ಕಾರವಾರ: ಆಸ್ತಿ ವಿಭಜನೆಗಾಗಿ ನ್ಯಾಯಾಲಯದ ಮೆಟ್ಟಿಲೇರಿ, ಹಲವು ವರ್ಷ ಕಳೆದಿದ್ದ 30 ಕುಟುಂಬಗಳು ವೈಮನಸ್ಯ ತೊರೆದು, ರಾಜಿ ಸಂಧಾನದ ಮೂಲಕ ಆಸ್ತಿ ವಿವಾದ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ವೇದಿಕೆಯಾಯಿತು.
ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೇರಿದಂತೆ ಜಿಲ್ಲೆಯ 26 ನ್ಯಾಯಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಆಸ್ತಿ ವಿಭಜನೆ ಕಲಹಕ್ಕೆ ತಡೆಬೀಳುವ ಜೊತೆಗೆ ಜೀವನಾಂಶಕ್ಕಾಗಿ ನಡೆಯುತ್ತಿದ್ದ ಪ್ರಕರಣಗಳು ರಾಜಿಯಲ್ಲಿ ಬಗೆಹರಿದವು. ದಾಂಡೇಲಿಯ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚ್ಛೇದನ ಅರ್ಜಿ ಹಿಂಪಡೆದು, ಒಂದಾಗಿ ಜೀವನ ನಡೆಸುವ ಶಪಥಗೈದರು.
426 ಚೆಕ್ ಬೋನ್ಸ್, 445 ಅಪಘಾತ ಪರಿಹಾರ ಪ್ರಕರಣಗಳೂ ರಾಜಿಯಲ್ಲಿ ಕೊನೆಗೊಂಡಿದ್ದು ವಿಶೇಷ ಎನಿಸಿತು. ಒಂದೇ ದಿನ 31,526 ವ್ಯಾಜ್ಯ ಪೂರ್ವ ಮತ್ತು 5,202 ವಿಚಾರಣೆ ಬಾಕಿ ಪ್ರಕರಣ ಸೇರಿ ಒಟ್ಟು 36,728 ಪ್ರಕರಣಗಳು ಮಾತುಕತೆ ಮೂಲಕ ಬಗೆಹರಿದವು.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಯಣ್ಣ ಬಿ.ಎಲ್ ಹಾಗೂ ಜಿಲ್ಲಾ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಬ್ಯಾಂಕ್ ಸಾಲ ಮರುಪಾವತಿ, ಪರಿಹಾರ, ವಿಮೆ ಮೊತ್ತ, ದಂಡ ಸೇರಿದಂತೆ ₹37.70 ಕೋಟಿ ಮೊತ್ತದ ಹಣ ಸಂಬಂಧಪಟ್ಟ ಕಕ್ಷಿದಾರರಿಗೆ, ಸರ್ಕಾರಕ್ಕೆ ಪಾವತಿಸಲ್ಪಟ್ಟಿತು.
ವಿದ್ಯುತ್, ಆಸ್ತಿ ಕರ ಮತ್ತು ನೀರಿನ ಶುಲ್ಕಕ್ಕೆ ಸಂಬಂಧಿಸಿದ 19,688 ಪ್ರಕರಣಗಳು, 494 ಸಿವಿಲ್ ಪ್ರಕರಣಗಳು, 86 ಕಾರ್ಮಿಕ ವಿವಾದ ಪ್ರಕರಣಗಳು, 166 ಬ್ಯಾಂಕ್ ಪ್ರಕರಣಗಳು ಬಗೆಹರಿದವು.
‘ಲೋಕ ಅದಾಲತ್‌ನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ. ಆಸ್ತಿ ಕಲಹ, ಕೌಟುಂಬಿಕ ಕಲಹ ಪ್ರಕರಣಗಳು ಮಾತುಕತೆ ಮೂಲಕ ಪರಿಹಾರ ಕಂಡಿವೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.