
ಸಿದ್ದಾಪುರ: ‘ಸಾಹಿತ್ಯವು ಮನುಷ್ಯನ ಅಂತರಂಗವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ. ಲಲಿತ ಪ್ರಬಂಧಗಳು ಕೇವಲ ಹಾಸ್ಯಕ್ಕಷ್ಟೇ ಸೀಮಿತವಲ್ಲ, ಅವು ಬದುಕಿನ ಕಟು ಸತ್ಯಗಳನ್ನು ಅತ್ಯಂತ ಸರಳವಾಗಿ ಮತ್ತು ರಂಜನೀಯವಾಗಿ ವಿವರಿಸುವ ಶಕ್ತಿಯನ್ನು ಹೊಂದಿವೆ’ ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು.
ಪಟ್ಟಣದ ಬಾಲಭವನದಲ್ಲಿ ಕರ್ಜಗಿ ಮನು ವಿಕಾಸ ಸಂಸ್ಥೆ ಸಹಯೋಗದಲ್ಲಿ ಶನಿವಾರ ಲೇಖಕ ರಾಜು ಅಡಕಳ್ಳಿ ಅವರ ಹೊಸ ಸಾಹಿತ್ಯಿಕ ಕೊಡುಗೆಗಳಾದ ‘ಹಾಸ್ಯ ವಿಲಾಸ‘ ಮತ್ತು ‘ರಸಗುಲ್ಲಾ‘ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಇಸ್ರೇಲ್‌ನಂತಹ ಪುಟ್ಟ ದೇಶದಲ್ಲಿ ಓದಿನ ಸಂಸ್ಕೃತಿ ಜೀವನದ ಭಾಗವಾಗಿದೆ. ಕನ್ನಡದಲ್ಲೂ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಕೃತಿಗಳು ಬರಬೇಕು ಮತ್ತು ಓದುವ ಹವ್ಯಾಸ ಬೆಳೆಯಬೇಕು’ ಎಂದು ಆಶಿಸಿದರು.
ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಹಾಸ್ಯ ವಿಲಾಸ ಮತ್ತು ರಸಗುಲ್ಲಾ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಕೃತಿಕಾರ ರಾಜು ಅಡಕಳ್ಳಿ ಮಾತನಾಡಿ, ‘ಈ ಸಮಾರಂಭವು ಕೇವಲ ಪುಸ್ತಕ ಬಿಡುಗಡೆಯಲ್ಲ. ಬದಲಾಗಿ ಅದೊಂದು 'ಪುಸ್ತಕ ಸಂಸ್ಕೃತಿ'ಯ ಭಾಗ’ ಎಂದು ಅಭಿಪ್ರಾಯಪಟ್ಟರು.
ಕಲಾವಿದ ಸತೀಶ ಯಲ್ಲಾಪುರ, ವಕೀಲ ರವಿ ಹೆಗಡೆ ಹೂವಿನಮನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಮನುವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಕರ್ಜಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಎಂ.ಜಿ.ಹೆಗಡೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.