ಶಿರಸಿ: ಮಳೆ ಹಾಗೂ ಮೋಡ ವಾತಾವರಣದ ಬಿಡುವಿನ ವೇಳೆ ಮೆಕ್ಕೆಜೋಳ ಕಟಾವು ಮಾಡುವ ಅನಿವಾರ್ಯ ಬೆಳೆಗಾರರಿಗೆ ಎದುರಾಗಿದ್ದು, ಯಂತ್ರದ ಮೊರೆ ಹೋಗಿದ್ದಾರೆ. ಆದರೆ ದಲ್ಲಾಳಿಗಳು ಕಟಾವು ಯಂತ್ರಗಳ ಬಾಡಿಗೆ ದರವನ್ನು ದುಪ್ಪಟ್ಟು ಮಾಡಿರುವುದು ಬೆಳೆಗಾರರಿಗೆ ಆರ್ಥಿಕ ಹೊರೆಯಾಗಿದೆ.
ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಪ್ರಸ್ತುತ ಜೋಳದ ತೆನೆಗಳು ಬಲಿತಿದ್ದು, ಕಟಾವು ಆರಂಭಿಸಲಾಗಿದೆ. ಕೂಲಿಕಾರರ ಸಮಸ್ಯೆ ನಡುವೆ ಆಗೀಗ ಬೀಳುವ ಮಳೆಯ ಕಾರಣಕ್ಕೆ ಕಟಾವು ಶ್ರಮದಾಯಕವಾಗಿದ್ದು, ದುಬಾರಿಯಾದರೂ ಬೇಗನೆ ಕಟಾವು ಮುಗಿಸುವ ಯಂತ್ರದ ಮೊರೆ ಹೋಗುತ್ತಿದ್ದಾರೆ. ತಮಿಳುನಾಡಿನಿಂದ ಬಂದ ಹೆಚ್ಚಿನ ಸಂಖ್ಯೆಯ ಕಟಾವು ಯಂತ್ರಗಳು ತಾಲ್ಲೂಕಿನ ಮೆಕ್ಕೆಜೋಳ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಮೂಲ ಮಾಲೀಕರಿಂದ ಕಟಾವು ಯಂತ್ರಗಳನ್ನು ಬಾಡಿಗೆ ಪಡೆದಿರುವ ಮಧ್ಯವರ್ತಿಗಳು ಬಾಡಿಗೆ ದರವನ್ನು ಹೆಚ್ಚಿಸಿರುವುದು ರೈತರಿಗೆ ಸಮಸ್ಯೆಯಾಗಿದೆ.
‘ಮೆಕ್ಕೆಜೋಳ ಕಟಾವು ಮಾಡಲು ಚೈನ್ ಮತ್ತು ಟೈರ್ ಎರಡೂ ಮಾದರಿಯ ಯಂತ್ರಗಳನ್ನು ಬಳಸಲಾಗುತ್ತದೆ. ಪ್ರಸ್ತುತ ಮಳೆ ವಾತಾವರಣ ಮುಂದುವರೆಯುತ್ತಿರುವ ಕಾರಣ ಟೈರ್ ಯಂತ್ರಗಳು ಕೆಸರು ಗದ್ದೆಗೆ ಸೂಕ್ತವಲ್ಲ. ಹಾಗಾಗಿ ಚೈನ್ ಮಾದರಿಯ ಯಂತ್ರಗಳ ಬಳಕೆ ಹೆಚ್ಚಿದೆ. ಇವುಗಳ ದರ ಒಂದು ಗಂಟೆಗೆ ₹3,500 ನಿಗದಿಪಡಿಸಿದ್ದಾರೆ. ಸಾಮಾನ್ಯ ಯಂತ್ರದ ದರ ಸರಾಸರಿ ₹2,500 ಇದೆ. ಇದರಿಂದ ಆರ್ಥಿಕ ಹೊರೆಯಾಗಿದೆ. ಕಳೆದ ವರ್ಷ ಸರಾಸರಿ ₹2 ಸಾವಿರದಲ್ಲಿ ಕಟಾವು ಮಾಡಲಾಗುತ್ತಿತ್ತು’ ಎನ್ನುತ್ತಾರೆ ರೈತರು.
