ADVERTISEMENT

ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಲು ಸಲಹೆ

ಭಟ್ಕಳ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ಮಂಕಾಳ ಎಸ್.ವೈದ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 15:40 IST
Last Updated 7 ಜನವರಿ 2025, 15:40 IST
ಭಟ್ಕಳ ತಾಲ್ಲೂಕು 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾರಾಯಣ ಯಾಜಿ ಮಾತನಾಡಿದರು
ಭಟ್ಕಳ ತಾಲ್ಲೂಕು 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾರಾಯಣ ಯಾಜಿ ಮಾತನಾಡಿದರು   

ಭಟ್ಕಳ: ‘ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್‌ನಿಂದ ದೂರವಿದ್ದು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಸಾಹಿತ್ಯ ಕ್ಷೇತ್ರಕ್ಕೆ ಯುವಕರು ಹೆಚ್ಚು ಬರಬೇಕು‘ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಮಂಗಳವಾರ ಶಿರಾಲಿಯ ಅಳ್ವೆಕೋಡಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಲಾದ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಕನ್ನಡ ಭಾಷೆ ಉಳಿಸಿ ಬೆಳೆಸಲು ನಾವೆಲ್ಲರೂ ಕಟಿಬದ್ಧರಾಗಬೇಕು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ, ಮಹತ್ವ ಇದೆ.  ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ಭಟ್ಕಳದಲ್ಲಿ ಕನ್ನಡ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು‘ ಎಂದರು.

ADVERTISEMENT

ಕನ್ನಡ ಸಾಹಿತಿ ಪರಿಷತ್ತಿನ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ ಮಾತನಾಡಿ, ‘ಕನ್ನಡ ಭಾಷೆಯ ಬೆಳವಣಿಗೆಗೆ ಭಟ್ಕಳದ ವ್ಯಾಕರಣ ಶಾಸ್ತ್ರಜ್ಞ ಭಟ್ಟಾಕಳಂಕನ ಕೊಡುಗೆ ಸಾಕಷ್ಟಿದೆ. ಕನ್ನಡ ಭಾಷೆ ಎಂದಿಗೂ ನಶಿಸಲು ಬಿಡಬಾರದು‘ ಎಂದರು.

ಸಮ್ಮೇಳನಾಧ್ಯಕ್ಷ ನಾರಾಯಣ ಯಾಜಿ, ನಿವೃತ್ತ ನ್ಯಾಯಾಧೀಶ ರವಿ ಎಂ ನಾಯ್ಕ, ಮಾನಾಸತು ಶಂಭು ಹೆಗಡೆ,  ಆರ್.ವಿ ಸರಾಪ್, ಅಳ್ವೆಕೋಡಿ ದೇವಸ್ಥಾನದ ಟ್ರಸ್ಟಿ ನಾರಾಯಣ ದೈಮನೆ ಮಾತನಾಡಿದರು.

ತಾ.ಪಂ ಇಒ ವೆಂಕಟೇಶ ನಾಯಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್ ನಾಯ್ಕ, ಅಳ್ವೆಕೋಡಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಅರವಿಂದ ಪೈ, ಹನುಮಂತ ನಾಯ್ಕ, ಮಾರಿಜಾತ್ರಾ ಸಮಿತಿಯ ಅಧ್ಯಕ್ಷ ರಾಮಾ ಎಂ ಮೊಗೇರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್ ನಾಯ್ಕ, ಶ್ರೀಧರ ಶೇಟ್ ಮುಂತಾದವರಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕರಾದ ಪಾಂಡುರಂಗ ಅಳ್ವೆಗದ್ದೆ ಪುಸ್ತಕ ಪರಿಚಯ ಮಾಡಿದರು. ಪೂರ್ಣಿಮಾ ಕರ್ಕಿಕರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಸಂತೋಷ ಆಚಾರ್ಯ ದ್ವಾರಗಳ ಪರಿಚಯ ಮಾಡಿದರು.

ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಕ್ಷಕಿ ಮಂಜುಳಾ ಶಿರೂರು ನಿರೂಪಿಸಿದರು. ಎಂ ಪಿ ಭಂಡಾರಿ ವಂದಿಸಿದರು. ಶಿಕ್ಷಕಿ ಸವಿತಾ ನಾಯ್ಕ ಅವರ ಭಾವತೋರಣ ಕವನ ಸಂಕಲನ ಮತ್ತು ನಿವೃತ್ತ ನ್ಯಾಯಾಧೀಶ ರವಿ ನಾಯ್ಕ ಅವರ ಭಟ್ಕಳ ಸುಮಗಳು ಹನಿಗವಿತೆಗಳ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

ಸಮಾರಂಭದ ಪೂರ್ವದಲ್ಲಿ ಧ್ಜಜಾರೋಹಣ ನಡೆಸಿ ಸಮ್ಮೇಳನಾಧ್ಯಕ್ಷ ನಾರಾಯಣ ಯಾಜಿ ಅವರನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಮಧ್ಯಾಹ್ನದ ನಂತರ ವಿಚಾರಗೋಷ್ಠಿ, ಕವಿ ಕಾವ್ಯ ಸಮಯ, ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ, ಸಮಾರೋಪ ಮತ್ತು ಸನ್ಮಾನ ನಡೆಯಿತು.

ಭಟ್ಕಳ ತಾಲ್ಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಚಿವ ಮಂಕಾಳ ವೈದ್ಯ ಪುಸ್ತಕ ಬಿಡುಗಡೆ ಮಾಡಿದರು

‘ಸಾಹಿತ್ಯ ಪ್ರಬಲ ಮಾಧ್ಯಮ’

ಭಟ್ಕಳ: ‘ಸಾಹಿತ್ಯ ಎಲ್ಲರ ಹಿತಬಯಸುವ ಪ್ರಬಲ ಮಾಧ್ಯಮ ಜನರನ್ನು ಸುಲಭವಾಗಿ ತಟ್ಟಿಬಿಡುವಂತಹದ್ದು‘ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ 11ನೇ ಭಟ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ನಾರಾಯಣ ಕೃಷ್ಣ ಯಾಜಿ ಶಿರಾಲಿ ಹೇಳಿದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು ‘ಸಾಹಿತಿ ಸತ್ಯವನ್ನೇ ಹೇಳುವಾಗಲೂ ಕೂಡಾ ಜನತೆಗೆ ಪ್ರಿಯವಾಗುವಂತೆ ಹೇಳಬೇಕು ಬರೆಯಬೇಕು ಇಂತಹ ಪ್ರಿಯವನ್ನು ಜಾಣತನದಿಂದ ಹೇಳುವವನೇ ಒಳ್ಳೆಯ ಸಾಹಿತಿ ಆಗಬಲ್ಲ’ ಎಂದರು. ‘ಕನ್ನಡ ಸಾಹಿತ್ಯದ ಪುಸ್ತಕಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರಕಟಗೊಂಡು ನಮ್ಮ ಕನ್ನಡಭಾಷೆಯನ್ನು ಸಮೃದ್ಧಗೊಳಿಸುತ್ತಿವೆ. ಇತ್ತೀಚಿನ ಕೆಲವು ಯುವ ಸಾಹಿತಿಗಳು ಚೆನ್ನಾಗಿ ಬರೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ‘ ಎಂದರು.  ಜನಪದ ಸಾಹಿತ್ಯ ದಾಸ ಸಾಹಿತ್ಯ ವಚನ ಸಾಹಿತ್ಯ ಯಕ್ಷಗಾನ ಇವುಗಳಲ್ಲಿ ಪ್ರತಿಯೊಂದೂ ಕನ್ನಡ ಭಾಷೆ ಬೆಳವಣಿಗೆಗೆ ತನ್ನದೇ ಆದ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿವೆ.  ಇಂಗ್ಲಿಷ್‌ ಭಾಷಾ ವ್ಯಾಮೋಹದಿಂದ ಪೋಷಕರು ಕನ್ನಡ ಭಾಷೆಗೆ ಒಲವನ್ನು ತೋರುತ್ತಿಲ್ಲ. ಸರ್ಕಾರಿ ಶಾಲೆಗಳನ್ನು ಆಧುನಿಕರಣಗೊಳಿಸುವತ್ತ ಗಮನ ಹರಿಸಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.