ADVERTISEMENT

ಕುಮಟಾ: ನಿರ್ವಹಣೆ ಕೊರತೆ, ಕೃಷಿ ಸಂಶೋಧನಾ ಕೇಂದ್ರದಲ್ಲಿ ಬೆಳೆಗಿಂತ ಕಳೆಯೇ ಹೆಚ್ಚು!

21ರಲ್ಲಿ ಏಳು ಎಕರೆ ಮಾತ್ರ ಬಳಕೆ, ಸಮರ್ಪಕ ನಿರ್ವಹಣೆ ನಡೆಸದ ಆರೋಪ

ಎಂ.ಜಿ.ನಾಯ್ಕ
Published 28 ಫೆಬ್ರುವರಿ 2024, 4:58 IST
Last Updated 28 ಫೆಬ್ರುವರಿ 2024, 4:58 IST
ಕುಮಟಾದ ಕೃಷಿ ಸಂಶೋಧನಾ ಕೆಂದ್ರ ನಡೆಸುತ್ತಿರುವ ತೋಟದಲ್ಲಿ ತೆಂಗಿನ ಮರಗಳು ಸೊರಗಿರುವುದು
ಕುಮಟಾದ ಕೃಷಿ ಸಂಶೋಧನಾ ಕೆಂದ್ರ ನಡೆಸುತ್ತಿರುವ ತೋಟದಲ್ಲಿ ತೆಂಗಿನ ಮರಗಳು ಸೊರಗಿರುವುದು   

ಕುಮಟಾ: ಪಟ್ಟಣದ ನೆಲ್ಲಿಕೇರಿ ಸಮೀಪದಲ್ಲಿ ಕೃಷಿ ಇಲಾಖೆಯಿಂದ ಲೀಸ್ ಮೇಲೆ ಪಡೆದ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ನಿರ್ವಹಿಸುತ್ತಿರುವ ಭೂಮಿಯು ಸರಿಯಾದ ನಿರ್ವಹಣೆ ಇಲ್ಲದೆ ಬೆಳೆಗಿಂತ ಕಳೆಯೇ ಹೆಚ್ಚಾಗಿ ಬೆಳೆದು ನಿಂತಿದೆ ಎಂಬ ದೂರುಗಳಿವೆ.

ಪಟ್ಟಣದ ನೆಲ್ಲಿಕೇರಿ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಇರುವ ಕೃಷಿ ಸಂಶೋಧನಾ ಕೆಂದ್ರದಲ್ಲಿ ಒಬ್ಬ ಮುಖ್ಯಸ್ಥರು ಹಾಗೂ ಇಬ್ಬರು ಸಹಾಯಕರು ಇದ್ದಾರೆ. ಹಿಂದೆ ಕಚೇರಿ ಆವರಣದಲ್ಲಿದ್ದ ಕೃಷಿ ಡಿಪ್ಲೋಮಾ ಕಾಲೇಜಿಗೆ ಕೃಷಿ ಸಂಶೋಧನಾ ಕೇಂದ್ರ ಮುಖ್ಯಸ್ಥರೇ ಪ್ರಾಂಶುಪಾಲರಾಗಿದ್ದರು. ಆದರೆ ಈಗ ಅದು ಸ್ಥಗಿತಗೊಂಡಿದೆ.

ಕೇಂದ್ರದ ತೋಟದಲ್ಲಿ ಖಾಸಗಿಯಾಗಿ ಮೂವರು ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಕೇಂದ್ರದ 21 ಎಕರೆ ತೋಟದಲ್ಲಿ ಮಳೆಗಾಲದಲ್ಲಿ ಭತ್ತ, ಬೇಸಿಗೆಯಲ್ಲಿ ಸೆಣಬು, ಉದ್ದು, ಅಡಿಕೆ, ತೆಂಗು, ಬಾಳೆ ಬೆಳೆಯುತ್ತಿದ್ದರೂ ಅವುಗಳ ನಿರ್ವಹಣೆ ಸರಿಯಿಲ್ಲದೆ ಸೊರಗಿವೆ.

ADVERTISEMENT

ತೋಟದಲ್ಲಿ ಸಾಕಷ್ಟು ನೀರಿನ ಸೌಲಭ್ಯವಿರುವ ಕೊಳವೆ ಬಾವಿ ಹಾಗೂ ತೆರೆದ ಬಾವಿ ಇದೆ. ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಾಗ ಈ ಬಾವಿಗಳಿಂದ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತದೆ.

‘ಏಳು ಎಕರೆಯಲ್ಲಿ ಮಾತ್ರ ಉದ್ದು, ಸೆಣಬು, ಮಳೆಗಾಲದಲ್ಲಿ ಭತ್ತ ಬೆಳೆಯಲಾಗುತ್ತದೆ. ಜಮೀನಿನ ಅಕ್ಕಪಕ್ಕದಲ್ಲಿ ತೆಂಗಿನ ಮರಗಳು ಇದ್ದರೂ ಅವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ಉಳಿದ ಜಮೀನು ಖಾಲಿ ಬಿದ್ದಿದೆ. ಲಭ್ಯವಿರುವ ನೀರಿನ ಸೌಲಭ್ಯ ಬಳಕೆ ಮಾಡಿಕೊಂಡು ಭತ್ತ ಹಾಗೂ ವಿವಿಧ ಬೆಳೆಗಳನ್ನು ಬೆಳೆದು ರೈತರಿಗೆ ಮಾದರಿಯಾಗುವಂತೆ ತೋಟ ಅಭಿವೃದ್ಧಿ ಪಡಿಸಲು ಸಾಧ್ಯವಿದೆ’ ಎಂದು ತಾಲ್ಲೂಕಿನ ಬೊಗರಿಬೈಲದ ಪ್ರಗತಿಪರ ಕೃಷಿಕ ನಾರಾಯಣ ನಾಯ್ಕ ದೂರಿದರು.

‘ಮಳೆಗಾಲದಲ್ಲಿ ನೀರಿನ ಮೂಲಕ ಹರಿದು ಬರುವ ಕಳೆಯ ಬೀಜ ಗದ್ದೆಯಲ್ಲಿ ನೆಲೆ ನಿಂತು ಬೆಳೆದಿವೆ. ತೋಟ ಹಿಂದೆ ನಿರ್ಲಕ್ಷ್ಯಕ್ಕೆ ಒಳಗಾದ ಕಾರಣ ಸೊರಗಿದೆ. ಕಳೆದ ವರ್ಷ 85 ಕ್ವಿಂಟಾಲ್ ಭತ್ತ ಬೆಳೆದಿದ್ದೇವೆ. ಬೇಸಿಗೆಯಲ್ಲಿ ಉದ್ದು, ಸೆಣಬು ಬೆಳೆಯುತ್ತೇವೆ’ ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಸ್.ಬಿ.ಜಗ್ಗೀನವರ ಪ್ರತಿಕ್ರಿಯಿಸಿದರು.

ಕುಮಟಾದ ಕೃಷಿ ಸಂಶೋಧನಾ ಕೆಂದ್ರ ನಡೆಸುತ್ತಿರುವ ಉದ್ದಿನ ಗದ್ದೆಯಲ್ಲಿ ಕಳೆ ಬೆಳೆದಿರುವುದು
ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಭತ್ತದ ಬೀಜಗಳನ್ನು ಬೆಳೆಯುವುದು ಕೆಂದ್ರದ ಮುಖ್ಯ ಉದ್ದೇಶವಾಗಿದೆ.
–ಎಸ್.ಬಿ.ಜಗ್ಗೀನವರ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.