‘ಮಳೆಗೆ ಹೆದರಿ ಬಹುತೇಕ ರೈತರು ಕೊಯ್ಲು ಮಾಡಿ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆ ಸ್ಥಳದಲ್ಲಿಯೇ ಮೆಕ್ಕೆಜೋಳ ಮಾರಾಟವಾಗುವುದರಿಂದ, ಸಾಗಣೆ ವೆಚ್ಚವೂ ಉಳಿಸುವ ಲೆಕ್ಕಾಚಾರದ ರೈತರು ಜಮೀನಿನಲ್ಲಿಯೇ ಮಾರಾಟಕ್ಕೆ ಉತ್ಸಾಹ ತೋರುತ್ತಿದ್ದಾರೆ. ಕೆಲವು ರೈತರಿಗೆ ಜೋಳ ಒಣಗಿಹಾಕಲು ಜಾಗದ ಸಮಸ್ಯೆ ಇದೆ. ಕೆಲವರಿಗೆ ಮಾಡಿದ ಸಾಲ ತೀರಿಸುವ ಜವಾಬ್ದಾರಿ ಇದೆ. ಹೀಗಾಗಿ ಕಟಾವು ಮಾಡಲಾದ ಮೆಕ್ಕೆಜೋಳವನ್ನು ಸ್ಥಳದಲ್ಲಿಯೇ ಕೊಳ್ಳುವ ಭರವಸೆ ನೀಡಿ ಯಂತ್ರಗಳ ಬಾಡಿಗೆ ದರ ಹೆಚ್ಚಿಸಿದ್ದಾರೆ. ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡ ರೈತರಿಗೆ ನಷ್ಟ ಉಂಟಾಗುತ್ತದೆ’ ಎನ್ನುತ್ತಾರೆ ದಾಸನಕೊಪ್ಪದ ರೈತ ಮಹೇಶ ಗೌಡ.
ಪ್ರತಿ ಗಂಟೆಗೆ ₹3,500 ಬಾಡಿಗೆ ದರ ಕಳೆದ ವರ್ಷ ಸರಾಸರಿ ₹2 ಸಾವಿರ ದರ ಅನಿವಾರ್ಯಕ್ಕೆ ಸಿಲುಕಿರುವ ರೈತರು
ಬೇರೆ ಜಿಲ್ಲೆಗಳಂತೆ ಉತ್ತರ ಕನ್ನಡದಲ್ಲೂ ಮೆಕ್ಕೆಜೋಳ ಕಟಾವು ಯಂತ್ರದ ಬಾಡಿಗೆ ದರವನ್ನು ಜಿಲ್ಲಾಧಿಕಾರಿ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವಾದರೆ ಕಟಾವು ಕೂಡ ನಷ್ಟಕ್ಕೆ ಕಾರಣವಾಗುತ್ತದೆರಾಘವೇಂದ್ರ ನಾಯ್ಕ ಕಿರವತ್ತಿ ರೈತ ಮುಖಂಡ
ದಲ್ಲಾಳಿಗಳಿಂದ ದರ ಏರಿಕೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಒಂದು ಎಕರೆ ಮೆಕ್ಕೆಜೋಳ ಕಟಾವು ಮಾಡಲು ₹3 ಸಾವಿರದಿಂದ ₹3500 ರಾಶಿ ಮಾಡಲು ಒಂದು ಟ್ರ್ಯಾಕ್ಟರ್‌ಗೆ 1500 ಮೆಕ್ಕೆಜೋಳ ತೆನೆಯಿಂದ ಕಾಳು ಬೇರ್ಪಡಿಸಲು ₹2 ಸಾವಿರ ಖರ್ಚಾಗುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಕೂಲಿ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಹೀಗಾಗಿ ಯಂತ್ರ ಅವಲಂಬಿಸಿದ್ದೇವೆ. ಆದರೆ ದಲ್ಲಾಳಿಗಳು ಈ ಯಂತ್ರಗಳ ಬಾಡಿಗೆ ದರವನ್ನೂ ಏರಿಸಿದ್ದು ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಬನವಾಸಿಯ ರೈತ ಚಂದ್ರಶೇಖರ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.