ಯಲ್ಲಾಪುರ: ‘ಹಿಂದಿನ ಬಿಜೆಪಿ ಸರ್ಕಾರ ₹2 ಲಕ್ಷ ಕೋಟಿ ಮೊತ್ತದ ಕಾಮಗಾರಿಗೆ ಕೇವಲ ಭೂಮಿಪೂಜೆ ನೆರವೇರಿಸಿ ಹೋಗಿದೆ. ಬಿಜೆಪಿಯವರ ಇಂತಹ ಅವಾಂತರ ಸರಿಪಡಿಸುವುದರಲ್ಲಿಯೇ ನಮ್ಮ ಎರಡು ವರ್ಷ ಕಳೆದುಹೋಯಿತು’ ಎಂದು ಸಚಿವ ಮಂಕಾಳ ವೈದ್ಯ ಆರೋಪಿಸಿದರು.
ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ನಡೆದ ಯಲ್ಲಾಪುರ–ಮುಂಡಗೋಡ–ಬನವಾಸಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಅನುದಾನ ನೀಡುತ್ತಿಲ್ಲ. ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಅನುದಾನ ದೊರೆತಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮ ಹಾಕಿಕೊಳ್ಳಬಹುದಿತ್ತು. ಎಲ್ಲ ಸಮಸ್ಯೆಗಳ ನಡುವೆಯೂ ರಾಜ್ಯವನ್ನು ಸುಸ್ಥಿತಿಯಲ್ಲಿ ನಡೆಸುತ್ತಿದ್ದೇವೆ. ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ’ ಎಂದರು.
‘ಬರುವ ದಿನಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಒಂದೇ ಕಡೆ ಒಂದನೇ ತರಗತಿಯಿಂದ ಪಿಯುಸಿ ವರೆಗಿನ ಶಿಕ್ಷಣ ಒದಗಿಸುವ ಶಾಲೆ ತೆರೆಯುವ, ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಯೋಜನೆ ಇದೆ’ ಎಂದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ‘ಯಾವ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿದೆ ಎನ್ನುವುದು ಮುಖ್ಯವಲ್ಲ. ಬದಲಾಗಿ ತನ್ನ ಅವಧಿಯಲ್ಲಿ ಬಡವರಿಗೆ ಏನು ಮಾಡಿದೆ ಅನ್ನುವುದು ಮುಖ್ಯ. ಕಾಂಗ್ರೆಸ್ ಸರ್ಕಾರ ಬಡಜನರ ಏಳಿಗೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಕೊಟ್ಟ ಮಾತು ಉಳಿಸಿಕೊಂಡಿದೆ’ ಎಂದರು.
ಪದಾಧಿಕಾರಿಗಳಾದ ನಾಗರಾಜ ನಾರ್ವೇಕರ, ರಾಬರ್ಡ್ ದದ್ದಾಪುರಿ, ಸಿ.ಎಫ್. ನಾಯ್ಕ ಮಾತನಾಡಿದರು. ಪ್ರಮುಖರಾದ ಜ್ಯೋತಿ ಪಾಟೀಲ, ಸಲ್ಮಾ ಶೇರ್‌ಖಾನಿ, ಸತೀಶ ನಾಯ್ಕ, ಸರಸ್ವತಿ ಗುನಗಾ, ಎನ್.ಕೆ. ಭಟ್ಟ, ನರ್ಮದಾ ನಾಯ್ಕ, ಪೂಜಾ ನೇತ್ರೇಕರ, ಟಿ.ಸಿ. ಗಾಂವ್ಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿನಾಥ ಗಾಂವ್ಕರ, ರವಿ ಭಟ್ಟ ವಡ್ರಮನೆ, ಬಸವರಾಜ ದೊಡ್ಮನಿ ಇದ್ದರು.
ಡಿಸೆಂಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಏಪ್ರಿಲ್ –ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬಹುದು. ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕುಮಂಕಾಳ ವೈದ್ಯ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.