ADVERTISEMENT

ಮಲೆನಾಡು ಹಬ್ಬದಲ್ಲಿ ಪ್ರಮೀಳೆಯರ ಸಂಭ್ರಮ

ಹೂ ಗಿಡಗಳು, ತರಕಾರಿ ಬೀಜ, ಗ್ರಾಮೀಣ ಸೊಗಡಿನ ತಿನಿಸು ವಿನಿಮಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 13:34 IST
Last Updated 24 ಜೂನ್ 2019, 13:34 IST
ಮಲೆನಾಡು ಮೇಳದಲ್ಲಿ ವ್ಯಾಪಾರಸ್ಥರು, ಗ್ರಾಹಕರು ಇಬ್ಬರೂ ಮಹಿಳೆಯರೇ
ಮಲೆನಾಡು ಮೇಳದಲ್ಲಿ ವ್ಯಾಪಾರಸ್ಥರು, ಗ್ರಾಹಕರು ಇಬ್ಬರೂ ಮಹಿಳೆಯರೇ   

ಶಿರಸಿ: ಮುಂಗಾರು ಮಳೆಯ ಎದುರಿನಲ್ಲಿ ಹಸಿರು ಹೊತ್ತು ಬರುವ ಪ್ರಮೀಳೆಯರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಮಲೆನಾಡು ಹಬ್ಬ ಸೋಮವಾರ ಇಲ್ಲಿ ಉತ್ಸಾಹದಿಂದ ಜರುಗಿತು.

ವನಸ್ತ್ರೀ ಸಂಘಟನೆಯು ಟೀಡ್ ಯಲ್ಲಾಪುರ, ನಮ್ಮ ಭೂಮಿ ಕುಂದಾಪುರ, ಸ್ನೇಹಕುಂಜ ಹೊನ್ನಾವರದ ಸಹಯೋಗದಲ್ಲಿ ಆಯೋಜಿಸಿದ್ದ 19ನೇ ವರ್ಷದ ಮಲೆನಾಡು ಮೇಳದಲ್ಲಿ 25ಕ್ಕೂ ಮಳಿಗೆಗಳಿದ್ದವು. ಎಲ್ಲ ಮಳಿಗೆಗಳಲ್ಲೂ ಮಹಿಳೆಯರೇ ವ್ಯಾಪಾರಸ್ಥರು. ಗ್ರಾಹಕರಲ್ಲೂ ಬಹುಸಂಖ್ಯಾತರು ಮಹಿಳೆಯರೇ.

ಹಲಸಿನ ಹಪ್ಪಳ, ಚಿಪ್ಸ್, ಮಿಡಿ ಉಪ್ಪಿನಕಾಯಿ, ಲಿಂಬು ಉಪ್ಪಿನಕಾಯಿ, ಸುಕ್ಕೇಳಿ, ಲವಂಗ, ಜಾಯಿಕಾಯಿ, ನೆಲ್ಲಿಪುಡಿ, ಸೋಪಿನಪುಡಿ, ಕಷಾಯ ಪುಡಿ, ಔಷಧ ಎಣ್ಣೆ, ಮುರುಗಲು ಎಣ್ಣೆ, ಸಣ್ಣ ಮೆಣಸು, ಮಗೆಕಾಯಿ, ಅರಿಸಿನ, ಮಜ್ಜಿಗೆ ಮೆಣಸು, ಹೂ ಗಿಡದ ಹೆಣೆಗಳು, ಡೇರೆ ಗಡ್ಡೆ,ಹಣ್ಣು–ಹಂಪಲು, ಗಡ್ಡೆ–ಗೆಣಸು, ಕುರುಕಲು ತಿನಿಸು ಹೀಗೆ ಹಳ್ಳಿಯ ವಿಶೇಷತೆಗಳನ್ನು ಹೊತ್ತು ತಂದಿದ್ದ ಮಹಿಳೆಯರು, ನಗರವಾಸಿಗಳ ಮನಗೆದ್ದರು.

