ADVERTISEMENT

ಈ ವರ್ಷ ಹೆಚ್ಚಾಯ್ತು ಮದ್ಯ ಮಾರಾಟ!

22 ಸಾವಿರ ಬಾಕ್ಸ್ ಹೆಚ್ಚುವರಿ ಬಿಯರ್ ಮಾರಾಟ; ಅಕ್ರಮಕ್ಕೆ ಕಡಿವಾಣ, ಅಧಿಕೃತ ಮಳಿಗೆಗಳಿಗೆ ವ್ಯಾಪಾರ

ದೇವರಾಜ ನಾಯ್ಕ
Published 22 ಮೇ 2019, 1:58 IST
Last Updated 22 ಮೇ 2019, 1:58 IST
   

ಕಾರವಾರ: ಈ ಬಾರಿ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಸ್ವಲ್ಪ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 508 ಬಾಕ್ಸ್ ಭಾರತೀಯ ಮದ್ಯ (ಐಎಂಎಲ್) ಹಾಗೂ 22,024 ಬಾಕ್ಸ್ ಬಿಯರ್ ಹೆಚ್ಚುವರಿ ಮಾರಾಟವಾಗಿವೆ.

2016– 17ರಲ್ಲಿ 9,12,841 ಬಾಕ್ಸ್ ಭಾರತೀಯ ಮದ್ಯ ಹಾಗೂ 5,12,412 ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಅದು ಕಳೆದ ವರ್ಷ ಮತ್ತೆ ಹೆಚ್ಚಳವಾಗಿತ್ತು. 2017– 18ರಲ್ಲಿ ಭಾರತೀಯ ಮದ್ಯ 9,41,569 ಬಾಕ್ಸ್ ಹಾಗೂ ಬಿಯರ್ 5,49,740 ಬಾಕ್ಸ್‌ಗೆ ಏರಿತ್ತು. ಅದು ಈ ಬಾರಿ ಮತ್ತಷ್ಟು ಹೆಚ್ಚಳವಾಗಿ, 2018– 19ರಲ್ಲಿ ಭಾರತೀಯ ಮದ್ಯ 9,42,077 ಬಾಕ್ಸ್ ಹಾಗೂ ಬಿಯರ್ 5,71,764 ಬಾಕ್ಸ್ ಮಾರಾಟವಾಗಿದೆ.

ಹಳಿಯಾಳದಲ್ಲಿ ಹೆಚ್ಚು: ಅಬಕಾರಿ ಇಲಾಖೆಯ ಮಾಹಿತಿಯ ಪ್ರಕಾರ ಈ ವರ್ಷ ಹಳಿಯಾಳದಲ್ಲಿ ಹೆಚ್ಚು ಮದ್ಯ ಮಾರಾಟವಾಗಿದೆ. 1,39,509 ಬಾಕ್ಸ್ ಮದ್ಯ ಇಲ್ಲಿ ಮಾರಾಟವಾಗಿದ್ದು, ಇದು ಜಿಲ್ಲೆಯಲ್ಲಿ ಮಾರಾಟವಾದ ಮದ್ಯದಲ್ಲಿ ಅತಿ ಹೆಚ್ಚಾಗಿದೆ. ಇತರ ತಾಲ್ಲೂಕುಗಳಿಗೆ ಹೋಲಿಸಿದರೆ ಕುಮಟಾದಲ್ಲಿ ಅತಿ ಹೆಚ್ಚು, ಅಂದರೆ 1,06,434 ಬಾಕ್ಸ್ ಬಿಯರ್ ಮಾರಾಟವಾಗಿದೆ.

ADVERTISEMENT

ಐಎಂಎಲ್ ಘಟ‌್ಟದ ಮೇಲೆ ಹೆಚ್ಚು: ಜಿಲ್ಲೆಯ ಘಟ್ಟದ ಮೇಲ್ಭಾಗದ ಆರೂ ತಾಲ್ಲೂಕುಗಳಲ್ಲಿ ಒಟ್ಟು 4,81,725 ಬಾಕ್ಸ್ ಐಎಂಎಲ್‌ ಮಾರಾಟವಾಗಿದೆ.ಕರಾವಳಿಯ ಐದು ತಾಲ್ಲೂಕುಗಳಲ್ಲಿ ಒಟ್ಟು 4,60,352 ಬಾಕ್ಸ್ ಮಾರಾಟವಾಗಿದೆ. ಘಟ್ಟದ ಮೇಲ್ಭಾಗದಲ್ಲಿ 2,11,733 ಬಾಕ್ಸ್ ಬಿಯರ್ ಬಿಕರಿಯಾಗಿದೆ. ಕರಾವಳಿಯಲ್ಲಿ ಹೆಚ್ಚು, ಅಂದರೆ 3,60,011 ಬಾಕ್ಸ್ ಮಾರಾಟವಾಗಿದೆ.

