ADVERTISEMENT

ಮುಂಡಗೋಡ: ಹೆದ್ದಾರಿ ಪಕ್ಕ ಮಾವು ಮಾರಾಟ ಜೋರು

ತಾಜಾ ಆಪೂಸ್ ಹಣ್ಣು ಲಭಿಸುವ ಹಿನ್ನೆಲೆ: ಗ್ರಾಹಕರಿಂದ ಬಲುಬೇಡಿಕೆ

​ಶಾಂತೇಶ ಬೆನಕನಕೊಪ್ಪ
Published 16 ಏಪ್ರಿಲ್ 2025, 7:21 IST
Last Updated 16 ಏಪ್ರಿಲ್ 2025, 7:21 IST
ಮುಂಡಗೋಡ ತಾಲ್ಲೂಕಿನ ಪಾಳಾ ಸನಿಹದ ರಾಜ್ಯ ಹೆದ್ದಾರಿ ಬದಿ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿರುವುದು
ಮುಂಡಗೋಡ ತಾಲ್ಲೂಕಿನ ಪಾಳಾ ಸನಿಹದ ರಾಜ್ಯ ಹೆದ್ದಾರಿ ಬದಿ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿರುವುದು   

ಮುಂಡಗೋಡ: ರಾಜ್ಯ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನಗಳು ಇಲ್ಲಿ ಒಂದು ಸಲ ನಿಂತು ಹೋಗುತ್ತವೆ. ಹೆದ್ದಾರಿ ಅಕ್ಕಪಕ್ಕ ಬುಟ್ಟಿಗಳಲ್ಲಿ ರಾಶಿರಾಶಿಯಾಗಿ ಹಣ್ಣುಗಳನ್ನು ಇಟ್ಟುಕೊಂಡು, ಕೈಯಲ್ಲೊಂದು ಹಣ್ಣು ಹಿಡಿದು ಪ್ರಯಾಣಿಕರನ್ನು ಆಕರ್ಷಿಸುವ ವ್ಯಾಪಾರಿಗಳು ಗಮನ ಸೆಳೆಯುತ್ತಾರೆ.

ತಾಲ್ಲೂಕಿನ ಪಾಳಾ ಹೋಬಳಿ ವ್ಯಾಪ್ತಿಯ ಪಾಳಾ ಕ್ರಾಸ್‌ನಿಂದ ಮಳಗಿ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಈ ದೃಶ್ಯ ಕಾಣಸಿಗುತ್ತದೆ. ಇಲ್ಲಿ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕೆಲವು ಮಾವಿನ ತೋಟಗಳಿರುವುದರಿಂದ, ತೋಟದ ತಾಜಾ ಹಣ್ಣು ಇಲ್ಲಿ ಸಿಗುತ್ತದೆ ಎಂದು ಪ್ರಯಾಣಿಕರು ಭಾವಿಸುತ್ತಾರೆ. ಈ ಕಾರಣದಿಂದಲೇ ಇಲ್ಲಿ ಹಣ್ಣುಗಳ ಮಾರಾಟ ನಡೆಯುವುದು ಹೆಚ್ಚು. ಕಳೆದ ಕೆಲವು ವರ್ಷಗಳಿಂದ ಈ ಹೆದ್ದಾರಿಯಲ್ಲಿ ಮಾವಿನ ಹಣ್ಣು ಮಾರುವ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ADVERTISEMENT

‘ಪಾಳಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ಆಫೂಸ್‌ ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ. ತಾಲ್ಲೂಕಿನ ಮಾರುಕಟ್ಟೆಯಲ್ಲಿ ಮಾವು ಆಗಮಿಸುವ ಮೊದಲೇ, ಇಲ್ಲಿ ಮಾಗಿದ ಹಣ್ಣುಗಳು ಹೆದ್ದಾರಿ ಬದಿಯ ಬುಟ್ಟಿಯಲ್ಲಿ ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿರುತ್ತವೆ. ಇಲ್ಲಿ ಬೆಳೆಯುವ ಮಾವು ಮುಂಬೈ, ಹುಬ್ಬಳ್ಳಿ ಮಾರುಕಟ್ಟೆಗೆ ಹೋಗುತ್ತದೆ’ ಎನ್ನುತ್ತಾರೆ ಕೃಷಿಕ ಶಿವಕುಮಾರ ಪಾಟೀಲ.