ADVERTISEMENT

ಭಂಡಾರಕೇರಿ, ಅಶೀಸರ, ಸಂಪೇಸರ, ಬಿಸಲಕೊಪ್ಪ, ಕೋಡಿಗಾರ, ಬೆಳಖಂಡ, ಮತ್ತಿಘಟ್ಟ, ಕುಂದಾಪುರದ ನಮ್ಮ ಭೂಮಿ, ಯಲ್ಲಾಪುರದ ಟೀಡ್, ಕಲಗಾರ್, ಸೋಂದಾ, ವಾನಳ್ಳಿ, ಬೊಪ್ಪನಳ್ಳಿ, ಗೋಳಿಕೊಪ್ಪ, ಖೂರ್ಸೆ ಕಾಂಪೌಂಡ್, ಹುಲೇಕಲ್, ಹೂತನ ಜಾನ್ಮನೆ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

‘ಕೆಸುವಿನ ಗಡ್ಡೆ, ಗೆಣಸು ಇವೆಲ್ಲ ನಮ್ಮ ಹಿತ್ತಲಿನ ಸಾಂಪ್ರದಾಯಿಕ ಬೆಳೆಗಳು. ಆದರೆ, ಇದಕ್ಕೊಂದು ಮಾರುಕಟ್ಟೆ ಸಾಧ್ಯವಾಗಿದ್ದು ಮಲೆನಾಡು ಮೇಳದಿಂದ. ನಾಲ್ಕಾರು ವರ್ಷಗಳಿಂದ ಮೇಳದಲ್ಲಿ ಭಾಗವಹಿಸಲು ಶುರು ಮಾಡಿದ ಮೇಲೆ, ಬೇರೆ ಜಿಲ್ಲೆಗಳ ಮೇಳಕ್ಕೂ ಹೋಗುತ್ತೇವೆ. ಅಷ್ಟಿಷ್ಟು ಕೈಯಲ್ಲಿ ಕಾಸು ಕಂಡು ಖುಷಿ ಪಡುತ್ತೇವೆ’ ಎಂದು ವಾನಳ್ಳಿಯ ವರದಾ ಮತ್ತು ಪಾರ್ವತಿ ಮರಾಠಿ ಹೇಳಿದರು.

ಅಡವಿ ಅಡುಗೆ ಸ್ಪರ್ಧೆಯಲ್ಲಿ ಮುರುಗಲು ಸಿಪ್ಪೆ ಗೊಜ್ಜು, ಚಕ್ಕೆ ಹಣ್ಣಿನ ಪೇಡೆ, ನೇರಳೆ ಹಣ್ಣಿನ ಗೊಜ್ಜು, ಕಾಡು ಅರಿಶಿನದ ಹಲ್ವ, ಔಡಲಕಾಯಿ ತಂಬಳಿ, ಹಾಲು ಬೆಳ್ಳಿ ಬೇರಿನ ಹಲ್ವ, ನೆಲ್ಲಿಕಾಯಿ ಜಾಮ್, ವಾಟೆಹುಳಿ ಚಟ್ನಿ ಪುಡಿ, ಬೇವಿನ ಸಪ್ಪಿನ ಚಟ್ನಿಪುಡಿ, ಮುರುಗಲ ಸಾರು, ಗಂಧದ ಕುಡಿ ಚಟ್ನಿ, ಚಕ್ರಮುನಿ ಸಪ್ಪಿನ ಸೂಪ್, ಚಿಟ್ ಬದನೆಕಾಯಿ ಪಲ್ಯ ಹೀಗೆ ಒಂದಕ್ಕಿಂತ ಒಂದು ಬಾಯಲ್ಲಿ ನೀರೂರಿಸುವಂತಿದ್ದವು.

ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ವಾಸುದೇವ ಕಾರ್ಯಕ್ರಮ ಉದ್ಘಾಟಿಸಿದರು. ಆಹಾರ ಎಂದರೆ ಒಂದು ಸಂಸ್ಕೃತಿ, ಜ್ಞಾನ, ಜೀವನ ಶೈಲಿಯಾಗಿದೆ. ಆದರೆ, ಈಗಿನ ಸಿದ್ಧ ಆಹಾರ ಸಂಸ್ಕೃತಿಯಿಂದ ಸಾಂಪ್ರದಾಯಿಕ ಆಹಾರ ನಶಿಸುತ್ತಿದೆ. ಇದರಿಂದ ಆರೋಗ್ಯ ಹದಗೆಡುತ್ತಿದೆ. ಸಸ್ಯಜನ್ಯ ಉತ್ಪನ್ನಗಳು ಮತ್ತು ಅಡವಿ ಆಹಾರಕ್ಕೆ ಆದ್ಯತೆ ನೀಡಬೇಕು ಎಂದರು. ವನಸ್ತ್ರೀ ಸಂಘಟನೆಯ ಟ್ರಸ್ಟಿಗಳಾದ ಸುನೀತಾ ರಾವ್, ಶ್ಯಾಮಲಾ ಹೆಗಡೆ, ಶೈಲಜಾ ಗೋರ್ನಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.