ಹೆಚ್ಚಾಗಲು ಕಾರಣವೇನು?: ‘ಸಾಮಾನ್ಯವಾಗಿ ಪ್ರತಿ ವರ್ಷ ಕೂಡ ಮದ್ಯ ಮಾರಾಟದಲ್ಲಿ ಶೇ 5ರಷ್ಟು ಹೆಚ್ಚಳವಾಗುತ್ತದೆ. ಕಳೆದ ವರ್ಷ ಹಾಗೂ ಈ ವರ್ಷ ಚುನಾವಣೆ ಇದ್ದಿದ್ದರಿಂದ ಹೊರ ರಾಜ್ಯಗಳಿಂದ ಅಕ್ರಮವಾಗಿ ಜಿಲ್ಲೆಗೆ ಬರುತ್ತಿದ್ದ ಮದ್ಯಗಳ ಮೇಲೆ ಕಣ್ಣಿಡಲಾಗಿತ್ತು. ಇದರಿಂದಾಗಿ ಅಕ್ರಮ ಮದ್ಯಗಳು ಇಲ್ಲಿಗೆ ಬಂದಿಲ್ಲ. ಇದು ಕೂಡ ಮದ್ಯ ಮಾರಾಟ ಹೆಚ್ಚಳವಾಗಲು ಕಾರಣವಾಗಿದೆ’ ಎನ್ನುತ್ತಾರೆ ಅಬಕಾರಿ ಜಿಲ್ಲಾ ಉಪ ಆಯುಕ್ತ ಎಲ್.ಎ.ಮಂಜುನಾಥ.

‘ಹೊರ ರಾಜ್ಯದ ಮದ್ಯಗಳಷ್ಟೇ ಅಲ್ಲ, ಜಿಲ್ಲೆಯಲ್ಲೂ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ನಮ್ಮ ತಂಡಗಳು ದಾಳಿ ನಡೆಸಿವೆ. ಒಟ್ಟಾರೆಯಾಗಿ, ಅಕ್ರಮ ಮದ್ಯಗಳ ಉತ್ಪಾದನೆ, ಮಾರಾಟ ಹಾಗೂ ಸಾಗಣೆ ಎಲ್ಲಿಯೂ ಆಗದಂತೆ ತಡೆದಿದ್ದೇವೆ. ಇದು ಅಧಿಕೃತ ಮದ್ಯ ಮಾರಾಟ ಮಳಿಗೆಗಳಿಗೆ ಗ್ರಾಹಕರು ಬರುವಂತೆ ಮಾಡಿತು’ ಎಂದು ಅವರು ವಿವರಿಸಿದರು.

ಚುನಾವಣೆಗೂ ಬಳಕೆ!: ‘ಈ ವರ್ಷ ಲೋಕಸಭಾ ಚುನಾವಣೆಗೂ ಮದ್ಯದ ಬಳಕೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಗೋವಾ ಮದ್ಯಗಳು ಸಾಮಾನ್ಯವಾಗಿ ಜಿಲ್ಲೆಯಲ್ಲಿ ಬಳಕೆಗೆ ಬರುತ್ತಿದ್ದವು. ಅಲ್ಲಿಯ ಮದ್ಯಗಳ ದರ ಕಡಿಮೆ ಇದ್ದಿದ್ದರಿಂದ ಇಲ್ಲಿನವರು ಆ ಮದ್ಯಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಹಾಗಾಗಿಲ್ಲ. ಅಬಕಾರಿ ಇಲಾಖೆಯ ಕಣ್ತಪ್ಪಿಸಿ ಗೋವಾ ಮದ್ಯವನ್ನು ಇಲ್ಲಿಗೆ ತರುವುದು ಸಾಹಸವಾಗಿತ್ತು. ಇದರಿಂದಾಗಿ ಅನೇಕರು ಎಂಎಸ್‌ಐಎಲ್‌ನಂಥ ಅಧಿಕೃತ ಮಳಿಗೆಗಳಿಂದಲೇ ಖರೀದಿ ಮಾಡಿ, ಮತದಾರರಿಗೆ ಹಂಚಿರುವುದೂ ಇದೆ’ ಎನ್ನುತ್ತಾರೆ ಪಕ್ಷವೊಂದರ ಸ್ಥಳೀಯ ಕಾರ್ಯಕರ್ತರು.

ಮದ್ಯ ಮಾರಾಟ: ತಾಲ್ಲೂಕುವಾರು ವಿವರ

ತಾಲ್ಲೂಕು; ಐಎಂಎಲ್; ಬಿಯರ್

ಕಾರವಾರ; 32,392;45,761

ಅಂಕೋಲಾ; 83,347;50,321

ಕುಮಟಾ; 1,34,973;1,06,434

ಹೊನ್ನಾವರ; 1,03,351;70,530

ಭಟ್ಕಳ; 1,06,289;86,965

ಶಿರಸಿ; 1,38,876;67,739

ಸಿದ್ದಾಪುರ; 63,272;21,251

ಮುಂಡಗೋಡ; 70,932;26,260

ಯಲ್ಲಾಪುರ; 60,115;19,790

ಹಳಿಯಾಳ; 1,39,509;68,331

ಜೊಯಿಡಾ; 9,021;8,362

ಒಟ್ಟು; 9,42,077; 5,71,764

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.