ADVERTISEMENT

ಮುಂಡಗೋಡ: ಬೆಳೆ ಬಂದರೂ ಸೂಕ್ತ ಬೆಲೆಯಿಲ್ಲ

ಗೋವಿನ ಜೋಳ ಬೆಳೆದ ರೈತರು ಅತಂತ್ರ: ಚೀಲದಲ್ಲಿ ಕಾಳು ತುಂಬಲೂ ಬಿಡದ ವರುಣ

ಶಾಂತೇಶ ಬೆನಕನಕೊಪ್ಪ
Published 8 ಅಕ್ಟೋಬರ್ 2020, 19:45 IST
Last Updated 8 ಅಕ್ಟೋಬರ್ 2020, 19:45 IST
ಮುಂಡಗೋಡದಲ್ಲಿ ಒಣಗಿಸಲು ಹಾಕಿರುವ ಗೋವಿನಜೋಳದ ರಾಶಿಗೆ ಮಳೆ ನೀರು ನುಗ್ಗದಂತೆ ಸುತ್ತಲೂ ಮಣ್ಣು ಹಾಕಿ ಭದ್ರಗೊಳಿಸುತ್ತಿರುವ ರೈತರು
ಮುಂಡಗೋಡದಲ್ಲಿ ಒಣಗಿಸಲು ಹಾಕಿರುವ ಗೋವಿನಜೋಳದ ರಾಶಿಗೆ ಮಳೆ ನೀರು ನುಗ್ಗದಂತೆ ಸುತ್ತಲೂ ಮಣ್ಣು ಹಾಕಿ ಭದ್ರಗೊಳಿಸುತ್ತಿರುವ ರೈತರು   

ಮುಂಡಗೋಡ: ಕಟಾವಿಗೆ ಬಂದ ಬೆಳೆ ರಕ್ಷಣೆಯ ಚಿಂತೆ ಒಂದೆಡೆಯಾದರೆ, ಬೆಳೆ ಬಂದರೂ ಬೆಲೆ ಇಲ್ಲದಿರುವ ಯೋಚನೆ ಮತ್ತೊಂದೆಡೆ. ಸಾಲದ ಹೊರೆಯಿಂದ ತಕ್ಕ ಮಟ್ಟಿಗೆಯಾದರೂ ಪಾರಾಗಲು, ಭತ್ತ ಬಿಟ್ಟು ಗೋವಿನ ಜೋಳದತ್ತ ಮುಖ ಮಾಡಿದ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ.

ಕಳೆದ ವರ್ಷ ಹೆಚ್ಚಿನ ಹಾನಿ ಅನುಭವಿಸಿದ್ದ ಗೋವಿನ ಜೋಳ ಬೆಳೆಗಾರರು, ಈ ಸಲವಾದರೂ ಕೈ ಹಿಡಿದೀತು ಎನ್ನುವ ಆಶಾಭಾವನೆಯಲ್ಲಿ ಇದ್ದಾರೆ. ಆದರೆ, ದಿನದಿಂದ ದಿನಕ್ಕೆ ಖರೀದಿ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

‘ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ತೆನೆಯು ದಪ್ಪಾಗಲಿಲ್ಲ. ಕಾಳಿನ ಗಾತ್ರವೂ ಚಿಕ್ಕದಾಗಿವೆ. ಫಸಲು ಈಗಾಗಲೇ ಕಟಾವಿಗೆ ಬಂದಿದೆ. ಬೆಳೆ ರಾಶಿ ಮಾಡಲು ಮೋಡ ಕವಿದ ವಾತಾವರಣ ಹಾಗೂ ಸಂಜೆಯ ಮಳೆ ಹೆದರಿಸುತ್ತಿದೆ. ಮಳೆ ಸರಿದರೆ ಮಾತ್ರ, ತೆನೆ ಬಾಗಿ ಬೀಳುತ್ತಿರುವ ಗೋವಿನಜೋಳದ ಬೆಳೆಯನ್ನು ರಕ್ಷಿಸಬಹುದು. ಇಲ್ಲವಾದರೆ ಬೆಳೆ ಬಂದರೂ ಕೈಗೆ ಬರದಂತಾಗುತ್ತದೆ’ ಎಂದು ರೈತ ಶ್ರೀನಿವಾಸ ಹೇಳಿದರು.

