ಕಾರವಾರ: ರಾಜ್ಯ ಸಾರಿಗೆ ಸಂಸ್ಥೆಯು ಗಡಿಭಾಗ ಕಾರವಾರದಿಂದ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಮಾರ್ಗಗಳ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದರ ಲಾಭ ಪಡೆಯಲು ಮುಂದಾಗಿದೆ.
ಕಾರವಾರ–ಪುಣೆ ನಡುವೆ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸಂಚಾರದಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿದ್ದು, ಈಗ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯು ಪುಣೆಯಿಂದ ನಿತ್ಯ ಕಾರವಾರಕ್ಕೆ ಬಸ್ ಸಂಚಾರವನ್ನು ಬುಧವಾರದಿಂದ ಆರಂಭಿಸಿದೆ. ನಿತ್ಯ ಮುಂಜಾನೆ 6.30ಕ್ಕೆ ಪುಣೆಯಿಂದ ಹೊರಟು ಸಂಜೆ 7 ಗಂಟೆಗೆ ಕಾರವಾರ ತಲುಪುವ ಬಸ್ ಇಲ್ಲಿಂದ ಮರುದಿನ ಮುಂಜಾನೆ 7.30ಕ್ಕೆ ಪುಣೆಗೆ ಮರಳಲಿದೆ.
ಮೂರು ದಶಕದ ಬಳಿಕ ಕಾರವಾರಕ್ಕೆ ಬಂದ ಮಹಾರಾಷ್ಟ್ರ ಬಸ್‌ನ್ನು ಸದಾಶಿವಗಡ ಭಾಗದ ಕೆಲವರು ಅದ್ದೂರಿಯಾಗಿ ಬರಮಾಡಿಕೊಂಡರು. ಬಸ್‌ನ ಚಾಲಕ, ನಿರ್ವಾಹಕರಿಗೆ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಕಾರವಾರದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಸಂಚರಿಸುತ್ತಿದ್ದ ಮೂರು ಬಸ್‌ಗಳನ್ನು ಕೋವಿಡ್ ಬಳಿಕ ಸ್ಥಗಿತಗೊಳಿಸಲಾಗಿತ್ತು. ಬಳಿಕ ಪ್ರಯಾಣಿಕರಿಂದ ಸಾಕಷ್ಟು ಬೇಡಿಕೆ ಬಂದರೂ ಬಸ್‌ಗಳ ಮರುಸಂಚಾರ ಆರಂಭಗೊಳಿಸದೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
‘ಕಾರವಾರದಿಂದ ಮುಂಜಾನೆ 6.15ಕ್ಕೆ, 6.30ಕ್ಕೆ ಪುಣೆಗೆ ಬಸ್ ಸಂಚರಿಸುತ್ತಿತ್ತು. 8 ಗಂಟೆಗೆ ಪಿಂಪ್ರಿಗೆ, 8.30ಕ್ಕೆ ಕೊಲ್ಲಾಪುರಕ್ಕೆ, 10.30ಕ್ಕೆ ಮುಂಬೈಗೆ ಬಸ್ ಸಂಚಾರ ನಡೆಯುತ್ತಿತ್ತು. ಇವೆಲ್ಲ ಬಸ್‌ಗಳು ಸ್ಥಗಿತಗೊಂಡು ಹಲವು ಕಾಲವಾಗಿದೆ. ಮಧ್ಯಾಹ್ನ 2.15ಕ್ಕೆ ಕಾರವಾರದಿಂದ ಹೊರಡುವ ಕಾರವಾರ–ಠಾಣಾ ಬಸ್‌ಗೆ ಪ್ರಯಾಣಿಕರಿಂದ ಬಹುಬೇಡಿಕೆ ಇತ್ತು. ಈ ಬಸ್‌ನ್ನು ಸಕಾರಣವಿಲ್ಲದೆ ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಯಾಣಿಕ ಗಜಾನನ ರಾಣೆ ದೂರಿದರು.
ಪ್ರಯಾಣಿಕರು ಹೆಚ್ಚಿರುವ ಮಾರ್ಗಗಳಿಗೆ ಕಳೆದೊಂದು ವರ್ಷದಿಂದ ಬಸ್‌ಗಳ ಸಂಚಾರ ಪುನರಾರಂಭಗೊಂಡಿದ್ದು ಹಂತ ಹಂತವಾಗಿ ಉಳಿದ ಬಸ್ ಬಿಡಲು ಪ್ರಯತ್ನಿಸಲಾಗುತ್ತಿದೆಬಸವರಾಜ ಅಮ್ಮನವರ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ
‘ಶಕ್ತಿ’ ಕಳೆದುಕೊಂಡ ಸಾರಿಗೆ ಸಂಸ್ಥೆ
‘ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ‘ಶಕ್ತಿ ಯೋಜನೆ’ ಜಾರಿಗೆ ತಂದಿದ್ದೇವೆ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಪ್ರಯಾಣಿಕರ ಬೇಡಿಕೆ ಇದ್ದರೂ ಆದಾಯ ತಂದುಕೊಡುವ ಮಾರ್ಗದ ಬಸ್ ಸಂಚಾರ ರದ್ದುಗೊಳಿಸಿದೆ. ಕಾರವಾರ–ಪಿಂಪ್ರಿ ನಡುವೆ ಸಂಚರಿಸುವ ಏಕೈಕ ಬಸ್ ಕೂಡ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಪ್ರಯಾಣಿಕರ ಕೊರತೆ ಕಾರಣ ನೀಡಿ ಬೆಳಗಾವಿಯಲ್ಲೇ ಪ್ರಯಾಣ ಮೊಟಕುಗೊಳಿಸುತ್ತಿದೆ. ಪುಣೆ ಠಾಣಾದಲ್ಲಿ ಕಾರವಾರ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಹಿಂದೆ ಹಲವು ಬಾರಿ ಬಸ್ ಸಂಚಾರ ಆರಂಭಿಸಲು ಮನವಿ ಮಾಡಿದ್ದರು. ರಾಜ್ಯ ಸರ್ಕಾರ ಸ್ಪಂದಿಸದೆ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಗೆ ಆದಾಯಕ್ಕೆ ಅವಕಾಶ ಮಾಡಿಕೊಟ್ಟಿದೆ’ ಎನ್ನುತ್ತಾರೆ ಬಿಜೆಪಿ ಮುಖಂಡ ರಾಜೇಶ ನಾಯ್ಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.