಎಂದು ನಾವು ಕನ್ನಡಿಗರು ಸಂಘಟನೆಯ ಅಧ್ಯಕ್ಷ ಗಣೇಶ ಭಟ್ಟ ಉಪ್ಪೋಣಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡ ಭಾಷೆ ಮಾತ್ರವಲ್ಲ, ಕನ್ನಡಿಗರನ್ನು ಸಹ ತಿರಸ್ಕರಿಸಲಾಗುತ್ತಿದೆ. ಅನ್ಯ ಭಾಷಿಕ ಸಿಬ್ಬಂದಿಯಿಂದ ಕನ್ನಡ ಭಾಷೆ ಮಾತ್ರ ಗೊತ್ತಿರುವ ಗ್ರಾಹಕರಿಗೆ ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದು ಕಷ್ಟವಾಗಿದೆ. ಈ ಬಗ್ಗೆ ಗಮನ ಸೆಳೆಯಲು ಜುಲೈ 7ರಿಂದ ಅಭಿಯಾನ ನಡೆಸಲಾಗುತ್ತದೆ. ಶಿರಸಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ನ ಪ್ರತಿ ಶಾಖೆಗೆ ತೆರಳಿ, ಅಲ್ಲಿನ ಮಾಹಿತಿ ಫಲಕ, ಚಲನ್, ಇತರ ದೈನಂದಿನ ಅಗತ್ಯಗಳು ಕನ್ನಡದಲ್ಲೇ ಇರುವಂತೆ ಒತ್ತಾಯಿಸಿ, ಪ್ರಬಂಧಕರಿಗೆ ಎಚ್ಚರಿಕೆ ಪತ್ರ ನೀಡಲಾಗುವುದು’ ಎಂದರು.

ಇದಕ್ಕೆ ಸ್ಪಂದನೆ ಸಿಗದಿದ್ದಲ್ಲಿ ಕಾನೂನು ಹೋರಾಟ ಮಡೆಸಲಾಗುತ್ತದೆ. ಕನ್ನಡ ಬಳಕೆ ಕಡ್ಡಾಯಗೊಳಿಸುವ ಕಾರ್ಯದಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಕೈಜೋಡಿಸಬೇಕು ಎಂದು ಹೇಳಿದರು. ಸಂಘಟನೆ ಪ್ರಮುಖರಾದ ಪ್ರಸನ್ನ ನಾಯ್ಕ, ಗಣೇಶ ಕಂಬಾರ, ಮದನ್, ಸುಶೀಲ್‌ಕುಮಾರ್, ಸಂದೇಶ ನಾಯ್ಕ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.