ADVERTISEMENT

‘ಕಷ್ಟಪಟ್ಟು ತೆನೆ ಮುರಿದು ರಾಶಿ ಮಾಡಲು ಹಾಕಿದ್ದೇವೆ. ತೆನೆ ಮುರಿದಾಗ ಇದ್ದಂಥ ದರ, ಕಾಳು ಒಣಗಿಸುವ ಹೊತ್ತಿಗೆ ಪ್ರತಿ ಕ್ವಿಂಟಲ್ ಮೇಲೆ ₹ 75ರಿಂದ ₹ 100 ಕುಸಿತವಾಗಿದೆ. ಖರೀದಿ ಮಾಡುವವರು ಬರುವ ಹೊತ್ತಿಗೆ ಈ ದರವೂ ಇರುತ್ತದೆ ಇಲ್ಲವೋ ಗೊತ್ತಿಲ್ಲ. ಚೀಲ ತುಂಬಿ ಮಾರಿದಾಗಲೇ ಲಾಭ ಅಥವಾ ಹಾನಿ ಆಯಿತು ಎಂದು ಗೊತ್ತಾಗುತ್ತದೆ’ ಎನ್ನುತ್ತಾರೆ ರೈತ ಶಂಭುಲಿಂಗ ಕೋಣನಕೇರಿ. ‌

ಬೆಳೆ ಹಾನಿ:

‘ತಾಲ್ಲೂಕಿನ 4,500 ಹೆಕ್ಟೇರ್ ಪ್ರದೇಶದಲ್ಲಿ ಈ ಸಲ ಗೋವಿನಜೋಳ ಬೆಳೆಯಲಾಗಿದೆ. ಕಳೆದ ತಿಂಗಳ ಮಳೆಗೆ 130ರಿಂದ 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಗೋವಿನಜೋಳ ಹಾನಿ ಆಗಿರುವ ಮಾಹಿತಿಯಿದೆ. ಉಳಿದಂತೆ ಬೆಳೆ ಕಟಾವಿಗೆ ಬಂದಿದ್ದು, ಮಳೆ ಕಡಿಮೆಯಾಗಬೇಕಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಮಾಹಿತಿ ನೀಡುತ್ತಾರೆ.

ಬೆಂಬಲ ಬೆಲೆಗೆ ಒತ್ತಾಯ:‘ಸರ್ಕಾರವು ರೈತರ ನೆರವಿಗೆ ಬರಬೇಕು. ಗೋವಿನಜೋಳ ಈ ವರ್ಷ ಕಡಿಮೆ ಪ್ರಮಾಣದಲ್ಲಿದ್ದರೂ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಬೆಳೆಗೆ ಬೆಂಬಲ ಬೆಲೆ ಘೊಷಿಸಿದರೆ ಮಾತ್ರ ರೈತನ ಬೆವರಿಗೆ ಫಲ ಸಿಕ್ಕಂತಾಗುತ್ತದೆ. ಪಕ್ಕದ ಹಾವೇರಿ, ರಾಣೇಬೆನ್ನೂರು, ಕಲಘಟಗಿ ಮಾರುಕಟ್ಟೆಯಲ್ಲಿ ಇರುವ ದರ ಮುಂಡಗೋಡ ತಾಲ್ಲೂಕಿನಲ್ಲಿ ಇಲ್ಲ. ಬೆಳೆ ಬಂದಾಗ ರೈತ ಅನುಭವಿಸುವ ತೊಂದರೆ ದೂರ ಮಾಡಲು, ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು' ಎಂದು ಪ್ರಗತಿಪರ ರೈತ ಶಿವಜ್ಯೋತಿ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.