‘ಪ್ರತಿದಿನ ಸಂಜೆ ಪಾಳಾ ಕ್ರಾಸ್‌ನಲ್ಲಿ ಮಾವಿನ ಕಾಯಿಗಳ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಮಾವಿನ ತೋಟವನ್ನು ಫಸಲು ಗುತ್ತಿಗೆ ಹಿಡಿದವರು, ಹಣ್ಣುಗಳನ್ನು ರಸ್ತೆ ಬದಿ ತಂದು ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಹಾನಗಲ್‌ ತಾಲ್ಲೂಕಿನ ತೋಟಗಳಿಂದಲೂ ತಂದು, ಇಲ್ಲಿ ವ್ಯಾಪಾರ ಮಾಡುತ್ತಾರೆ’ ಎಂದರು.

‘ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ಮಾವಿನ ಹಣ್ಣು ಮಾರುತ್ತಿದ್ದೇನೆ. ಈ ವರ್ಷ ಪ್ರತಿ ಕೆಜಿಗೆ ₹160– 250ರ ವರೆಗೆ ವ್ಯಾಪಾರ ಸದ್ಯ ನಡೆದಿದೆ. ಮುಂದೆ, ದರ ಇಳಿಕೆಯಾಗುವ ಸಾಧ್ಯತೆಯಿದೆ. ಎಂಟು ದಿನಗಳ ಕಾಲ ಅಡಿಯಲ್ಲಿ ಹಾಕಿದ ಮಾವುಗಳನ್ನೇ ಮಾರಾಟ ಮಾಡುತ್ತೇವೆ. ದಿನಗಳು ಕಳೆದಂತೆ ಪೂರ್ತಿ ಮಾಗಿದ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಬೇರೆ ಊರುಗಳಿಂದ ಇಲ್ಲಿ ಹಾದುಹೋಗುವ ಪ್ರಯಾಣಿಕರು ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ’ ಎಂದು ವ್ಯಾಪಾರಿ ಅರ್ಷದ್ ಹೇಳಿದರು.

ಎಚ್ಚರಿಕೆಯಿಂದ ವ್ಯವಹರಿಸಬೇಕು
‘ಪಾಳಾ ಕ್ರಾಸ್ ಬಳಿ ಕಿರಿದಾದ ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ಹಣ್ಣುಗಳನ್ನು ಕೊಂಡುಕೊಳ್ಳಲು ಹೋಗುವಾಗ ಪ್ರಯಾಣಿಕರು ತುಸು ಎಚ್ಚರಿಕೆ ವಹಿಸಬೇಕು. ಕೆಲವೊಮ್ಮೆ ಅವಘಡಗಳು ಸಂಭವಿಸಿದ ಘಟನೆಗಳೂ ಇಲ್ಲಿ ಜರುಗಿವೆ’ ಎನ್ನುತ್ತಾರೆ ಸ್ಥಳೀಯರು. ‘ಕೆಲವು ಬುಟ್ಟಿಗಳಲ್ಲಿ ಸಿಹಿ ಮಾವು ಸಿಕ್ಕರೇ ಇನ್ನೂ ಕೆಲವು ಬುಟ್ಟಿಗಳಲ್ಲಿ ಇನ್ನೂ ಪಕ್ವವಾಗದ ಆದರೆ ಬಣ್ಣ ಮೈದುಂಬಿಕೊಂಡಿರುವ ಹುಳಿ ಮಾವು ಸಹ ತಿಂದಿರುವ ಅನುಭವ ಪ್ರಯಾಣಿಕರಿಗೆ ಬಂದಿರುತ್ತದೆ. ಆರಂಭದಲ್ಲಿ ಸಿಹಿ ಹುಳಿ ಮಾವು ಬಹುತೇಕ ಕಂಡುಬರುತ್ತದೆ. ನಂತರದ ದಿನಗಳಲ್ಲಿ ಮಾಗಿದ ರಸಭರಿತ ಹಣ್ಣುಗಳಿಗೆ ಕೊರತೆಯಿಲ್ಲದಂತೆ ವ್ಯಾಪಾರ ನಡೆಯುತ್ತದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.