ಕಾರವಾರ: ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಮೀನುಗಾರಿಕೆ ಚಟುವಟಿಕೆಯು ಆ. 1 ರಿಂದ ಪುನರಾರಂಭಗೊಳ್ಳಲಿದೆ. ಮುಂಗಾರು ಅವಧಿಯಲ್ಲಿ ಬಲೆಗೆ ಹೆಚ್ಚು ಬೀಳುವ ಸಿಗಡಿ ಮೀನಿನ ದರ ವಿಪರೀತ ಇಳಿಕೆಯಾಗಿರುವುದು, ಮೀನು ಬೇಟೆ ಆರಂಭಿಸಬೇಕೆ, ಬೇಡವೆ? ಎಂಬ ಚಿಂತೆಗೆ ಮೀನುಗಾರರನ್ನು ತಳ್ಳಿದೆ.
ಕಳೆದ ವರ್ಷ ಪ್ರತಿ ಕೆ.ಜಿಗೆ ಸರಾಸರಿ ₹130 ರಿಂದ ₹145ರ ವರೆಗೆ ಇದ್ದ ದರವು ಈ ಬಾರಿ ₹80ಕ್ಕೆ ಇಳಿಕೆಯಾಗಿದೆ. ಹೆಚ್ಚು ಆದಾಯ ತಂದುಕೊಡುವ ಸಿಗಡಿ ಮೀನಿನ ದರ ಕುಸಿತ ಕಂಡಿರುವುದರಿಂದ ಮೀನುಗಾರಿಕೆ ಚಟುವಟಿಕೆ ಆರಂಭಿಸಲು ಇಲ್ಲಿನ ಮೀನುಗಾರರು ಹಿಂದೇಟು ಹಾಕುತ್ತಿದ್ದಾರೆ. ಆದರೂ, ಟ್ರಾಲರ್ ದೋಣಿಗಳನ್ನು ಮೀನುಗಾರಿಕೆಗೆ ಸಜ್ಜುಗೊಳಿಸಿ ಇಟ್ಟಿದ್ದಾರೆ.
‘ಮೀನುಗಾರಿಕೆ ಆರಂಭಗೊಳ್ಳುವ ಅವಧಿಯಲ್ಲಿ ಟ್ರಾಲರ್ ದೋಣಿಗಳಿಗೆ ಸಿಗಡಿ ಮೀನು ಲಭಿಸುವುದು ಹೆಚ್ಚು. ಕಪ್ಪೆ ಬೊಂಡಾಸ್ ಸೇರಿದಂತೆ ಇನ್ನಿತರ ಬಗೆಯ ಮೀನುಗಳು ಬಲೆಗೆ ಬಿದ್ದರೂ ಅವು ಕಡಿಮೆ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಸಿಗಡಿ ಮೀನಿನಿಂದಲೇ ಹೆಚ್ಚು ಆದಾಯದ ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ದರವು ಕಡಿಮೆಯಾಗಿದ್ದರಿಂದ ಮೀನುಗಾರಿಕೆಗೆ ತೆರಳಿದರೆ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ’ ಎಂದು ಟ್ರಾಲರ್ ದೋಣಿ ಮಾಲೀಕ ನಾಗರಾಜ ತಾಂಡೇಲ ಹೇಳಿದರು.
