ಶಿರಸಿ: 'ಮಕ್ಕಳು ಮೊಬೈಲ್ ಮಾಯೆಯಿಂದ ದೂರವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾದರೆ ಅತ್ಯುತ್ತಮ ಬದುಕು ರೂಪಿಸಿಕೊಳ್ಳಬಹುದು’ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಮಾಯಣ್ಣ ಬಿ.ಎನ್. ಹೇಳಿದರು.
ಶರನ್ನವರಾತ್ರಿ ಪ್ರಯುಕ್ತ ಮಾರಿಕಾಂಬಾ ದೇವಾಲಯದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಭಾನುವಾರ ದೇವಾಲಯದ ಸಭಾಮಂಟಪದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಕ್ಕಳ ಆಸಕ್ತಿಗೆ ಪಾಲಕರು ನೀರೆರೆಯಬೇಕು. ಒಳ್ಳೆಯ ಪ್ರಜೆಯಾಗಿಸಲು ಶ್ರಮಿಸಬೇಕು. ಆದರೆ ಸಾಮಾಜಿಕ ಜಾಲತಾಣ, ಮೊಬೈಲ್ ಅತಿಯಾದ ಬಳಕೆ ಮೇಲೂ ಕಡಿವಾಣ ಹಾಕುವ ಅಗತ್ಯವಿದೆ’ ಎಂದರು.
‘ಸಾಮಾಜಿಕ ಜಾಲತಾಣಗಳ ಕಡಿಮೆ ಬಳಕೆಯಿಂದ ತೊಂದರೆಯಿಲ್ಲ. ಆದರೆ ಅತಿಯಾದರೆ ಜೀವನ ಕಷ್ಟವಾಗುತ್ತದೆ. ಮೊಬೈಲ್ ಬಳಕೆ ಕೂಡ ನಿಯಂತ್ರಣ ಅಗತ್ಯವಿದೆ. ಶಾಲೆಯ ಅಭ್ಯಾಸಕಷ್ಟೇ ಮೊಬೈಲ್ ಸೀಮಿತವಾಗುವ ಅಗತ್ಯವಿದೆ. ಮೊಬೈಲ್ ಅತಿ ಬಳಕೆಯಿಂದ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಪರಿವೆ ಮಕ್ಕಳಿಗೆ ಇರುವುದಿಲ್ಲ’ ಎಂದ ಅವರು, ‘ ಸಾಂಸ್ಕೃತಿಕ, ಕ್ರೀಡೆ, ಕಲಾ ಚಟುವಟಿಕೆಗೆ ಸಮಯ ಮೀಸಲಿಡಬೇಕು. ಅಧ್ಯಯನದಲ್ಲಿ ಶ್ರಮ ವಹಿಸಬೇಕು. ಕಲಿಕೆ ಕಡೆ ಆಸಕ್ತಿ ಇರಬೇಕು’ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ, ಕಾರವಾರದ ಪ್ರಧಾನ ನ್ಯಾಯಾಧೀಶೆ ಕವಿತಾ ಶಿವಕುಮಾರ, ಹೆಚ್ಚುವರಿ ನ್ಯಾಯಾಧೀಶೆ ಶೃತಿ ವಿ, ಸಿಪಿಐ ಶಶಿಕಾಂತ ವರ್ಮ, ಬಾಬದಾರ ಪ್ರಮುಖ ಜಗದೀಶ ಗೌಡ, ಜಗದೀಶ ಕುರುಬರ, ಮದನ ಕಟ್ಟೇರ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ ಇತರರಿದ್ದರು. ಬಾಬದಾರ ಪ್ರಮುಖ ಬಸವರಾಜ ಚಕ್ರಸಾಲಿ ಸ್ವಾಗತಿಸಿದರು.
‘246 ವಿಜೇತರಿಗೆ ಬಹುಮಾನ’
ಶರನ್ನವರಾತ್ರಿ ಪ್ರಯುಕ್ತ ದೇವಾಲಯದ ವತಿಯಿಂದ ನಡೆದ ರಂಗವಲ್ಲಿ ಭಕ್ತಿಗೀತೆ ಸಮೂಹ ದೇಶಭಕ್ತಿಗೀತೆ ಶಾಸ್ತ್ರೀಯ ನೃತ್ಯ ಹಳ್ಳಿಯ ಹಾಡು ಕರಕುಶಲ ವಸ್ತುಗಳ ಸ್ಪರ್ಧೆ ಜಾನಪದ ಗುಂಪು ನೃತ್ಯ ಭಗವದ್ಗೀತೆ ಶ್ಲೋಕ ಕಂಠಪಾಠ ಜಾನಪದ ಹಾಡು ಧ್ಯಾನ ಮಾಲಿಕೆ ಸಾಮಾನ್ಯ ಜ್ಞಾನ ಚದುರಂಗ ಅಂಗನವಾಡಿ ಮಕ್ಕಳ ನೃತ್ಯ ಭಾವಗೀತೆ ಆರತಿ ತಾಟು ಫ್ಯಾನ್ಸಿ ಡ್ರೆಸ್ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ 246 ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.