‘ಮೀನು ಬೇಟೆಗೆ ಕಡಲಿಗೆ ಇಳಿದರೆ ದಿನವೊಂದಕ್ಕೆ ಕನಿಷ್ಠ 200 ಲೀ. ನಷ್ಟು ಡೀಸೆಲ್ ಖರ್ಚಾಗುತ್ತದೆ. 10 ರಿಂದ 15 ಮಂದಿ ಕಾರ್ಮಿಕರ ಭತ್ಯೆ ಸೇರಿ ದಿನಕ್ಕೆ ಸರಾಸರಿ ₹40 ರಿಂದ ₹50 ಸಾವಿರ ವೆಚ್ಚ ತಗಲುತ್ತದೆ. ಕೆ.ಜಿ ಸಿಗಡಿಗೆ ₹80 ದರವಿದ್ದರೂ ಯೂನಿಯನ್ ಶುಲ್ಕ ಕಡಿತಗೊಳಿಸಿ ₹55 ರಿಂದ ₹60 ಮಾತ್ರ ಬೋಟ್ ಮಾಲೀಕರಿಗೆ ಸೇರುತ್ತದೆ. ಖರ್ಚು ನಿಭಾಯಿಸಿ, ಲಾಭ ಪಡೆಯಲು ಈಗಿನ ದರದಲ್ಲಿ 8 ರಿಂದ 10 ಕ್ವಿಂಟಲ್ ಸಿಗಡಿ ಬೇಟೆಯಾಡಬೇಕು. ಸದ್ಯದ ಸ್ಥಿತಿಯಲ್ಲಿ ಇದು ಅಸಾಧ್ಯದ ಮಾತು’ ಎಂದೂ ಹೇಳಿದರು.
‘ಕಾರವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಗಡಿ ಮೀನನ್ನು ಕೇರಳದ ಕೊಚ್ಚಿನ್‍ಗೆ ಸಾಗಿಸಿ, ಅಲ್ಲಿಂದ ಜಪಾನ್, ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಮೀನುಗಾರಿಕೆ ಆರಂಭವಾಗುವುದಕ್ಕೆ ಮುಂಚಿತವಾಗಿ ವಿದೇಶಗಳಿಂದ ಸಿಗಡಿಗೆ ಬೇಡಿಕೆ ಇರುತ್ತಿತ್ತು. ಈ ಬಾರಿ ಬೇಡಿಕೆ ಇಲ್ಲ ಎಂದು ರಫ್ತು ಕಂಪನಿಗಳು ಹೇಳುತ್ತಿವೆ. ಹೀಗಾಗಿ ದರವೂ ಇಳಿಕೆಯಾಗಿದೆ’ ಎಂದು ರಫ್ತು ಉದ್ಯಮಿ ರಫೀಕ್ ಮೋಕಾ ‘ಪ್ರಜಾವಾಣಿ’ಗೆ ತಿಳಿಸಿದರು.
ಮೀನನ್ನು ರಫ್ತು ಉದ್ಯಮಿಗಳು ಯೂನಿಯನ್ ಮುಖಾಂತರ ಖರೀದಿಸುತ್ತಿದ್ದು ಸಿಗಡಿ ದರ ಏರಿಕೆ ಮಾಡುವಂತೆ ಒತ್ತಾಯಿಸಿದ್ದೇವೆ. ಕಡಿಮೆ ದರಕ್ಕೆ ಖರೀದಿಸಿದರೆ ಮೀನುಗಾರಿಕೆಗೆ ತೆರಳುವ ಆಸಕ್ತಿ ಕಳೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ–ರಾಜು ತಾಂಡೇಲ ಅಧ್ಯಕ್ಷ ಪರ್ಸಿನ್ ಬೋಟ್ ಯೂನಿಯನ್
ಸಿಗಡಿ ಮೀನು ಸಂಸ್ಕರಣೆಗೆ ಕೇರಳದಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ದೇಶದ ರಫ್ತು ಆಮದು ನೀತಿಯ ವ್ಯತ್ಯಾಸದಿಂದಲೂ ವಿದೇಶಗಳಿಂದ ಬೇಡಿಕೆಯೂ ಕಡಿಮೆಯಾಗಿದೆ. ಇದರಿಂದ ರಫ್ತು ಕಂಪನಿಗಳು ಖರೀದಿಗೆ ಆಸಕ್ತಿ ತೋರುತ್ತಿಲ್ಲ–ರಫೀಕ್ ಮೋಕಾ ರಫ್ತು ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.